ಅಬ್ಬನಕುಪ್ಪೆ ಕೆರೆ ಅಂಗಳಕ್ಕೆ ಪುನರ್ಜೀವ!

ಸೋಮವಾರ, ಜೂನ್ 24, 2019
26 °C
ದುರ್ವಾಸನೆ ಬೀರುತ್ತಿದ್ದ ಜಾಗದಲ್ಲೀಗ ಸುಂದರ ಉದ್ಯಾನ ನಿರ್ಮಾಣ

ಅಬ್ಬನಕುಪ್ಪೆ ಕೆರೆ ಅಂಗಳಕ್ಕೆ ಪುನರ್ಜೀವ!

Published:
Updated:
Prajavani

ಬಿಡದಿ (ರಾಮನಗರ): ಮೂಗಿಗೆ ಬಡಿಯುವಷ್ಟು ದುರ್ನಾತ ಬೀರುತ್ತಿದ್ದ ಈ ಕೆರೆಯ ಅಂಗಳವೀಗ ಜನರ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ. ಮುಂಜಾನೆ ಹಾಗೂ ಸಂಜೆ ಇಲ್ಲಿ ಜನರ ದಂಡೇ ನೆರೆಯುತ್ತಿದೆ.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಲಿಂಗೇಗೌಡನ ಕೆರೆ ಅರ್ಥಾತ್‌ ಅಬ್ಬನಕುಪ್ಪೆ ಕೆರೆ ಎರಡು ವರ್ಷದ ಹಿಂದಷ್ಟೇ ಕೊಳಕು ನೀರಿನ ಆಗರವಾಗಿತ್ತು. ಕೈಗಾರಿಕಾ ಪ್ರದೇಶದ ಚರಂಡಿ ನೀರು ಸೇರಿ ಇಡೀ ಪರಿಸರವೇ ಮಲಿನವಾಗಿ ಹೋಗಿತ್ತು. ಆದರೆ ಇಂದು ಅದರ ಸ್ವರೂಪವೇ ಬದಲಾಗಿ ಹೋಗಿವೆ. ಟೊಯೊಟಾ ಮೋಟಾರ್ಸ್‌ ಕಂಪನಿಯು ಇದರ ಪುನರ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕಾಗಿ ಈಗಾಗಲೇ ಸುಮಾರು ₹3 ಕೋಟಿಯಷ್ಟು ಹಣ ವ್ಯಯಿಸಲಾಗಿದ್ದು, ಎಎಸಿಪಿ ಇನ್ಫ್ರಾಸ್ಟ್ರಕ್ಚರ್‌ ಕಂಪನಿಯು ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ.

ಒಟ್ಟು 3 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಇರುವ ಈ ಕೆರೆ ಅಭಿವೃದ್ಧಿ ಕಾರ್ಯ ಆರಂಭಗೊಂಡು ಒಂದೂವರೆ ವರ್ಷ ಕಳೆದಿದೆ. ಜೋಗಿದೊಡ್ಡಿ ಹಾಗೂ ಟೊಯೊಟಾ ಕಡೆಯಿಂದ ಹರಿದುಬರುವ ಚರಂಡಿ ನೀರಿನ ನಿಯಂತ್ರಣಕ್ಕೆ ತಡೆಗೋಡೆಗಳನ್ನು ನಿರ್ಮಿಸಿ, ಅದನ್ನು ಕೊಂಚ ಶುದ್ಧಿಗೊಳಿಸಿ ಕೆರೆಗೆ ಬಿಡಲಾಗುತ್ತಿದೆ. 75 ಮೀಟರ್‌ ಅಳತೆಯ ಜಾಗದಲ್ಲಿ ಜೊಂಡು ಹುಲ್ಲುಗಳನ್ನು ಬೆಳೆಸಲಾಗಿದ್ದು, ಇದು ನೀರಿನಲ್ಲಿರುವ ಕಸಕಡ್ಡಿಗಳನ್ನು ಹಿಡಿದಿಟ್ಟುಕೊಂಡು ಶುದ್ಧ ನೀರನ್ನು ಒಳಗೆ ಬಿಡುತ್ತಿದೆ. ನೀರಿನ ಕಟ್ಟೆಯನ್ನು ಕೊಂಚ ಎತ್ತರಿಸಲಾಗಿದ್ದು, ಮಳೆ ಬಂದು ನೀರಿನ ಹರಿವು ಬಂದಾಗ ಮಾತ್ರ ಕೆರೆಗೆ ನೀರು ಬರುತ್ತಿದೆ. ಇದರಿಂದ ಆದಷ್ಟು ಶುದ್ಧ ಜಲ ಕೆರೆಯ ಅಂಗಳದಲ್ಲಿ ಸಂಗ್ರಹವಾಗತೊಡಗಿದೆ.

ಕೆರೆಯ ನೀರು ಸಂಗ್ರಹಣಾ ಸ್ಥಳವನ್ನು ಗುರುತು ಮಾಡಿ ಅದರ ಸುತ್ತ ಒಳಗೆ ಕಲ್ಲುಗಳು ಹಾಗೂ ಹೊರಗೆ ಮಣ್ಣಿನ ಏರಿಯನ್ನು ನಿರ್ಮಾಣ ಮಾಡಲಾಗಿದೆ. ಈ ಏರಿಯ ಮೇಲೆ ನೆಲಹಾಸು ಹಾಸಿ ವಾಕಿಂಗ್‌ ಪ್ರಿಯರಿಗೆ ಅನುಕೂಲ ಮಾಡಿಕೊಡಲಾಗಿದೆ. 500 ಮೀಟರ್‌ಗಳಷ್ಟು ನಡಿಗೆ ಪಥ ನಿರ್ಮಾಣವಾಗಿದ್ದು, ಅದರ ಸುತ್ತಲೂ 5 ಅಡಿ ಎತ್ತರಕ್ಕೆ ತಂತಿ ಬೇಲಿ ಅಳವಡಿಸಲಾಗಿದೆ. ಇದರಿಂದ ಕೆರೆಯ ಅಂಗಳ ರಕ್ಷಣೆಯಾಗುವ ಜೊತೆಗೆ ನಡಿಗೆ ಪ್ರಿಯರಿಗೂ ಹೆಚ್ಚಿನ ಅನುಕೂಲ ಆಗಿದೆ.

ಕೆರೆಯ ಅಂಗಳವನ್ನು ಪರಿಸರ ಸ್ನೇಹಿ ಜೊತೆಗೆ ಇನ್ನಷ್ಟು ಸುಂದರವನ್ನಾಗಿಸುವ ಪ್ರಯತ್ನಗಳೂ ಇಲ್ಲಿ ನಡೆದಿವೆ. 20X10 ಮೀಟರ್ಸ್‌ ವಿಸ್ತೀರ್ಣದಲ್ಲಿ ಮಕ್ಕಳ ಆಟಕ್ಕೆಂದು ಜಾಗ ಮೀಸಲಿಟ್ಟು ಆಟಿಕೆಗಳನ್ನು ಇಡಲಾಗಿದೆ. ಇದರ ಪಕ್ಕದಲ್ಲೇ 40X20 ಮೀಟರ್ಸ್‌ ಅಳತೆಯಲ್ಲಿ ಹಸಿರು ನೆಲಹಾಸಿನ ಅಂಗಳ ನಿರ್ಮಾಣಗೊಂಡಿದ್ದು, ಕಲ್ಲು ಬೆಂಚುಗಳ ಸಹಿತ ಹಲವು ಸೌಕರ್ಯ ಕಲ್ಪಿಸಲಾಗುತ್ತಿದೆ. ಜೊತೆಗೆ ಜನರ ವಿಶ್ರಾಂತಿಗೆಂದು ಮಂಟಪವನ್ನು ನಿರ್ಮಿಸಲಾಗಿದೆ. ಭದ್ರತಾ ಸಿಬ್ಬಂದಿಯ ಕೊಠಡಿ, ಗೇಟಿನ ವ್ಯವಸ್ಥೆಯೂ ಇದೆ.

ಅಂತರ್ಜಲ ಮಟ್ಟ ಸುಧಾರಣೆ: ‘ಕೆರೆಯ ಅಭಿವೃದ್ಧಿಯಿಂದಾಗಿ ಇಲ್ಲಿನ ಅಂತರ್ಜಲದ ಗುಣಮಟ್ಟ ಸುಧಾರಣೆ ಆಗಲಿದೆ. ಪರಿಸರದ ರಕ್ಷಣೆಗೆ ಜೊತೆಗೆ ಜನರಿಗೆ ಬೇಕಾದ ಮನೋರಂಜನಾ ವ್ಯವಸ್ಥೆಗಳೂ ನಿರ್ಮಾಣ ಆಗುತ್ತಿವೆ’ ಎನ್ನುತ್ತಾರೆ ಟೊಯೊಟಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಹೆಗಡೆ.

‘ರಾಮನಗರವೂ ಸೇರಿದಂತೆ ಇಡೀ ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಹೀಗಾಗಿ ಕೆರೆ ಸಂರಕ್ಷಣೆಗಾಗಿ ಟೊಯೊಟಾ ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ವಿನಿಯೋಗಿಸಿದೆ. ಇದರಿಂದ ಸುತ್ತಲಿನ ಎಲ್ಲ ಜನರಿಗೂ ಹೆಚ್ಚು ಅನುಕೂಲ ಆಗಲಿದೆ’ ಎನ್ನುತ್ತಾರೆ ಅವರು.

ಮೂರ್ತಿ ವಿಸರ್ಜನೆಗೂ ಅನುಕೂಲ

ಗಣೇಶ ಚತುರ್ಥಿ ವೇಳೆ ದೇವರ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸುವುದರಿಂದ ಜಲಮೂಲಕ್ಕೆ ಆಗುವ ಹಾನಿಯೇ ಹೆಚ್ಚು. ಇದನ್ನು ತಪ್ಪಿಸುವ ಸಲುವಾಗಿ ಕೃತಕ ಕಲ್ಯಾಣಿಯನ್ನು ಕೆರೆಯ ಅಂಗಳದಲ್ಲಿಯೇ ನಿರ್ಮಿಸಲಾಗಿದೆ. ಇದಕ್ಕಾಗಿ 18X18 ಮೀಟರ್‌ನಷ್ಟು ಜಾಗವನ್ನು ಬಳಸಿಕೊಳ್ಳಲಾಗಿದೆ. ಒಳಗೆ ಒಳಿಯಲು ಮೆಟ್ಟಲುಗಳು, ಸುತ್ತ ಜಾಲರಿಯ ವ್ಯವಸ್ಥೆಯೂ ಇದೆ.

ಆಗಸ್ಟ್‌ನಲ್ಲಿ ಉದ್ಘಾಟನೆ ಸಾಧ್ಯತೆ

ಉಳಿದೆಲ್ಲ ಕಾಮಗಾರಿಗಳನ್ನು ತುರ್ತಾಗಿ ಮುಗಿಸಿ ಆಗಸ್ಟ್‌ನಲ್ಲಿ ಈ ಕೆರೆ ಹಾಗೂ ಉದ್ಯಾನವನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲು ಯೋಜಿಸಲಾಗಿದೆ.

‘ಉದ್ಘಾಟನೆಯ ಬಳಿಕ ಇದನ್ನು ಸ್ಥಳೀಯ ಆಡಳಿತದ ವಶಕ್ಕೆ ನೀಡಲಾಗುವುದು. ಬಿಡದಿ ಪುರಸಭೆ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬಿಡದಿ ಕೈಗಾರಿಕಾ ಸಂಘದ ಪ್ರತಿನಿಧಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆದಿದೆ. ಯಾರು ಸೂಕ್ತ ನಿರ್ವಹಣೆ ಮಾಡಲು ಒಪ್ಪುತ್ತಾರೋ ಅವರಿಗೆ ಜವಾಬ್ದಾರಿ ವಹಿಸುತ್ತೇವೆ’ ಎಂದು ರಾಜೇಂದ್ರ ಹೆಗಡೆ ತಿಳಿಸಿದರು.

***

ಟೊಯೊಟಾ ತನ್ನ ಸಿಎಸ್‌ಆರ್‌ ಅನುದಾನವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರ ಇದನ್ನು ಸಾರ್ವಜನಿಕರಿಗೆ ಅರ್ಪಿಸಲಾಗುವುದು.

–ರಾಜೇಂದ್ರ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ಟೊಯೊಟಾ ಕಂಪನಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !