ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ: ಶಿಥಿಲಾವಸ್ಥೆ ತಲುಪಿದ ಪಾದಚಾರಿ ಮೇಲ್ಸೇತುವೆ

ತುಕ್ಕು ಹಿಡಿದ ಮೆಟ್ಟಿಲು: ನಿರ್ವಹಣೆಗೆ ನಿರ್ಲಕ್ಷ್ಯ ತೋರಿದ ಹೆದ್ದಾರಿ ಪ್ರಾಧಿಕಾರ
Published 13 ಜೂನ್ 2024, 4:33 IST
Last Updated 13 ಜೂನ್ 2024, 4:33 IST
ಅಕ್ಷರ ಗಾತ್ರ

ಬಿಡದಿ: ಪಟ್ಟಣದ ಹೃದಯಭಾಗವನ್ನು ಹಾದು ಹೋಗಿರುವ ಬೆಂಗಳೂರು– ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ನಿರ್ಮಿಸಿರುವ ಪಾದಚಾರಿಗಳ ಮೇಲ್ಸೇತುವೆ (ಸ್ಕೈವಾಕ್) ಶಿಥಿಲಾವಸ್ಥೆ ತಲುಪಿದೆ. ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಗಾಳಿ, ಮಳೆ, ಬಿಸಿಲಿಗೆ ಸೇತುವೆಯ ಮೆಟ್ಟಿಲುಗಳು ಸೇರಿದಂತೆ ಕೆಲ ಭಾಗಗಳು ತುಕ್ಕು ಹಿಡಿದಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ.

ಬಿ.ಜಿ.ಎಸ್ ವೃತ್ತದಲ್ಲಿ ಬಸ್ ನಿಲ್ದಾಣ, ಆಸ್ಪತ್ರೆ, ಪೊಲೀಸ್ ಠಾಣೆ, ಆಟೊ ನಿಲ್ದಾಣ, ಬಸ್ ತಂಗುದಾಣ, ಅನತಿ ದೂರದಲ್ಲಿರುವ ಮಾರುಕಟ್ಟೆ, ಹೆದ್ದಾರಿ ಯೂಟರ್ನ್, ಪಾದಚಾರಿಗಳು ರಸ್ತೆ ದಾಟುವ ಮಾರ್ಗ ಎಲ್ಲವೂ ಇದೇ ವೃತ್ತದಲ್ಲಿ ಇದ್ದಿದ್ದರಿಂದ ಜನದಟ್ಟಣೆ ಮತ್ತು ವಾಹನ ದಟ್ಟನೆಯೂ ಹೆಚ್ಚಾಗಿತ್ತು. ಬೆಂಗಳೂರು ಮತ್ತು ಮೈಸೂರು ಕಡೆಯಿಂದ ವಾಹನಗಳು ವೇಗವಾಗಿ ಬರುತ್ತಿದ್ದಂತೆ ಈ ಜಾಗ ಒಂದು ರೀತಿಯಲ್ಲಿ ಅಪಘಾತದ ಸ್ಥಳವೂ ಆಗಿತ್ತು.

2003ರಲ್ಲಿ ನಿರ್ಮಾಣ: ಜನದಟ್ಟಣೆ ಮತ್ತು ವಾಹನದಟ್ಟಣೆಯಿಂದ ಆಗುತ್ತಿದ್ದ ತೊಂದರೆಗೆ ಪರಿಹಾರವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು (ಕೆಆರ್‌ಡಿಸಿಎಲ್) ಪಾದಚಾರಿಗಳು ರಸ್ತೆ ದಾಟುವುದಕ್ಕಾಗಿ, 2003ರಲ್ಲಿ ಈ ಕಬ್ಬಿಣದ ಮೇಲ್ಸೇತುವೆ ನಿರ್ಮಿಸಿತ್ತು. ಜನರು ಮೇಲ್ಸೇತುವೆ ಮೂಲಕ ರಸ್ತೆ ದಾಟಲು ಶುರು ಮಾಡಿದಾಗ, ಸ್ಥಳದಲ್ಲಿ ಕ್ರಮೇಣವಾಗಿ ದಟ್ಟಣೆ ಇಳಿಯಿತು.

‘ಮೇಲ್ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದಾಗ, ರಸ್ತೆಯ ಎರಡೂ ಬದಿಯಿಂದ ಮೇಲ್ಸೇತುವೆ ಪ್ರವೇಶದಿಂದಿಡಿದು ಮೇಲಿನವರೆಗೆ ಶೆಲ್ಟರ್ ನಿರ್ಮಿಸಲಾಗಿತ್ತು. ಮಳೆ ಬಂದರೂ ಪಾದಚಾರಿಗಳು ನೆನೆಯದಂತೆ ರಸ್ತೆ ದಾಟಬಹುದಿತ್ತು. ಮೇಲ್ಸೇತುವೆ ನಿರ್ಮಾಣವಾದ ಬಳಿಕ, ಹೆದ್ದಾರಿ ಮಧ್ಯೆ ಜನರು ರಸ್ತೆ ದಾಟದಂತೆ ಕಬ್ಬಿಣ ಬೇಲಿ ಕೂಡ ಹಾಕಲಾಗಿತ್ತು’ ಎಂದು ಸ್ಥಳೀಯ ಆಟೊ ಚಾಲಕ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಸೇತುವೆಯ ನಿರ್ವಹಣೆ ಕುರಿತು ಕೆಆರ್‌ಡಿಸಿಎಲ್ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಾಗಲಿ ತಲೆ ಕೆಡಿಸಿಕೊಳ್ಳಲಿಲ್ಲ. ಇದರಿಂದಾಗಿ ಮೇಲಿದ್ದ ಶೆಲ್ಟರ್‌ನ ಒಂದು ಭಾಗ ಗಾಳಿ ಮತ್ತು ಮಳೆಗೆ ಬಿದ್ದು ಹೋಯಿತು. ಅಳಿದುಳಿದ ಭಾಗ ಏನಾಯಿತೊ ಗೊತ್ತಿಲ್ಲ. ಕ್ರಮೇಣ ಮೇಲ್ಸೇತುವೆ ಶಿಥಿಲವಾಗತೊಡಗಿತು. ಅದಕ್ಕೆ ಅಳವಡಿಸಿದ್ದ ವಿದ್ಯುತ್ ದೀಪಗಳು ಸಹ ಇಲ್ಲವಾದವು’ ಎಂದು ಪಟ್ಟಣದ ನಿವಾಸಿ ಬೈರೇಗೌಡ ಹೇಳಿದರು.

ರಸ್ತೆಯೇ ಗತಿ: ಮೇಲ್ಸೇತುವೆಯ ಶೆಲ್ಟರ್ ಹೋಗಿದ್ದರಿಂದ, ರಸ್ತೆ ದಾಟುವ ಪಾದಚಾರಿಗಳಿಗೆ ಗಾಳಿ ಮತ್ತು ಮಳೆಗೆ ರಕ್ಷಣೆ ಇಲ್ಲದಂತಾಯಿತು. ಬೇಸಿಗೆಯಲ್ಲಿ ಮೇಲ್ಸೆತುವೆ ಮೆಟ್ಟಿಲುಗಳು ಕಾದ ಹೆಂಚಿನಂತಾಗಿರುತ್ತಿದ್ದವು. ಬರಿಗಾಲಿನಲ್ಲೇನಾದರೂ ಹತ್ತಿದರೆ ಪಾದಗಳು ಸುಡುತ್ತಿದ್ದರು. ಹಾಗಾಗಿ, ಜನ ಸಹ ಅದನ್ನು ಬಳಸಲು ಕಡಿಮೆ ಮಾಡಿದರು.

ನಿರ್ವಹಣೆ ಇಲ್ಲದೆ ಬೆಳಗದ ಬೀದಿ ದೀಪ
ನಿರ್ವಹಣೆ ಇಲ್ಲದೆ ಬೆಳಗದ ಬೀದಿ ದೀಪ

‘ಮೇಲ್ಸೇತುವೆಯು ಶಿಥಿಲವಾದಂತೆ ಪಾದಚಾರಿಗಳು ಅದನ್ನು ಬಳಸಲು ಕಡಿಮೆ ಮಾಡಿದರು. ಇದರ ಮಧ್ಯೆಯೇ ರಸ್ತೆ ದಾಟುವುದಕ್ಕಾಗಿ ಹೆದ್ದಾರಿ ಮಧ್ಯೆ ಹಾಕಿದ್ದ ತಡೆಬೇಲಿಯ ಸ್ವಲ್ಬ ಭಾಗವನ್ನು ಯಾರೊ ಕತ್ತರಿಸಿದರು. ಅಂದಿನಿಂದ ರಸ್ತೆಯ ಎರಡೂ ಬದಿಯನ್ನು ದಾಟುವವರು ಮೇಲ್ಸೇತುವೆ ಬದಲು, ಇದೇ ಮಾರ್ಗವನ್ನು ಹಿಡಿದಿದ್ದಾರೆ. ಮತ್ತೆ ಹಳೆಯ ಸ್ಥಿತಿಗೆ ವೃತ್ತ ಬಂದಿದೆ. ಕಣ್ಣೆದುರಿಗೆ ಇದೆಲ್ಲಾ ಕಾಣುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಆಡಳಿತವಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ’ ಎಂದು ಸ್ಥಳೀಯರಾದ ನಂಜುಂಡಿ ಬೇಸರ ವ್ಯಕ್ತಪಡಿಸಿದರು.

