ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದ ಅಬ್ಬರ: ರಂಗೇರಿತು ಚುನಾವಣಾ ಕಣ

ಅಭ್ಯರ್ಥಿಗಳಿಂದ ಹಳ್ಳಿ ಸುತ್ತಾಟ: ದಿನಕ್ಕೊಂದು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ
Last Updated 5 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ರಾಮನಗರ: ಮತದಾನ ಪ್ರಕ್ರಿಯೆಗೆ ಇನ್ನು 12 ದಿನವಷ್ಟೇ ಬಾಕಿ ಉಳಿದಿದ್ದು, ರಣ ಬಿಸಿಲಿನ ನಡುವೆಯೂ ಚುನಾವಣಾ ಪ್ರಚಾರವು ಚುರುಕಾಗಿದೆ.

ಇದೇ 18ರಂದು ಮತದಾನ ನಡೆಯಲಿದ್ದು, 16ರ ಸಂಜೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಇನ್ನು ಹತ್ತು ದಿನವಷ್ಟೇ ಉಳಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪೈಪೋಟಿಗೆ ಬಿದ್ದವರಂತೆ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ನಡೆಸತೊಡಗಿದ್ದಾರೆ.

ಮತ್ತೊಂದೆಡೆ, ಉಭಯ ಪಕ್ಷಗಳ ಕಾರ್ಯಕರ್ತರೂ ಪ್ರಚಾರಕ್ಕೆ ಇಳಿದಿರುವುದು ಚುನಾವಣೆಯ ರಂಗು ಹೆಚ್ಚಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಕೆ. ಸುರೇಶ್‌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳನ್ನೂ ಬಳಸಿ ಬಂದಿದ್ದಾರೆ. ಕಳೆದ ಬುಧವಾರ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ, ಗುರುವಾರ ಆನೇಕಲ್‌ನಲ್ಲಿ ಹಾಗೂ ಶುಕ್ರವಾರ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಕೂಡ ಪ್ರಚಾರದಲ್ಲಿ ಮುಂದಿದ್ದಾರೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನದಂದು ಟಿಕೆಟ್ ಪಡೆದರೂ ಅಷ್ಟೇ ವೇಗದಲ್ಲಿ ಮತದಾರರನ್ನು ಭೇಟಿ ಮಾಡತೊಡಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಅವರು ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಉಭಯ ಪಕ್ಷಗಳ ಅಭ್ಯರ್ಥಿಗಳು ಹಳ್ಳಿಹಳ್ಳಿಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಗ್ರಾಮೀಣ ಪ್ರದೇಶದಲ್ಲೂ ಮತ ಸಮರದ ಕಾವು ಏರಿಸಿದ್ದಾರೆ.

ಬೀದಿಗಳಿದ ಆಟೊಗಳು: ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮನೆ ಮನೆ ಪ್ರಚಾರವನ್ನು ಆರಂಭಿಸಿದ್ದಾರೆ. ಬಸ್‌ ನಿಲ್ದಾಣ, ಕೃಷಿ ಮಾರುಕಟ್ಟೆ , ರೈಲು ನಿಲ್ದಾಣ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚಲಾಗುತ್ತಿದೆ.
ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡತೊಡಗಿದೆ. ಕಳೆದ ಐದು ವರ್ಷಗಳಲ್ಲಿನ ಯೋಜನೆಗಳ ಪ್ರಚಾರಕ್ಕೆಂದೇ ಆಟೊಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೈಕುಗಳ ಮೂಲಕ ಮತದಾರರಿಗೆ ಎನ್‌ಡಿಎ ಸಾಧನೆಗಳನ್ನು ಸಾರಿ ಹೇಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‌ ಕಳೆದ ಐದು ವರ್ಷಗಳಲ್ಲಿನ ತಮ್ಮ ಸಾಧನೆಗಳ ಪರಿಚಯ ಮಾಡಿಕೊಡುವ ಕರಪತ್ರಗಳನ್ನು ಹಂಚತೊಡಗಿದ್ದಾರೆ.

ಮಂಕಾದ ಪಕ್ಷೇತರರು
ಕಾಂಗ್ರೆಸ್‌–ಬಿಜೆಪಿ ಹೊರತುಪಡಿಸಿ ಇನ್ನೂ 13 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಆದರೆ ಬಹಿರಂಗ ವೇದಿಕೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಪ್ರಚಾರವೂ ಅಷ್ಟಕ್ಕಷ್ಟೇ ಎಂಬಂತೆ ಆಗಿದೆ.

ಕೆಲವು ಪಕ್ಷೇತರ ಅಭ್ಯರ್ಥಿಗಳು ಪತ್ರಿಕಾಗೋಷ್ಠಿಗಳಿಗೆ ಸೀಮಿತವಾಗಿದ್ದಾರೆ. ಇನ್ನೂ ಕೆಲವರು ಸೀಮಿತ ಮತದಾರ ವರ್ಗಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಹಿಂದುಳಿದ ವರ್ಗಗಳು, ಕಾರ್ಮಿಕರು, ಅಲ್ಪಸಂಖ್ಯಾತರು... ಹೀಗೆ ಒಂದೊಂದು ವರ್ಗವನ್ನು ತಲುಪುವ ಪ್ರಯತ್ನ ನಡೆಸಿದ್ದಾರೆ.

ಸ್ಟಾರ್‌ ಪ್ರಚಾರಕರ ಅಬ್ಬರವಿಲ್ಲ
ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಿರಂಗ ಸಮಾವೇಶಗಳು, ಸ್ಟಾರ್ ಪ್ರಚಾರಕರ ಅಬ್ಬರ ಇನ್ನಷ್ಟೇ ಕಾಣಬೇಕಿದೆ.

ಸುರೇಶ್‌ ಪರವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ಹಾಜರಿದ್ದು, ಅಂದೇ ಕಾರ್ಯಕರ್ತರ ಸಮಾವೇಶವನ್ನೂ ನಡೆಸಿ ಹೋಗಿದ್ದಾರೆ. ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಒಂದು ದಿನ ಪೂರ್ತಿ ಕ್ಷೇತ್ರ ಸುತ್ತಿದ್ದಾರೆ. ಈ ಇಬ್ಬರೂ ಮಂಡ್ಯದಲ್ಲಿ ಪುತ್ರನನ್ನು ಗೆಲ್ಲಿಸಿಕೊಳ್ಳಲು ಪಣ ತೊಟ್ಟ ಕಾರಣ ಕಾಂಗ್ರೆಸ್‌ ಪರವಾಗಿ ಪ್ರಚಾರಕ್ಕೆ ಸಿಗುವುದು ಕಷ್ಟವಾಗಿದೆ. ಸಚಿವ ಡಿ.ಕೆ. ಶಿವಕುಮಾರ್‌ ಸಹ ಉಳಿದ ಕ್ಷೇತ್ರಗಳ ಉಸ್ತುವಾರಿ ಹೊತ್ತಿದ್ದು, ಸಹೋದರನ ಪರ ಒಂದೆರಡು ದಿನ ಮಾತ್ರ ಮತಯಾಚನೆ ಮಾಡಿದ್ದಾರೆ. ಉಳಿದ ಯಾವ ನಾಯಕರೂ ಇನ್ನೂ ಜಿಲ್ಲೆಯತ್ತ ಮುಖ ಮಾಡಿಲ್ಲ.

ಬಿಜೆಪಿ ಅಭ್ಯರ್ಥಿ ಪರ ಸಿ.ಪಿ. ಯೋಗೇಶ್ವರ್‌, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಆರ್‌. ಅಶೋಕ್‌ ಸಹ ಒಂದೆರಡು ದಿನ ಪ್ರಚಾರ ಮಾಡಿ ಹೋಗಿದ್ದಾರೆ. ಉಳಿದಂತೆ ಜಿಲ್ಲಾ ಘಟಕದ ಮುಖಂಡರು ಮತಯಾಚನೆಗೆ ಸಾಥ್‌ ನೀಡುತ್ತಿದ್ದಾರೆ. ಇಲ್ಲಿಯೂ ಪಕ್ಷದ ಸ್ಟಾರ್‌ ಪ್ರಚಾರಕರು ಇನ್ನೂ ಇತ್ತ ಇಣುಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT