ಪ್ರಯಾಣಿಕರ ತಂಗುದಾಣವಾಯ್ತು ಹೋಟೆಲ್! ಬಿಸಿಲಿನಲ್ಲೇ ನಿಲ್ಲುವ ವಿದ್ಯಾರ್ಥಿಗಳು

ರಾಮನಗರ: ಅರ್ಚಕರಹಳ್ಳಿ ಬಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎದುರು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ತಂಗುದಾಣವು ಸದ್ಯ ಹೋಟೆಲ್ ಆಗಿ ಪರಿವರ್ತನೆ ಆಗಿದೆ. ಇದರಿಂದ ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಿಲ್ಲುತ್ತಿದ್ದಾರೆ.
ತಂಗುದಾಣಕ್ಕೆ ಹೊಂದಿಕೊಂಡಂತೆ ತಳ್ಳುಗಾಡಿಯೊಂದನ್ನು ನಿಲ್ಲಿಸಲಾಗಿದೆ. ಅದನ್ನೇ ಬೀದಿ ಬದಿಯ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಈ ಹೋಟೆಲ್‌ನ ಮಾಲೀಕರ ಸಾಮಾನು–ಸರಂಜಾಮುಗಳೆಲ್ಲವೂ ತಂಗುದಾಣದ ಒಳಗೆ ಶೇಖರಣೆ ಆಗುತ್ತಿವೆ. ಮಧ್ಯಾಹ್ನ 12.30ಕ್ಕೆಲ್ಲ ಹೋಟೆಲ್ ಆರಂಭಗೊಂಡು ಮಧ್ಯಾಹ್ನ 3ರವರೆಗೂ ಇರುತ್ತದೆ. ಹೋಟೆಲ್‌ಗೆ ಬರುವ ಗಿರಾಕಿಗಳೆಲ್ಲ ತಂಗುದಾಣದ ಒಳಗೆ ಸೇರುತ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಒಳಗೆ ಜಾಗವಿಲ್ಲದಂತೆ ಆಗಿದೆ. ಅಂಗಡಿಯಲ್ಲಿ ಸಿಗರೇಟ್ ಮಾರಾಟವೂ ಇದ್ದು, ತಂಗುದಾಣದ ತುಂಬ ಹೊಗೆ ತುಂಬಿರುತ್ತದೆ. ಹೀಗಾಗಿ ಪ್ರಯಾಣಿಕರು ಒಳಗೆ ಕೂರುವಂತಹ ಪರಿಸ್ಥಿತಿ ಇಲ್ಲ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ನಿತ್ಯ ದೂರದ ಊರುಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಇವರೆಲ್ಲ ಬಸ್ಸಿಗೆ ಕಾಯುವುದು ಸಾಮಾನ್ಯವಾಗಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ನಿಲ್ಲತೊಡಗಿದ್ದಾರೆ.
‘ತಂಗುದಾಣದ ಒಳಗೆ ಕೆಲವೊಮ್ಮೆ ಹೆಚ್ಚಿನ ಜನರು ಸೇರುವುದರಿಂದ ನಿಲ್ಲಲು ಜಾಗ ಇರುವುದಿಲ್ಲ. ಹೀಗಾಗಿ ಹೊರಗಡೆಯೇ ನಿಲ್ಲುತ್ತೇವೆ. ಇದರಿಂದ ನಿಲ್ದಾಣವೂ ಇದ್ದು ಇಲ್ಲದಂತೆ ಆಗಿದೆ’ ಎಂದು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಬೇಕು. ತಂಗುದಾಣವನ್ನು ಕೇವಲ ಪ್ರಯಾಣಿಕರ ಉಪಯೋಗಕ್ಕೆ ಮೀಸಲಿಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.