ತುಕ್ಕು ಹಿಡಿದಿರುವ ಮೇಲ್ಸೇತುವೆಯ ಮೆಟ್ಟಿಲುಗಳು
ತುಕ್ಕು ಹಿಡಿದಿರುವ ಮೇಲ್ಸೇತುವೆಯ ಮೆಟ್ಟಿಲುಗಳು
ನಿರ್ವಹಣೆ ಇಲ್ಲದೆ ದುರಸ್ತಿಗೆ ಕಾದಿರುವ ಬಿಡದಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಪಾದಚಾರಿ ಮೇಲ್ಸೇತುವೆ
ನಿರ್ವಹಣೆ ಇಲ್ಲದೆ ದುರಸ್ತಿಗೆ ಕಾದಿರುವ ಬಿಡದಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಪಾದಚಾರಿ ಮೇಲ್ಸೇತುವೆ
ಮೇಲ್ಸೇತುವೆಯನ್ನು ದುರಸ್ತಿ ಮಾಡಿದರೆ ಬಿಜಿಎಸ್ ವೃತ್ತದ ಸಂಚಾರ ದಟ್ಟಣೆ ತಗ್ಗುವ ಜೊತೆಗೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುತ್ತದೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು
– ಸ್ವಾಮಿ ಸ್ಥಳೀಯ ನಿವಾಸಿ ಬಿಡದಿ
ವಯಸ್ಸಾದವರು ಹಾಗೂ ಮಕ್ಕಳಿಗೆ ಮೇಲ್ಸೇತುವೆ ಹತ್ತಿ ಇಳಿಯುವುದು ಕಷ್ಟವಾಗುತ್ತದೆ. ಹಾಗಾಗಿ ಮೇಲ್ಸೇತುವೆ ದುರಸ್ತಿ ಜೊತೆಗೆ ರಸ್ತೆ ದಾಟಲು ಅನುಕೂಲವಾಗುವಂತೆ ರಸ್ತೆಯುಬ್ಬು (ಹಂಪ್ಸ್) ನಿರ್ಮಿಸಿ ಸಿಗ್ನಲ್ ಅಳವಡಿಸಬೇಕು
– ವಿಶ್ವನಾಥ ಸ್ಥಳೀಯ ನಿವಾಸಿ
‘ಕುಡುಕರ ತಾಣವಾಗಿದೆ’
‘ನಿರ್ವಹಣೆ ಇಲ್ಲದ ಮೇಲ್ಸೇತುವೆಯು ಮದ್ಯವ್ಯಸನಿಗಳ ತಾಣವಾಗಿದೆ. ಜನ ಓಡಾಡದಿರುವುದರಿಂದ ರಾತ್ರಿಯಾದರೆ ಕೆಲ ಪುಂಡರು ಇಲ್ಲಿಗೆ ಬಂದು ಮದ್ಯಪಾನ ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಮೇಲ್ಸೇತುವೆ ಮೇಲೆ ಹೋಗಿ ನೋಡಿದರೆ ಮದ್ಯದ ಬಾಟಲಿಗಳು ಸಿಗರೇಟ್ ಪ್ಯಾಕ್‌ಗಳು ಆಹಾರದ ಪೊಟ್ಟಣದ ಕವರ್‌ಗಳು ಬಿದ್ದಿದ್ದು ಮೇಲ್ಭಾಗ ಗಲೀಜಾಗಿದೆ. ಇದರಿಂದಾಗಿ ಅಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ’ ಎಂದು ಸ್ಥಳೀಯ ಅಂಗಡಿ ಮಾಲೀಕ ಸುರೇಶ್ ಸಮಸ್ಯೆಗಳನ್ನು ಬಿಚ್ಚಿಟ್ಟರು. ‘ಮೇಲ್ಸೇತುವೆ ಬಳಕೆಗೆ ಅನುಪಯುಕ್ತವಾಗತೊಡಗಿದಂತೆ ಅದರ ಎರಡೂ ಕಡೆಯ ಮೆಟ್ಟಿಲುಗಳ ಬಳಿ ಬೀದಿ ವ್ಯಾಪಾರಿಗಳು ತಳ್ಳುವ ಗಾಡಿಗಳನ್ನು ಮತ್ತು ಕೆಲವರು ತಮ್ಮ ವಾಹನಗಳನ್ನು ಅಡ್ಡಲಾಗಿ ತಂದು ನಿಲ್ಲಿಸತೊಡಗಿದ್ದಾರೆ. ಮೇಲ್ಸೇತುವೆ ಸೇರಿದಂತೆ ಬಿಜಿಎಸ್ ವೃತ್ತದ ಪಾದಚಾರಿ ಮಾರ್ಗವು ಒಂದು ರೀತಿಯಲ್ಲಿ ಪಾರ್ಕಿಂಗ್ ತಾಣವಾಗಿದೆ’ ಎಂದು ಹೇಳಿದರು.
‘ದುರಸ್ತಿಗೆ ಪ್ರಸ್ತಾವ ಕಳಿಸಿದ್ದೇವೆ’
‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು (ಕೆಆರ್‌ಡಿಸಿಎಲ್) ಈ ಮೇಲ್ಸೇತುವೆಯನ್ನು ನಿರ್ಮಿಸಿದೆ. ಆರಂಭದಲ್ಲಿ ನಿಗಮದವರು ಮತ್ತು ನಂತರ ಸ್ಥಳೀಯ ಆಡಳಿತ ನಿರ್ವಹಣೆ ಮಾಡುತ್ತಿತ್ತು. ನಂತರ ಅವರು ಸುಮ್ಮನಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಅದರ ಹೊಣೆ ಹೊತ್ತುಕೊಂಡಿತು. ಸದ್ಯ ಮೇಲ್ಸೇತುವೆ ದುರಸ್ತಿಗೆ ಪ್ರಸ್ತಾವ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳಿಸಿ ಕೊಡಲಾಗಿದೆ. ಮಳೆಗೆ ನೆನೆಯದಂತೆ ಶೆಲ್ಟರ್ ನಿರ್ಮಾಣ ತುಕ್ಕು ಹಿಡಿದಿರುವೆಡೆ ವೆಲ್ಡಿಂಗ್ ಅಗತ್ಯ ಇರುವೆಡೆ ಕಬ್ಬಿಣದ ಪ್ಲೇಟ್ ಅಳವಡಿಕೆ ಹಾಗೂ ಪೇಂಟಿಂಗ್ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT