ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ದುರಸ್ತಿ ನಿರೀಕ್ಷೆಯಲ್ಲಿ ಹದಗೆಟ್ಟ ರಸ್ತೆಗಳು

Published 6 ನವೆಂಬರ್ 2023, 4:10 IST
Last Updated 6 ನವೆಂಬರ್ 2023, 4:10 IST
ಅಕ್ಷರ ಗಾತ್ರ

ಕನಕಪುರ: ನಗರವನ್ನು ಸುಂದರವಾಗಿಲು ಕೋಟಿ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ ರಸ್ತೆಗಳು ಹದಗೆಟ್ಟಿವೆ. ಕಣ್ಣು ಹಾಯಿಸಿದತ್ತೆಲ್ಲಾ ಗುಂಡಿಗಳೇ ಕಾಣುತ್ತವೆ. ಗುಂಡಿಮಯವಾಗಿರುವ ರಸ್ತೆಗಳಲ್ಲಿ ವಾಹನಗಳ ಸಂಚಾರದ ಜೊತೆಗೆ, ನಡೆದುಕೊಂಡು ಹೋಗುವುದು ಸಹ ದುಸ್ತರವಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದ ನಗರಸಭೆ ವ್ಯಾಪ್ತಿಯ ರಸ್ತೆಗಳ ಸ್ಥಿತಿ ಇದು.

ಒಳ ಚರಂಡಿ ನಿರ್ಮಾಣ, ಕೇಬಲ್ ಅಳವಡಿಕೆ, ನೀರಿನ ಪೈಪ್ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ರಸ್ತೆ ಅಗೆಯುವ ನಗರಸಭೆಯವರು ಮತ್ತು ಕೆಲ ಖಾಸಗಿಯವರು, ಮೇಲ್ನೋಟಕ್ಕೆ ಕಾಣುವಂತೆ ರಸ್ತೆಗೆ ತೇಪೆ ಹಾಕುತ್ತಾರೆ. ಹೀಗಾಗಿ, ಕೆಲ ದಿನಗಳಲ್ಲೇ ರಸ್ತೆಗಳ ತುಂಬಾ ಮಣ್ಣು ಹರಡಿಕೊಂಡು ಕೆಸರುಮಯವಾಗುತ್ತಿದೆ.

ಡಾಂಬರು ರಸ್ತೆ ಮತ್ತು ಕಾಂಕ್ರೀಟ್ ರಸ್ತೆಗಳನ್ನು ಅಗೆದಿರುವುದರಿಂದ ವಾಹನಳಷ್ಟೇ ಅಲ್ಲದೆ, ಪಾದಚಾರಿಗಳು ಸಹ ನಡೆದುಕೊಂಡು ಹೋಗಲು ಒದ್ದಾಡಬೇಕು. ಈ ಕುರಿತು, ಸಾರ್ವಜನಿಕರ ಪ್ರಶ್ನೆಗಳಿಗೆ ನಗರಸಭೆ ಬಳಿ ಉತ್ತರವಿಲ್ಲ. ನಗರದ ಅಭಿವೃದ್ಧಿಗಾಗಿ ಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯರ ಅನುದಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಹಲವು ಯೋಜನೆಗಳಡಿ ನೂರಾರು ಕೋಟಿ ಅನುದಾನ ಬಂದಿದೆ. ಆದರೆ, ರಸ್ತೆಗಳ ಸ್ಥಿತಿ ಮಾತ್ರ ಹೀಗಿದೆ.

ಯೋಜನಾಬದ್ಧವಾಗಿಲ್ಲ

‘ಯಾವುದೇ ನಗರದ ಅಭಿವೃದ್ಧಿಯನ್ನು ಮೊದಲಿಗೆ ಅಳೆಯುವುದು ಅಲ್ಲಿನ ರಸ್ತೆಗಳ ಗುಣಮಟ್ಟ ಮತ್ತು ಅವುಗಳ ಸ್ಥಿತಿಯ ಆಧಾರದ ಮೇಲೆ. ಕನಕಪುರಕ್ಕೆ ಕೋಟಿ ಕೋಟಿ ಹಣ ಬಂದರೂ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಯೋಜನಾ ಬದ್ದವಾಗಿ ಕೆಲಸಗಳು ಆಗುತ್ತಿಲ್ಲ. ರಸ್ತೆ ಅಭಿವೃದ್ಧಿ ಮಾಡುವುದಕ್ಕೂ ಮುಂಚೆ ಆಗಬೇಕಿರುವ ಒಳಚರಂಡಿ, ಚರಂಡಿ ವ್ಯವಸ್ಥೆ, ಮನೆಗಳಿಗೆ ನಲ್ಲಿ, ವಿದ್ಯುತ್‌ ಹಾಗೂ ಸ್ಯಾನಿಟರಿ ಸಂಪರ್ಕ ಕಲ್ಪಿಸಿಲ್ಲ’ ಎಂದು ನಗರದ ನಿವಾಸಿ ಶ್ರೀನಿವಾಸ್ ಹೇಳಿದರು. 

‘ಇದೇ ಕಾರಣಕ್ಕಾಗಿ ಡಾಂಬರು ರಸ್ತೆಗಿಂತಲೂ ಹೆಚ್ಚು ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿದರೂ, ವಿವಿಧ ಕಾಮಗಾರಿಗಳ ನೆಪದಲ್ಲಿ ಅವುಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ನಗರದ ಯಾವುದೇ ರಸ್ತೆಯಲ್ಲಿ ಸುತ್ತಾಡಿದರೂ ಅಂತಹ ಅನುಭವಾಗದೆ ಇರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಲಕ್ಷ್ಯ ಕಾರಣ

‘ಕಾಮಗಾರಿಗಾಗಿ ರಸ್ತೆ ಅಗೆಯಲು ಅನುಮತಿ ನೀಡುವ ನಗರಸಭೆಯವರು, ಅಗೆದವರಿಂದ ಸರಿಯಾಗಿ ಮುಚ್ಚಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅದಕ್ಕಾಗಿ, ಅವರಿಂದ ಇಂತಿಷ್ಟು ಮೊತ್ತದ ಹಣ ಕೂಡ ವಸೂಲಿ ಮಾಡಲಾಗುತ್ತದೆ. ಆ ಹಣದಲ್ಲಿ ರಸ್ತೆ ಮುಂಚೆ ಹೇಗಿತ್ತೊ, ಅದೇ ರೀತಿ ದುರಸ್ತಿ ಮಾಡಿಕೊಡಬೇಕು ಎಂಬ ನಿಯಮವಿದೆ. ಆದರೆ, ಅವುಗಳನ್ನು ಅಧಿಕಾರಿಗಳು ಗಾಳಿಗೆ ತೂರುತ್ತಾರೆ’ ಎಂದು ಮತ್ತೊಬ್ಬ ನಿವಾಸಿ ಸುರೇಶ್ ಬೇಸರದಿಂದ ನುಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಎಲ್ಲಾ ವಾರ್ಡ್‌ಗಳಿಗೂ ನಗರೋತ್ಥಾನ, ನಗರಾಭಿವೃದ್ಧಿ ಸೇರಿದಂತೆ ಹಲವು ರೀತಿಯ ಅನುದಾನ ತಂದು ಕಾಂಕ್ರೀಟ್ ಬಾಕ್ಸ್‌ ಡ್ರೈನ್‌, ಕಾಂಕ್ರೀಟ್ ರಸ್ತೆಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಲಾಗಿದೆ. ಆದರೆ ಎಲ್ಲಾ ರಸ್ತೆಗಳು ಗುಂಡಿಮಯವಾಗಿವೆ. ಪ್ರತಿಯೊಂದು ರಸ್ತೆಯಲ್ಲೂ ಒಂದಲ್ಲ ಒಂದು ಕಾರಣಕ್ಕೆ ಅಗೆದು ರಸ್ತೆಯನ್ನು ಹಾಳು ಮಾಡಲಾಗಿದೆ. ಅಗೆಯುವುದಕ್ಕಾಗಿ ಅಭಿವೃದ್ಧಿ ಮಾಡಬೇಕೇ?’ ಎಂದು ಪ್ರಶ್ನಿಸಿದರು.

‘ಕಾಂಕ್ರೀಟ್‌ ರಸ್ತೆ ನಿರ್ಮಾಣಕ ಮಾಡಬೇಕಾದರೆ ಆ ರಸ್ತೆಯಲ್ಲಿ ಪ್ರತಿ ಮನೆಗಳಿಗೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ವಿದ್ಯುತ್ ಒಳ ಚರಂಡಿ ಸೇರಿದಂತೆ ವಿವಿಧ ರೀತಿಯ ಸಂಪರ್ಕಗಳಿವೆಯೇ ಎಂದು ಪರಿಶೀಲಿಸಿದ ಬಳಿಕ ಅನುಮತಿ ನೀಡಬೇಕು. ಇಲ್ಲದಿದ್ದರೆ, ಅಲ್ಲಿ ಕಾಂಕ್ರೀಟ್ ರಸ್ತೆ ಮಾಡಲೇಬಾರದು. ಆದ್ಯತೆ ಮೇರೆಗೆ ಈ ಕೆಲಸಗಳನ್ನು ಮುಗಿಸಿದ ಬಳಿಕವೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮುಚ್ಚದವರ ವಿರುದ್ಧ ಕ್ರಮ ಕೈಗೊಳ್ಳಬೇಕು’

‘ರಸ್ತೆ ಅಭಿವೃದ್ಧಿ ಮಾಡುವುದಕ್ಕೂ ಮುಂಚೆ ಅಲ್ಲಿ ಅವಶ್ಯವಿರುವ ಅಗತ್ಯ ಸಂಪರ್ಕಗಳನ್ನು ಪೂರ್ಣಗೊಳಿಸಬೇಕು. ನಂತರದಲ್ಲಿ ಅಭಿವೃದ್ಧಿ ಮಾಡಬೇಕು. ಬಳಿಕ ರಸ್ತೆ ಅಗೆಯಲು ಯಾರಿಗೂ ಅವಕಾಶ ಕೊಡಬಾರದು. ಅಗೆಯುವುದಕ್ಕೆ ಮುಂಚೆ ನಗರಸಭೆಯಿಂದ ಅನುಮತಿ ಪಡೆಯಬೇಕೆಂದು ಕಾನೂನು ಇದೆ. ಒಂದು ವೇಳೆ ಅಗೆಯಲು ಅವಕಾಶ ಕೊಟ್ಟರೆ ನಂತರದಲ್ಲಿ ಗುಂಡಿಯನ್ನು ವೈಜ್ಞಾನಿಕವಾಗಿ ಮುಚ್ಚಬೇಕು. ಆದರೆ ನಗರಸಭೆಯವರ ನಿರ್ಲಕ್ಷ ಮತ್ತು ಬೇಜವಾಬ್ದಾರಿಯಿಂದ ಅಭಿವೃದ್ಧಿಗೊಂಡಿದ್ದ ರಸ್ತೆಗಳು ಹದಗೆಟ್ಟಿವೆ. ರಸ್ತೆ ಅಗೆದವರು ಮತ್ತು ಮುಚ್ಚಿಸುವಲ್ಲಿ ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಗರಸಭೆಯ 22ನೇ ವಾರ್ಡ್ ಸದಸ್ಯ ಸ್ಟುಡಿಯೋ ಚಂದ್ರು ಆಗ್ರಹಿಸಿದರು. ‘ಸರಿಯಾದ ಪ್ಲಾನಿಂಗ್ ಮಾಡಬೇಕು’ ‘ಅಭಿವೃದ್ಧಿಗಾಗಿ ನಗರಸಭೆಗೆ ಕೋಟಿ ಕೋಟಿ ಹಣ ಬರುತ್ತಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ. ರಸ್ತೆ ಅಭಿವೃದ್ಧಿ ಕೆಲಸಗಳು ಗುಣಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಆಗುತ್ತಿಲ್ಲ. ರಸ್ತೆ ನಿರ್ಮಾಣ ಮಾಡುವ ಮುಂಚೆ ಚರಂಡಿ ನೀರು ಒಳಚರಂಡಿ ಮತ್ತು ರಸ್ತೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಪ್ಲಾನಿಂಗ್ ಮಾಡಬೇಕು. ಕನಕಪುರದಲ್ಲಿ ಆ ರೀತಿ ಮಾಡದಿರುವುದಿಂದ ರಸ್ತೆಗಳನ್ನು ಅಗೆಯಲಾಗುತ್ತಿದೆ. ಇದರಲ್ಲಿ ಸಾರ್ವಜನಿಕರ ತಪ್ಪಿನ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ’ ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ್ ಹೇಳಿದರು.

ಅಗೆಯುವುದು ನಮ್ಮ ಗಮನಕ್ಕೂ ಬರುತ್ತಿಲ್ಲ: ಪೌರಾಯುಕ್ತ

‘ನಗರದ ಅಭಿವೃದ್ಧಿಗಾಗಿ ನಗರಸಭೆಯು ಕನಸುಯೋಜನಾಬದ್ಧವಾಗಿ ಕೆಲಸ ಮಾಡುತ್ತಿದೆ. ಆದರೆ ನಮ್ಮ ಗಮನಕ್ಕೂ ತಾರದೆ ಸಾರ್ವಜನಿಕರು ಮತ್ತು ಒಳಚರಂಡಿ ಕಾಮಗಾರಿ ಮಾಡುವವರು ರಸ್ತೆಗಳನ್ನು ಅಗೆಯುತ್ತಿದ್ದಾರೆ. ಮುಂದೆ ಯಾವುದೇ ರಸ್ತೆಗಳನ್ನು ಅಗೆಯದಂತೆ ಕ್ರಮ ವಹಿಸಲಾಗುವುದು. ವಾರ್ಡ್‌ಗಳಲ್ಲಿ ನೀರು ನಿರ್ವಹಣೆ ಮಾಡುವ ನಮ್ಮ ಸಿಬ್ಬಂದಿಗೆ ಅದರ ಜವಾಬ್ದಾರಿ ವಹಿಸಲಾಗುವುದು. ಒಂದು ವೇಳೆ ರಸ್ತೆ ಅಗೆದರೆ ಅದಕ್ಕೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕನಕಪುರ ಪೌರಾಯುಕ್ತ ಎಂ.ಎಸ್. ಮಹದೇವ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ರಸ್ತೆ ಅಭಿವೃದ್ಧಿಪಡಿಸುವುದಕ್ಕೂ ಮುಂಚೆ ಸ್ಯಾನಿಟರಿ ನೀರು ವಿದ್ಯುತ್‌ ಸಂಪರ್ಕಕ್ಕಾಗಿ ಅವಕಾಶ ಕೊಟ್ಟಿರುತ್ತೇವೆ. ಆದರೂ ಖಾಲಿ ನಿವೇಶನಗಳ ಮಾಲೀಕರು ಸಂಪರ್ಕ ಪಡೆದಿರುವುದಿಲ್ಲ. ಮನೆ ಕಟ್ಟುವಾಗ ನಮ್ಮ ಗಮನಕ್ಕೂ ತಾರದೆ ರಾತ್ರಿ  ರಸ್ತೆ ಅಗೆದು ರಸ್ತೆ ಹಾಳು ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಇರುವವರು ಗಮನಕ್ಕೆ ತಾರದೆ ರಸ್ತೆ ಅಗೆಯುತ್ತಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು. ಗುಂಡಿ ಮುಚ್ಚಿಸಲು ಟೆಂಡರ್‌‌ ಕರೆದಿದ್ದು ಶೀಘ್ರವೇ ಮುಚ್ಚಿಸಲಾಗುವುದು’ ಎಂದು ನಗರಸಭೆಯ ಕಿರಿಯ ಎಂಜಿನಿಯರ್ ವಿಜಯಕುಮಾರ್‌ ಹೇಳಿದರು.

ಕನಕಪುರ ನಗರದ ಕಾಂಕ್ರೀಟ್‌ ರಸ್ತೆ ಅಗೆದಿರುವುದು
ಕನಕಪುರ ನಗರದ ಕಾಂಕ್ರೀಟ್‌ ರಸ್ತೆ ಅಗೆದಿರುವುದು
ಕನಕಪುರ ಬಸ್‌ ನಿಲ್ದಾಣದ ರಸ್ತೆಯಲ್ಲಿ ರಸ್ತೆ ಬದಿ ಕೊರೆದು ಗುಂಡಿ ಬಿದ್ದಿರುವುದು
ಕನಕಪುರ ಬಸ್‌ ನಿಲ್ದಾಣದ ರಸ್ತೆಯಲ್ಲಿ ರಸ್ತೆ ಬದಿ ಕೊರೆದು ಗುಂಡಿ ಬಿದ್ದಿರುವುದು
ಕನಕಪುರ ನಗರದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದು
ಕನಕಪುರ ನಗರದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದು
ಕನಕಪುರ ನಗರದಲ್ಲಿ ರಸ್ತೆ ಅಗೆದು ಮಣ್ಣನ್ನು ಹಾಗೆಯೇ ಗುಡ್ಡೆ ಹಾಕಿ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ
ಕನಕಪುರ ನಗರದಲ್ಲಿ ರಸ್ತೆ ಅಗೆದು ಮಣ್ಣನ್ನು ಹಾಗೆಯೇ ಗುಡ್ಡೆ ಹಾಕಿ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ
ಕನಕಪುರ ನಗರದಲ್ಲಿ ಕಾಮಗಾರಿಗೆ ರಸ್ತೆ ಅಗೆದು ಸರಿಯಾಗಿ ಮುಚ್ಚದಿರುವುದರಿಂದ ರಸ್ತೆ ಕೆಸರುಮಯವಾಗಿದೆ
ಕನಕಪುರ ನಗರದಲ್ಲಿ ಕಾಮಗಾರಿಗೆ ರಸ್ತೆ ಅಗೆದು ಸರಿಯಾಗಿ ಮುಚ್ಚದಿರುವುದರಿಂದ ರಸ್ತೆ ಕೆಸರುಮಯವಾಗಿದೆ
ಕನಕಪುರ ನಗರದಲ್ಲಿ ರಸ್ತೆ ಅಗೆದು ಹಾಳಾಗಿರುವುದು
ಕನಕಪುರ ನಗರದಲ್ಲಿ ರಸ್ತೆ ಅಗೆದು ಹಾಳಾಗಿರುವುದು
ಕನಕಪುರ ನಗರದಲ್ಲಿ ಕಾಂಕ್ರೀಟ್‌ ರಸ್ತೆ ಅಗೆದು ತಿಂಗಳಾದರೂ ಮುಚ್ಚದೆ ಹಾಗೆಯೇ ಬಿಡಲಾಗಿದೆ
ಕನಕಪುರ ನಗರದಲ್ಲಿ ಕಾಂಕ್ರೀಟ್‌ ರಸ್ತೆ ಅಗೆದು ತಿಂಗಳಾದರೂ ಮುಚ್ಚದೆ ಹಾಗೆಯೇ ಬಿಡಲಾಗಿದೆ
ಕನಕಪುರ ನಗರದ ಕಾಂಕ್ರೀಟ್‌ ರಸ್ತೆಯನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಸರಿಯಾಗಿ ಮುಚ್ಚದಿರುವುದು
ಕನಕಪುರ ನಗರದ ಕಾಂಕ್ರೀಟ್‌ ರಸ್ತೆಯನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಸರಿಯಾಗಿ ಮುಚ್ಚದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT