ಶನಿವಾರ, ಸೆಪ್ಟೆಂಬರ್ 25, 2021
30 °C
ಮುಂದಿನ ವರ್ಷದ ಫೆ. 2ರಂದು ಶ್ರೀಗಳ ಪೀಠಾರೋಹಣ ಮಹೋತ್ಸವಕ್ಕೆ ನಿರ್ಧಾರ

ನಾರಾಯಣಗುರು ಪೀಠಕ್ಕೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಸೋಲೂರಿನ ರೇಣುಕಾ ಯಲ್ಲಮ್ಮದೇವಿ ದೇವಾಲಯ ಬಳಿ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರು ಪೀಠಕ್ಕೆ ಭೂಮಿಪೂಜೆ
ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೀಠದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.  

‘ಈಡಿಗರ ಸಂಘಟನೆಯೇ ನಮ್ಮ ಗುರಿ’ ಎಂದು ಸ್ವಾಮೀಜಿ ಹೇಳಿದರು. 

ಈಡಿಗ ಸಮುದಾಯದ ಶಿಕ್ಷಣ, ಉದ್ಯೋಗದಂತಹ ಸೌಲಭ್ಯಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು. ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವಗಳನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸಲಾಗುವುದು. ಸಮುದಾಯದ ಅಭಿವೃದ್ಧಿಗೆ ಅರ್ಪಣಾಭಾವನೆಯಿಂದ ದುಡಿಯಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ನೆಲೆಸಿರುವ ಈಡಿಗ ಸಮುದಾಯದವರು ಪ್ರದೇಶವಾರು ವಿವಿಧ ಒಳ ಪಂಗಡಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಮುದಾಯದ 26 ಒಳಪಂಗಡಗಳನ್ನು ಸಂಘಟಿಸಿ ಎಲ್ಲರ ವಿಶ್ವಾಸದೊಂದಿಗೆ ಸಂವಿಧಾನದತ್ತವಾದ ಸವಲತ್ತು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಾದ್ಯಂತ ಪ್ರವಾಸ ಮಾಡಿ ಈಡಿಗ ಸಮುದಾಯದ ಎಲ್ಲರನ್ನು ಪರಿಚಯಿಸಿಕೊಂಡು ಅವರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಲು ಯೋಜನೆ ರೂಪಿಸಲಾಗುತ್ತಿದೆ. ಜೊತೆಗೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಬಗ್ಗೆ ಪೋಷಕರಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದರು.

ಮುಂದಿನ ವರ್ಷ ಪಟ್ಟಾಭಿಷೇಕ:

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಮಾತನಾಡಿ, ಮುಂದಿನ ವರ್ಷದ ಫೆ. 2ರಂದು ವಿಖ್ಯಾತಾನಂದ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ನಡೆಸಲಾಗುವುದು ಎಂದು ತಿಳಿಸಿದರು.

‘ಆರ್ಯ ಈಡಿಗರ ಸಮುದಾಯವನ್ನು ಸಂಘಟಿಸಿ, ಮುನ್ನೆಡೆಸಲು ಸ್ವಾಮೀಜಿ ಅವರಿಗೆ ಪೂರ್ಣ ಸಹಕಾರ ನೀಡಲಾಗುವುದು. ನಮ್ಮ ಜನಾಂಗದ ಮುಖಂಡರು, ಜನಪ್ರತಿನಿಧಿಗಳು ಮತ್ತು ಯುವಜನತೆ ಸಂಘಟನೆ ಮಾಡಲು ಸ್ವಾಮೀಜಿ ಅವರಿಗೆ ಪೂರ್ಣ ಸಹಕಾರ ನೀಡಬೇಕು‘ ಎಂದು ಮನವಿ ಮಾಡಿದರು. 

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕರಾದ ವಿ. ಸುನಿಲ್ ಕುಮಾರ್‌, ಎಚ್.ಆರ್. ಗವಿಯಪ್ಪ, ಮಾಜಿ ಶಾಸಕರಾದ ಕೆ.ಡಿ. ನಾಯ್ಕ್, ಸ್ವಾಮಿರಾವ್, ಬೇಳೂರು ಗೋಪಾಲಕೃಷ್ಣ ಮಾತನಾಡಿ
ದರು. ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ಎಂ. ವೇದಕುಮಾರ್, ಕೆಪಿಎಸ್‌ಸಿ ಮಾಜಿ ಸದಸ್ಯ ಡಾ.ಲಕ್ಷ್ಮೀನರಸಿಂಹಯ್ಯ, ಶ್ರೀಸುಧಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಟಿ. ವಾಸನ್, ಈಡಿಗರ ಸಂಘದ ಪದಾಧಿಕಾರಿಗಳಾದ ಜೆ.ಪಿ. ಸುಧಾಕರ್, ಕೆ.ಎಸ್. ದುಶ್ಯಂತ್, ಹರಿಚರಣ್, ರಕ್ಷಿತ್ ಶಿವರಾಮ್, ಶಿವಕುಮಾರ್, ಪತ್ರಕರ್ತ ಚೆಲುವರಾಜ್, ಕುದೂರು ವೆಂಕಟೇಶ್, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್, ಕಾರ್ಯದರ್ಶಿ ಚಂದ್ರಶೇಖರ್, ವೆಂಕಟೇಶ್ ಹಾಜರಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು