ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ ಮುಂದಿನ ತಿಂಗಳೇ ಲೋಕಾರ್ಪಣೆ: ನಿತಿನ್ ಗಡ್ಕರಿ

ಉದ್ಘಾಟನೆಗೆ ಬರಲಿದ್ದಾರೆ ರಾಷ್ಟ್ರಪತಿ ಇಲ್ಲವೇ ಪ್ರಧಾನಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ
Last Updated 6 ಜನವರಿ 2023, 6:27 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು-ಮೈಸೂರು ನಡುವಿ‌ನ ದಶಪಥಗಳ ಹೆದ್ದಾರಿ ಕಾಮಗಾರಿಯು ಮುಂದಿನ ತಿಂಗಳು ಮುಕ್ತಾಯದ ಹಂತ ತಲುಪಲಿದ್ದು, ಪ್ರಧಾನಿ ನರೇಂದ್ರ ಮೋದಿ ಇಲ್ಲವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುವ ನಿರೀಕ್ಷೆ ಇದೆ.

ಗುರುವಾರ ನೂತನ ಎಕ್ಸ್‌ಪ್ರೆಸ್‌ ಕಾಮಗಾರಿಯನ್ನು ವೈಮಾನಿಕ ವೀಕ್ಷಣೆ ಮೂಲಕ ವೀಕ್ಷಿಸಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಖಾತ್ರಿಪಡಿಸಿದರು. ದೇಶದಲ್ಲಿನ ಹೆದ್ದಾರಿಗಳ ಪ್ರಗತಿ ಕುರಿತು ಮಾಹಿತಿ ಹಂಚಿಕೊಂಡ ಅವರು, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಲೋಪಗಳನ್ನು ಸರಿಪಡಿಸಿ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಭರವಸೆಯನ್ನೂ ನೀಡಿದರು.

₹9 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 177 ಕಿ.ಮೀ ಉದ್ದದ ಈ ಹೊಸ ಹೆದ್ದಾರಿಯು ಮೈಸೂರು–ಬೆಂಗಳೂರು ಆರ್ಥಿಕ ಕಾರಿಡಾರ್‌ಗೆ ಹೊಸ ಭಾಷ್ಯ ಬರೆಯಲಿದೆ. ಈ ಎರಡೂ ನಗರಗಳನ್ನು ಈಗ 1 ಗಂಟೆ 20 ನಿಮಿಷದಲ್ಲಿ ತಲುಪಬಹುದಾಗಿದೆ. ಬೆಂಗಳೂರು ಸುತ್ತಮುತ್ತ ಈಗಾಗಲೇ ಜಮೀನಿಗೆ ಕೊರತೆ ಇದೆ. ಈಗ ಉತ್ತಮ ರಸ್ತೆ ಸಂಪರ್ಕ ಸಿಕ್ಕಿರುವ ಕಾರಣ ಮೈಸೂರಿನತ್ತ ಕೈಗಾರಿಕೆಗಳ ಚಿತ್ತ ಹರಿಯಲಿದೆ. ಭವಿಷ್ಯದಲ್ಲಿ ಈ ಹೆದ್ದಾರಿಯಲ್ಲಿ ಸಾರ್ವಜನಿಕ ಸಾರಿಗೆ ಪ್ರೋತ್ಸಾಹಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಗಳಿಗೆ ಸಂಪರ್ಕ: ಪ್ರಮುಖ ನಗರಗಳಿಗೆ ಪ್ರವೇಶ–ನಿರ್ಗಮನ ದ್ವಾರಗಳ ಸಂಪರ್ಕ ನೀಡಲಾಗುವುದು. ಈ ಬಗ್ಗೆ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದರು.

ರಸ್ತೆ ಸುರಕ್ಷತೆ ಆಡಿಟ್‌: ಹೆದ್ದಾರಿಯಲ್ಲಿ ಕೆಲವು ಕಡೆ ಅಪಾಯಕಾರಿ ತಿರುವುಗಳಿದ್ದು, ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರಿದೆ. ಉದ್ಘಾಟನೆಗೆ ಮುನ್ನ ರಸ್ತೆ ಸುರಕ್ಷತೆ ಆಡಿಟ್‌ ನಡೆಯಲಿದ್ದು, ಲೋಪಗಳು ಇದ್ದಲ್ಲಿ ಸರಿಪಡಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ಬೆಂಗಳೂರು ಭಾಗದಲ್ಲಿ ದಶಕದಲ್ಲಿಯೇ ದಾಖಲೆ ಮಳೆಯಾದ ಕಾರಣ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರ ಆಗಿದ್ದು, ಈಗ ಸರಿಪಡಿಸಲಾಗಿದೆ. ಕಾಮಗಾರಿಯಲ್ಲಿ ದೋಷಗಳು ಇದ್ದಲ್ಲಿ ಅದನ್ನು ಸರಿಪಡಿಸಲಾಗುವುದು ಎಂದರು.

ಟೋಲ್‌ ಅನಿವಾರ್ಯ: ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ ಜನರ ಸಮಯ ಹಾಗೂ ವಾಹನಗಳ ಇಂಧನ ಉಳಿತಾಯ ಆಗಲಿದೆ. ಉತ್ತಮ ರಸ್ತೆ ಬೇಕಾದರೆ ಟೋಲ್‌ ಕಟ್ಟುವುದು ಅನಿವಾರ್ಯ ಎಂದು ಗಡ್ಕರಿ ಸಮರ್ಥಿಸಿಕೊಂಡರು.

ಹೆಸರಿಡಲು ಅವಕಾಶವಿಲ್ಲ: ಬೆಂ–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡುವಂತೆ ಬಂದಿರುವ ಮನವಿಗಳ ಕುರಿತು ಪ್ರತಿಕ್ರಿಯಿಸಿದ ಗಡ್ಕರಿ ‘ ರಾಷ್ಟ್ರೀಯ ಹೆದ್ದಾರಿಗಳಿಗೆ ವ್ಯಕ್ತಿಗಳ ಹೆಸರಿಡುವ ಪ್ರಕ್ರಿಯೆಯನ್ನು ಬಹಳ ಹಿಂದೆಯೇ ನಿಲ್ಲಿಸಿದ್ದೇವೆ. ಆದಾಗ್ಯೂ ರಾಜ್ಯ ಸರ್ಕಾರದಿಂದ ಪ್ರಸ್ತಾವ ಬಂದಲ್ಲಿ ಪ್ರಧಾನಿ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಪೆಟ್ರೋಲ್ ಬಂಕ್‌, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ವಿಚಾರವಾಗಿ ಪ್ರತಿಕ್ರಿಯಿಸಿ ‘ ಇಲಾಖೆಯಿಂದ ಏರ್ ಆಂಬುಲೆನ್ಸ್, ಹೆಲಿಪ್ಯಾಡ್‌ ಮೊದಲಾದ ಸೇವೆಗಳನ್ನು ಒದಗಿಸಲಾಗುತ್ತಿದೆ. ಆಸ್ಪತ್ರೆ ಮೊದಲಾದವುಗಳ ನಿರ್ಮಾಣ ರಾಜ್ಯ ಸರ್ಕಾರದ ಜವಾಬ್ದಾರಿ’ ಎಂದರು.

ಹೆದ್ದಾರಿ ಬದಿ ಇರುವ ಜಾಗದಲ್ಲಿ ಸ್ಥಳೀಯ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಇರುತ್ತದೆ. ರಾಜ್ಯ ಸರ್ಕಾರ ಬಯಸಿದಲ್ಲಿ ಜಾಗ ಒದಗಿಸುತ್ತೇವೆ ಎಂದರು.

ಬೆಂಗಳೂರು–ದಿಂಡಿಗಲ್‌ ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಕಾಮಗಾರಿ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಚಿವರು ‘ ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ನಿಂತಿತ್ತು. ಈಗ ಗುತ್ತಿಗೆದಾರನ್ನು ಬದಲಿಸಿದ್ದು, 2024ರ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವ ಕೆ. ಗೋಪಾಲಯ್ಯ, ಸಂಸದರಾದ ಡಿ.ಕೆ. ಸುರೇಶ್, ಪ್ರತಾಪ ಸಿಂಹ, ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಜೊತೆಗಿದ್ದರು.

ಹೆದ್ದಾರಿಯಲ್ಲೇ ಇಳಿದ ಹೆಲಿಕಾಪ್ಟರ್!

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆದ್ದಾರಿ ಒಂದರಲ್ಲಿ ಹೆಲಿಕಾಪ್ಟರ್‌ ಇಳಿದ ಕ್ಷಣಕ್ಕೆ ರಾಮನಗರ ಗುರುವಾರ ಸಾಕ್ಷಿ ಆಯಿತು.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಧ್ಯಾಹ್ನ 12.45ರ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು–ರಾಮನಗರ ಮಾರ್ಗವಾಗಿ ಮೈಸೂರುವರೆಗೂ ಬೆಂಗಳೂರು–ಮೈಸೂರು ಹೆದ್ದಾರಿ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯ ಪರಿಶೀಲನೆ ನಡೆಸಿದರು. ಅವರಿಗೆ ಮೈಸೂರು ಸಂಸದ ಪ್ರತಾಪ ಸಿಂಹ ಹಾಗು ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸಾಥ್‌ ನೀಡಿದರು.

ಸಚಿವರಿದ್ದ ಹೆಲಿಕಾಪ್ಟರ್ ಹಾಗೂ ಮತ್ತೊಂದು ಹೆಲಿಕಾಪ್ಟರ್ ಮಧ್ಯಾಹ್ನ 1.15ರ ಸುಮಾರಿಗೆ ರಾಮನಗರ ತಾಲ್ಲೂಕಿನ ಜಿಗೇನಹಳ್ಳಿ ಸಮೀಪ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಲ್ಯಾಂಡ್ ಆದವು. ಅಲ್ಲಿಂದ ಕಾರ್‌ನಲ್ಲಿ ನಾಲ್ಕು ಕಿ.ಮೀ. ಸಂಚರಿಸಿದ ಗಡ್ಕರಿ, ನಂತರ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಬಸ್‌ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ಗೆ ವಾಪಸ್ ಆಗಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು.

ಬೆಂ–ಮೈ ನಡುವೆ ಓಡಲಿದೆ ಹೈಟೆಕ್ ಬಸ್‌

ನೂತನ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ಬೆಂಗಳೂರು–ಮೈಸೂರು ನಡುವೆ ಬ್ಯುಸಿನೆಸ್ ಕ್ಲಾಸ್‌ ಒಳಗೊಂಡ ಹೈಟೆಕ್‌ ಬಸ್‌ಗಳನ್ನು ಓಡಿಸಲು ಚಿಂತನೆ ನಡೆದಿದೆ ಎಂದು ಗಡ್ಕರಿ ತಿಳಿಸಿದರು.

ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ವಿದೇಶಗಳ ಮಾದರಿಯಲ್ಲಿ ಬಸ್‌ಗಳನ್ನು ಓಡಿಸುವ ಚಿಂತನೆ ನಡೆದಿದೆ. ಡಬಲ್‌ ಡೆಕ್ಕರ್ ಇಲ್ಲವೇ ಏರ್‌ ಬಸ್‌ಗಳು ಈ ಮಾರ್ಗದಲ್ಲಿ ಸಾಗಲಿದ್ದು, ಇದರಿಂದ ಜನ ಸ್ವಂತ ವಾಹನ ಬಳಸುವುದು ಕಡಿಮೆ ಆಗಲಿದೆ. ಈ ಸಂಬಂಧ ವೋಲ್ವೊ ಸಹಿತ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಸಚಿವರು ತಿಳಿಸಿದರು.

ಸುರೇಶ್‌–ಯೋಗೇಶ್ವರ್‌ ಆಪ್ತ ಮಾತು

ಹೆದ್ದಾರಿಯಲ್ಲಿ ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ಬಂದಿದ್ದ ಸಂಸದ ಡಿ.ಕೆ. ಸುರೇಶ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ನಡುವಿನ ಆಪ್ತ ಮಾತುಕತೆ ಕುತೂಹಲ ಮೂಡಿಸಿತ್ತು.

ಇಬ್ಬರೂ ಪಕ್ಕದಲ್ಲೇ ನಿಂತು ನಗುತ್ತಲೇ ಹರಟೆ ಹೊಡೆದರು. ‘ಕಳೆದ ಬಾರಿ ಬ್ರದರ್‌– ಸಿಸ್ಟರ್ ಎಂದು ಹೋಗಿದ್ದೀರಿ? ಏನಾಯಿತು ದೋಸ್ತಿ?’ ಎಂದು ಸಿಪಿವೈ ನಗುತ್ತಲೇ ಕಾಲೆಳೆದರು. ಈ ಸಂದರ್ಭ ಮಾತನಾಡಿದ ಇಬ್ಬರೂ ‘ ನಾವಿಬ್ಬರೂ ಮೂವತ್ತು ವರ್ಷದ ಸ್ನೇಹಿತರು. ರಾಜಕಾರಣ ಬೇರೆ. ಇಂದಿನದ್ದು ಬರೀ ವಿಶ್ವಾಸದ ಮಾತುಕತೆ ಅಷ್ಟೇ’ ಎಂದು ಸಮಜಾಯಿಷಿಯನ್ನೂ ನೀಡಿದರು.

ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿಯಿಂದ ಯೋಗೇಶ್ವರ್‌ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್‌ ಮಾತ್ರ ಇನ್ನೂ ಅಭ್ಯರ್ಥಿ ಹಾಕಿಲ್ಲ. ಈ ನಡುವೆಯೇ ಈ ಇಬ್ಬರ ಸಾಮೀಪ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT