ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಮಹಾಂಕಾಳಿ ಕರಗ ಮಹೋತ್ಸವ

Last Updated 8 ಜುಲೈ 2019, 13:22 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ನಗರದ ಶಕ್ತಿ ದೇವತೆ. ಸುಮಾರು ನಾನೂರು ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ನಾನೂರು ವರ್ಷಗಳ ಹಿಂದೆ ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು. ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು.

ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಭಕ್ಷಿ ಬಾಲಾಜಿಯನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂತಲೂ, ಎರಡು ಹೆಸರಿನಿಂದ ಕರೆಯುತ್ತಾರೆ.

ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್‌.ಎನ್. ಯೋಗೇಶ್ 17ನೇ ಬಾರಿಗೆ ಕರಗವನ್ನು ಧರಿಸುತ್ತಿದ್ದಾರೆ.

‘ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು. ಮೊದಲು ಕರಗ ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆಗೆಲ್ಲಾ ಅಗ್ನಿಕೊಂಡ ಪ್ರವೇಶ ಮಾಡುತಿತ್ತು. ಆದರೆ ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ’ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್ ಕುಮಾರ್‌ ತಿಳಿಸಿದರು.

ಇದೇ 9ರಂದು ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ, ಇದೇ 10ರಂದು ಅಗ್ನಿಕೊಂಡ ಮಹೋತ್ಸವ ನಡೆಯಲಿದೆ. ಕರಗವು ಅಗ್ನಿಕೊಂಡ ಪ್ರವೇಶಿಸಿದ ನಂತರ ಇಲ್ಲಿನ ಟ್ರೂಪ್ ಲೈನ್ ನಲ್ಲಿರುವ ಶ್ರೀ ಕೋದಂಡರಾಮ ಭಜನಾ ಮಂದಿರದಿಂದ ಗಿಂಡಿ ಕರಗ ಮೆರವಣಿಗೆ ನಡೆಯಲಿದೆ. ಇದೇ 11ರಂದು ದೇವಾಲಯದಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಸಿಡಿ ಏರ್ಪಡಿಸಲಾಗಿದೆ.

**

ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಸಾಂಕ್ರಾಮಿಕ ರೋಗ ಬಂದಿಲ್ಲ ಎಂಬುದು ಜನರ ನಂಬಿಕೆಯಾಗಿದೆ
-ಎಂ.ಎಸ್. ವಿನಯ್ ಕುಮಾರ್‌, ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT