ಗುರುವಾರ , ಆಗಸ್ಟ್ 22, 2019
25 °C

ಬಾಂಧವ್ಯ ಬೆಸೆಯುವ ‘ರಕ್ಷಾ ಬಂಧನ’

Published:
Updated:
Prajavani

ವಿಜಯಪುರ: ಅಣ್ಣ–ತಂಗಿಯರ ಪ್ರೀತಿಯ ದ್ಯೋತಕವಾದ ‘ರಕ್ಷಾ ಬಂಧನ’ವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಹೋದರಿಯರು ಸಹೋದದರಿಗೆ ರಾಖಿ ಕಟ್ಟಿ, ಬಾಂಧವ್ಯ ಬೆಸೆಯುತ್ತಾರೆ.

ರಕ್ಷಾ ಬಂಧನ ಈ ಬಾರಿ ಸ್ವಾತಂತ್ರ್ಯ ದಿನದಂದೇ ಬಂದಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ತರಹೇವಾರಿ ರಾಖಿಗಳ ಮಾರಾಟ ಜೋರಾಗಿದೆ. ಯುವತಿಯರು ತಮ್ಮ ಇಷ್ಟದ ರಾಖಿಗಳನ್ನು ಖರೀದಿಸುತ್ತಿದ್ದಾರೆ.

ನಗರದ ಪ್ರಮುಖ ಬಡಾವಣೆ, ಮಾರುಕಟ್ಟೆ, ಅಂಗಡಿಗಳಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ಒಂದಕ್ಕಿಂತ ಒಂದು ಆಕರ್ಷಕವಾದ ರಾಖಿಗಳು ಗಮನ ಸೆಳೆಯುತ್ತಿವೆ. ಶಾಲಾ–ಕಾಲೇಜು ವಿದ್ಯಾರ್ಥಿನಿಯರು ಗುಂಪು–ಗುಂಪಾಗಿ ರಾಖಿ ಖರೀದಿಯಲ್ಲಿ ನಿರತರಾಗಿದ್ದಾರೆ. ವಾರದ ಹಿಂದೆಯೇ ರಾಖಿಗಳ ಮಾರಾಟ ಆರಂಭವಾಗಿದ್ದರೂ, ಹಬ್ಬದ ಮುನ್ನಾ ದಿನವಾದ ಬುಧವಾರ ಖರೀದಿ ಭರಾಟೆ ಜೋರಾಗಿತ್ತು.

‘ತರಹೇವಾರಿ ರಾಖಿಗಳು ಬಂದಿದ್ದು, ದಾರ, ಕುಂದನ್ ಗೊಂಡೆ, ಬಳೆ ಮಾದರಿಯ ರಾಖಿಗಳಿಗೆ ಬೇಡಿಕೆ ಹೆಚ್ಚಿದೆ. ಕೃಷ್ಣ, ಸ್ವಸ್ತಿಕ್, ಗಣೇಶ, ಸಾಯಿಬಾಬಿ, ಓಂ ರಾಖಿಗಳೂ ಇವೆ. ಕಡಿಮೆ ಎಂದರೂ ಒಂದು ಸಾವಿರ ಬಗೆಯ ರಾಖಿಗಳು ನಮ್ಮಲ್ಲಿವೆ’ ಎಂದು ವ್ಯಾಪಾರಿ ತಮ್ಮಣ್ಣ ಕಟ್ಟಿಮನಿ ಹೇಳಿದರು.

‘ನಮ್ಮ ಬಳಿ ₹10 ರಿಂದ ₹280ರ ದರದಲ್ಲಿ ರಾಖಿ ಇವೆ. ಆದರೆ, ಈ ವರ್ಷ ವ್ಯಾಪಾರ ಅಷ್ಟಕ್ಕಷ್ಟೇ. ಮಳೆ ಸರಿಯಾಗಿ ಆಗಿಲ್ಲ. ಪ್ರವಾಹ ಬೇರೆ ಬಂದಿದೆ. ಜನರು ಸಂಕಷ್ಟದಲ್ಲಿದ್ದಾರೆ. ಪ್ರತಿ ವರ್ಷ ನಮ್ಮಲ್ಲಿ ಖರೀದಿಸುವವರೇ ಹೆಚ್ಚಾಗಿ ಬರುತ್ತಿದ್ದಾರೆ. ಆದರೂ ವ್ಯಾಪಾರ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಪ್ರತಿ ವರ್ಷ ರಾಖಿ ಖರೀದಿಸುತ್ತೇನೆ. ನಮ್ಮ ಸಹೋದರರ ಜತೆ, ಅವರ ಸ್ನೇಹಿತರಿಗೂ ರಾಖಿ ಕಟ್ಟುತ್ತೇನೆ. ಇದರಿಂದ ಖುಷಿಯಾಗುತ್ತದೆ’ ಎಂದು ರಾಖಿ ಖರೀದಿಸಲು ಬಂದಿದ್ದ ಸ್ನೇಹಾ ಪಾಟೀಲ ಹೇಳಿದರು.

Post Comments (+)