ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಬಾಲ ಕಾರ್ಮಿಕರ ರಕ್ಷಣೆ: ರೈಲ್ವೆ ಹಳಿ ಸಮತಟ್ಟು ಕಾಮಗಾರಿಯಲ್ಲಿ ತೊಡಗಿದ್ದ ಮಕ್ಕಳು

Last Updated 1 ಆಗಸ್ಟ್ 2021, 3:38 IST
ಅಕ್ಷರ ಗಾತ್ರ

ರಾಮನಗರ/ ಚನ್ನಪಟ್ಟಣ: ಚನ್ನಪಟ್ಟಣದ ಶೆಟ್ಟಿಹಳ್ಳಿ ಸಮೀಪ ರೈಲು ಹಳಿ ಸಮತಟ್ಟು ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಏಳು ಬಾಲಕಾರ್ಮಿಕರನ್ನು ಶನಿವಾರ ರಕ್ಷಣೆ ಮಾಡಲಾಗಿದೆ.

ತೆಲಂಗಾಣ ರಾಜ್ಯದ ವಾರಂಗಲ್‌ ಜಿಲ್ಲೆಯವರಾದ 3 ಹೆಣ್ಣು ಹಾಗೂ 4 ಗಂಡು ಮಕ್ಕಳನ್ನು ರಕ್ಷಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿದ್ಯಾರ್ಥಿ ನಿಲಯವೊಂದರಲ್ಲಿ ಆಶ್ರಯ ನೀಡಲಾಗಿದೆ.

ರೈಲು ಹಳಿ ನಿರ್ವಹಣೆ ಕಾಮಗಾರಿಯನ್ನು ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದಿದ್ದು, ಅವರು ತೆಲಂಗಾಣದಿಂದ ಕಾರ್ಮಿಕರನ್ನು ಕರೆತಂದಿದ್ದರು. ಈ ಕಾರ್ಮಿಕರು ತಮ್ಮ ಮಕ್ಕಳನ್ನೂ ಶಾಲೆ ಬಿಡಿಸಿ ಕರೆತಂದು ತಮ್ಮೊಟ್ಟಿಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಒಂದೆರಡು ತಿಂಗಳಿಂದಲೂ ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಸ್ಥಳೀಯರು ಇದನ್ನು ‘ಬಚ್‌ಪನ್‌ ಬಚಾವೊ’ ಆಂದೋಲನದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಂದೋಲನದ ಸದಸ್ಯರು ಕಳೆದೊಂದು ವಾರದಿಂದಲೂ ಮಕ್ಕಳ ಚಲನವಲನಗಳನ್ನು ಗಮನಿಸಿದ್ದರು. ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಶನಿವಾರ ದಾಳಿ ನಡೆಸಿ ರಕ್ಷಣೆ ಮಾಡಿದರು. ದಾಳಿ ಸಂದರ್ಭ ಕೆಲಸ ಮಾಡಿಸುತ್ತಿದ್ದ ಮೇಸ್ತ್ರಿ ಹಾಗೂ ಗುತ್ತಿಗೆದಾರ ಪರಾರಿ ಆಗಿದ್ದಾರೆ.

‘ಬಚ್‌ಪನ್‌ ಬಚಾವೊ’ ಸಮಿತಿ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಕಾರ್ಮಿಕ ಕಾನೂನಿನ ಪ್ರಕಾರ ಇಂತಹ ಅಪಾಯಕಾರಿ ಕೆಲಸಗಳಲ್ಲಿ ಈ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ. ಸಂಬಂಧಿಸಿದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಚನ್ನಪಟ್ಟಣದ ಕಾರ್ಮಿಕ ನಿರೀಕ್ಷಕ ಮುನಿಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT