ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬೂದುಗುಂಬಳಕ್ಕೆ ಕುದುರಿದ ಬೇಡಿಕೆ

ಜಿಲ್ಲೆಯಲ್ಲಿ ಆಯುಧಪೂಜೆ ಖರೀದಿ ಸಂಭ್ರಮ: ಮಲ್ಲಿಗೆ ಕೆ.ಜಿಗೆ 2 ಸಾವಿರ!
Last Updated 23 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ರಾಮನಗರ: ದಸರಾ ಆಚರಣೆಯ ಪ್ರಮುಖ ಅಂಗವಾದ ಆಯುಧ ಪೂಜೆಗೆ ಇನ್ನೆರಡು ದಿನ ಇರುವಂತೆಯೇ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಚುರುಕು ಪಡೆದಿದ್ದು, ಎಲ್ಲೆಲ್ಲೂ ಬೂದುಗುಂಬಳ ಕಾಯಿಯ ರಾಶಿಯೇ ಕಾಣತೊಡಗಿದೆ.

ಭಾನುವಾರ ಆಯುಧ ಪೂಜೆ ಇದ್ದು, ಅಂದು ಜನರು ತಮ್ಮ ಮನೆಯಲ್ಲಿನ ವಾಹನಗಳು, ಆಯುಧಗಳನ್ನು ಶುಭ್ರಗೊಳಿಸಿ, ಸಿಂಗರಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಈ ಸಂದರ್ಭ ಬೂದುಗುಂಬಳಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಹಬ್ಬದ ಮುನ್ನವೇ ಈ ಕಾಯಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೇಡಿಕೆಯೂ ಕುದುರಿದೆ. ನಗರದ ಎಪಿಎಂಸಿ ಮಾರುಕಟ್ಟೆ, ಹಳೇ ಬಸ್ ನಿಲ್ದಾಣ ವೃತ್ತ, ಎಂ.ಜಿ.ರಸ್ತೆ, ಕನಕಪುರ ವೃತ್ತ, ಕಾಮನಗುಡಿ ವೃತ್ತ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೂದುಗುಂಬಳಗಳನ್ನು ರಾಶಿ ಹಾಕಿಕೊಂಡು ಮಾರಲಾಗುತ್ತಿದೆ. ಜನ ಜಿಟಿ ಮಳೆಯ ನಡುವೆಯೂ ಖರೀದಿಗೆ ಬರುತ್ತಿದ್ದಾರೆ.

ಸರ್ಕಾರಿ ಕಚೇರಿಗಳು, ಬ್ಯಾಂಕುಗಳಿಗೆ ವಾರಾಂತ್ಯ ರಜೆ ಇರುವ ಕಾರಣಕ್ಕೆ ಅಲ್ಲಿ ಶುಕ್ರವಾರವೇ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು. ಹೀಗಾಗಿ ಮಾರುಕಟ್ಟೆಯಲ್ಲಿ ಹೂ-ಹಣ್ಣು ಖರೀದಿ ಜೋರಾಗಿಯೇ ಇತ್ತು. ಸಣ್ಣ ಬೂದಗುಂಬಳದಿಂದ ದೊಡ್ಡ ಗಾತ್ರದ ಕಾಯಿಯವರೆಗೆ ಗಾತ್ರಕ್ಕೆ ತಕ್ಕಂತೆ ಒಂದೊಂದು ಬೆಲೆಗೆ ಮಾರಾಟ ನಡೆಯಿತು. ಕನಿಷ್ಠ 30ರಿಂದ ಗರಿಷ್ಠ 200ರವರೆಗೂ ಇದರ ಬೆಲೆ ಇತ್ತು. ಅಂಗಡಿ ಮುಂಗಟ್ಟುಗಳು, ವಾಹನಗಳ ಮಾಲೀಕರು ಚೌಕಾಸಿ ಮಾಡುತ್ತಲೇ ಕುಂಬಳ ಹಿಡಿದು ಹೊರಟರು.

ಕೋವಿಡ್‌ ಸಂಕಷ್ಟದ ನಡುವೆಯೂ ಹಬ್ಬದ ಸಂಭ್ರಮ ಕಡಿಮೆ ಆದಂತೆ ಇಲ್ಲ. ವಾಹನಗಳು, ಅಂಗಡಿಗಳನ್ನು ಸಾಕಷ್ಟು ಮುಂಚೆಯೇ ಶುಚಿಗೊಳಿಸಿ ಹಬ್ಬಕ್ಕೆ ಅಣಿಯಾಗುವ ಕಾರ್ಯ ನಡೆದಿದೆ. ಈ ನಡುವೆ ಎಂದಿನಂತೆ ಹೂ-ಹಣ್ಣು, ತರಕಾರಿಗಳು ಹಬ್ಬದ ಹಿನ್ನೆಲೆಯಲ್ಲಿ ತುಟ್ಟಿ ಆಗುತ್ತಿವೆ.

ಸಾಮಾನ್ಯ ದಿನಗಳಲ್ಲಿ ಪ್ರತಿ ಮಾರಿಗೆ 20-40 ಬೆಲೆ ಇರುತ್ತಿದ್ದ ಸೇವಂತಿಗೆ ಈಗ 60ರಿಂದ 100ರವರೆಗೆ ಬೆಲೆ ಏರಿಸಿಕೊಳ್ಳುತ್ತಿದೆ. ಕಾಕಡ, ಮಲ್ಲಿಗೆ, ಕನಕಾಂಬರ, ಮರಳೆ, ಗುಲಾಬಿ, ದುಂಡು ಸೇವಂತಿಗೆ ಸೇರಿದಂತೆ ನಾನಾ ಬಗೆಯ ಹೂವುಗಳೂ ಈಗಾಗಲೇ ದುಬಾರಿ ಆಗಿವೆ. ಸಣ್ಣ ಹೂವಿನ ಹಾರಕ್ಕೆ 80-100 ಹಾಗೂ ದೊಡ್ಡ ಹೂವಿನ ಹಾರಕ್ಕೆ 300-400ವರೆಗೂ ಬೆಲೆ ಇದೆ. ಬಾಳೆ ಕಂದು ಜೊತೆಗೆ 30-40ರಂತೆ ಮಾರಾಟ ನಡೆದಿದೆ. ದಿನ ಬಳಕೆಯ ತರಕಾರಿಗಳ ಧಾರಣೆಯೂ ಕೊಂಚ ಏರಿಕೆ ಆಗಿದೆ.

---

ಹಬ್ಬದ ಹಿನ್ನೆಲೆಯಲ್ಲಿ ಮಲ್ಲಿಗೆ, ಕನಕಾಂಬರ, ಸೇವಂತಿಗೆಗೆ ಹೆಚ್ಚಿನ ಬೇಡಿಕೆ ಇದೆ. ಮೂಲ ದರದಲ್ಲೇ ಸಾಕಷ್ಟು ಏರಿಕೆ ಆಗಿದೆ
- ಅರುಣ್‌,ಹೂವಿನ ವ್ಯಾಪಾರಿ, ರಾಮನಗರ

ಮಾರುಕಟ್ಟೆ ಧಾರಣೆ (ಪ್ರತಿ ಕೆ.ಜಿ.ಗೆ- ರೂಪಾಯಿಗಳಲ್ಲಿ)
ಗುಲಾಬಿ; 300-320
ಸುಗಂಧರಾಜ: 300-350
ಮಲ್ಲಿಗೆ; 2000
ಮರಳೆ; 1200
ಏಲಕ್ಕಿ ಬಾಳೆ; 60-70
ಸೇಬು; 120-140
ದ್ರಾಕ್ಷಿ: 120
ಮೂಸಂಬಿ: 100
ಕಿತ್ತಳೆ; 120
ದಾಳಿಂಬೆ: 120-140

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT