ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ ಗಣಿಯ ಶಿಲಾ ಸಂಗ್ರಹಾಲಯ

ಚಿನ್ನದ ಗಣಿಗಳ ಖನಿಜದ ನಿಕ್ಷೇಪದ ಮಾದರಿ, 200 ಬಗೆಯ ಶಿಲಾ ಮಾದರಿ
Last Updated 31 ಮೇ 2015, 9:42 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ:  ಸ್ಥಳೀಯ ಹಟ್ಟಿ ಚಿನ್ನದ ಗಣಿ ಭೂ ಅನ್ವೇಷಣೆ ವಿಭಾಗದಲ್ಲಿ ಗಣಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ  ಶಿಲಾ ಸಂಗ್ರಹಾಲಯ ಇದೆ. ಈ ಸಂಗ್ರಹಾಲಯದಲ್ಲಿ ರಾಜ್ಯದ ಬೇರೆ ಬೇರೆ ಪ್ರದೇಶದಿಂದ ಸಂಗ್ರಹಿಸಿದ ಶಿಲೆಗಳ ಮಾದರಿ ಹಾಗೂ  ಪುರಾತನ ಹಾಗೂ ಆಧುನಿಕ  ಗಣಿಗಾರಿಕೆ ಪದ್ದತಿ ಕುರಿತು ತಿಳಿಸುವ ಸಾಧನೆಗಳು ಮತ್ತು ಚಿತ್ರಗಳನ್ನು ಇಲ್ಲಿ ಸಂಗ್ರಹಿಸಿ  ಇಡಲಾಗಿದೆ. 

ಇಲ್ಲಿ ರಾಯಚೂರು, ಚಿತ್ರದುರ್ಗ, ದಾವಣಗೆರೆ,ಗದಗ, ಧಾರವಾಡ, ಯಾದಗಿರಿ, ಕಲಬುರ್ಗಿ, ಶಿಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲದೇ  ಹೊರ ರಾಜ್ಯ ಮತ್ತು ದೇಶಗಳಲ್ಲಿ ವಿವಿಧ ಗಣಿಗಳಿಂದ ಸಂಗ್ರಹಿಸಿದ ಚಿನ್ನ ಮತ್ತು ಇನ್ನಿತರ ಖನಿಜದ ನಿಕ್ಷೇಪಯುಕ್ತ ಶಿಲೆಗಳ ಮಾದರಿ ಇಲ್ಲಿ ನೋಡಲು ಸಿಗುತ್ತವೆ.

 ಸಾವಿರಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ ಎಂಬುದು ದೃಢಪಡಿಸುವ  ಹಳೆಯ ಕಟ್ಟಿಗೆಯ ದಿಮ್ಮಿಗಳು ಇಲ್ಲಿರಿಸಲಾಗಿದೆ. 1955ರಲ್ಲಿ ಡಾ: ರಾಫ್ಟರ್ ಎಂಬ ವಿಜ್ಞಾನಿ ಹಟ್ಟಿ ಗಣಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಇಲ್ಲಿಯ ಮೇನ್‌ ಶಾಫ್ಟ್‌ನ 640 ಅಡಿ ಆಳದಲ್ಲಿ ದೊರೆತ  ಕಟ್ಟಿಗೆಯ ತುಂಡುಗಳನ್ನು ಇಂಗಾಲದ ವಯೋಮಾನ (ಕಾರ್ಬನ್‌ ಡೇಟಿಂಗ್‌) ವಿಧಾನ ಅಳವಡಿಸಿ ಪರೀಕ್ಷೆಗೆ ಒಳಪಡಿಸಿದರು.
 
ಈ ದಿಮ್ಮೆಗಳು 1900 ವರ್ಷಗಳಷ್ಟು ಹಳೆಯದಾಗಿವೆ ಎಂದು ಹೇಳಿದ್ದಾರೆ.  ಇದರಿಂದ ಈ ಭಾಗದಲ್ಲಿ  2 ಸಾವಿರ ವರ್ಷಗಳ ಹಿಂದೆ ಗಣಿಗಾರಿಕೆ ನಡೆದಿದೆ ಎಂದು ಗೊತ್ತಾಗುತ್ತದೆ. ಈ ಶಿಲಾ ಸಂಗ್ರಹಾಲಯದಲ್ಲಿ ಅಂದಾಜು 200 ಬಗೆಯ  ಶಿಲೆಗಳ ಮಾದರಿಗಳನ್ನು ಜೋಡಿಸಿಡಲಾಗಿದೆ. ಬೇರೆ ಬೇರೆ ಶಿಲೆಗಳ ಬಣ್ಣ ಹಾಗೂ  ಗುಣಲಕ್ಷಣಗಳು ಹಾಗೂ ಸ್ವಭಾವದ ಕುರಿತು ಮಾಹಿತಿ ಇಲ್ಲಿ ಸಿಗುತ್ತದೆ.

ಚಿನ್ನದ ನಿಕ್ಷೇಪ ಅಲ್ಲದೇ  ತಾಮ್ರ, ಬೆಳ್ಳಿ ಹಾಗೂ ಶಿಲೈಟ್‌ಗಳಂತಹ ಖನಿಜಗಳು ಒಳಗೊಂಡ ಶಿಲೆಗಳ ಮಾದರಿಗಳು ಇಲ್ಲಿವೆ. 1846ರಲ್ಲಿ ಕೋಲಕತ್ತಾದಲ್ಲಿದ್ದ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ಕಚೇರಿಯ ಬೃಹತ್‌ ಚಿತ್ರವನ್ನು ಇಲ್ಲಿದೆ. ಪುರಾತನ ಕಾಲದಲ್ಲಿ ಚಿನ್ನದ ಅದಿರು ಸಂಸ್ಕರಿಸಲು ಬಳಸುತ್ತಿದ್ದ ರುಬ್ಬುಕಲ್ಲು ಇಲ್ಲಿದೆ. ಈ ರುಬ್ಬುವ ಕಲ್ಲಿನಲ್ಲಿಚಿನ್ನ ಯುಕ್ತ ಅದಿರನ್ನು ಕುಟ್ಟಿ ಪುಡಿ ನಂತರಸೋಸಿ ಚಿನ್ನವನ್ನು ಬೇರ್ಪಡಿಸಲಾಗುತ್ತಿತ್ತು ಎಂದು ಅನ್ವೇಷಣಾ ವಿಭಾಗದ ಹಿರಿಯ ತಜ್ಞರು ಹೇಳುತ್ತಾರೆ. 

ಅಲ್ಲದೇ ಗಣಿಗಾರಿಕೆಯಲ್ಲಿ ಬಳಸಲಾಗುತ್ತಿದ್ದ ಅತ್ಯಾಧುನಿಕ ಯಂತ್ರಗಳ ಮಾದರಿ ಸಂಗ್ರಹಾಲಯದಲ್ಲಿವೆ. ಭೂ ಗರ್ಭದಲ್ಲಿ ಚಿನ್ನದ ಪದರಗಳು ಯಾವರೀತಿ ಹಬ್ಬಿವೆ ಎಂದು ತೋರಿಸುವ ಮಾದರಿ ಇಲ್ಲಿದೆ. ಒಂದು ಸಲ ಈ ಸಂಗ್ರಹಾಲಯದ ಸುತ್ತು ಹಾಕಿದರೆ ಹಟ್ಟಿ ಚಿನ್ನದ ಗಣಿಯ  ಇತಿಹಾಸ ಗೊತ್ತಾಗುತ್ತದೆ. ಪ್ರಾಚೀನ ಕಾಲದಿಂದ ಹಿಡಿದು ಅತ್ಯಾಧುನಿಕವಾಗಿ ಚಿನ್ನದ ಗಣಿಗಾರಿಕೆ ಹೇಗೆ ನಡೆಯಿತು ಎಂಬುದು ಸವಿಸ್ತಾರವಾಗಿ ತಿಳಿದು ಕೊಳ್ಳಬಹುದು.

ಈ ಸಂಗ್ರಹಾಲಯದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ಶಿಲಾಯುಗದಲ್ಲಿ ಆದಿಮಾನವರು  ಬೇಟೆ ಗಾಗಿ ಬಳಸುತ್ತಿದ್ದ ಶಿಲಾ ಯುಧಗಳು, ಮಡಿಕೆ ಹಾಗೂ ಮೂಳೆಗಳು ಈ ಸಂಗ್ರಹಾಲಯದಲ್ಲಿವೆ. ಇವು ಇಲ್ಲಿಗೆ ಸಮೀಪದ ನಿಲೋಗಲ್‌ ಗ್ರಾಮದ ಹತ್ತಿರ  ಭೂ ವಿಜ್ಞಾನಿಗಳು ನಡೆಸಿದ ಅನ್ವೇಷಣೆ ಕಾರ್ಯ ಸಂದರ್ಭದಲ್ಲಿ ದೊರೆತಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT