ಶುಕ್ರವಾರ, ನವೆಂಬರ್ 22, 2019
19 °C
ಸರ ಅಪಹರಣಕ್ಕಾಗಿಯೇ ಬೈಕ್‌ ಕದಿಯುತ್ತಿದ್ದ ಆರೋಪಿಗಳು: ಒಂಟಿ ಮಹಿಳೆಯರೇ ಗುರಿ

ಸರಗಳ್ಳರ ಬಂಧನ: 235 ಗ್ರಾಂ ಚಿನ್ನ ವಶ

Published:
Updated:
Prajavani

ರಾಮನಗರ: ಸರಗಳ್ಳತನವನ್ನೇ ತಮ್ಮ ಕಸುಬಾಗಿಸಿಕೊಂಡಿದ್ದ ಇಬ್ಬರು ಕಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ತಲಘಟ್ಟಪುರ ನಿವಾಸಿ ಯತೀಶ್‌ (23) ಹಾಗೂ ತುಂಗಾ ನಗರ ನಿವಾಸಿ ಅರ್ಜುನ (25) ಬಂಧಿತರು. ಇವರಿಂದ ಒಟ್ಟು 235 ಗ್ರಾಂ ಚಿನ್ನ ಹಾಗೂ 4 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೆಂಗಳೂರು ನಗರ ಹಾಗೂ ರಾಮನಗರ ವ್ಯಾಪ್ತಿಯಲ್ಲಿ 10 ಸರಗಳ್ಳತನ ಹಾಗೂ 4 ಬೈಕ್‌ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಂಟಿ ಮಹಿಳೆಯರೇ ಟಾರ್ಗೆಟ್‌: ಆಭರಣ ಧರಿಸಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಬೈಕಿನಲ್ಲಿ ಹಿಂಬಾಲಿಸಿ ಸಮಯ ನೋಡಿ ಚೈನ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

2018ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಆಂಧ್ರಹಳ್ಳಿಯ ಗೀತಾ ಎಂಬುವರ ಮನೆಗೆ ನುಗ್ಗಿದ್ದ ಆರೋಪಿಗಳು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ ಸರ ಕಿತ್ತುಕೊಂಡಿದ್ದರು. 2019ರ ಜುಲೈ 2ರಂದು ಸಂಜೆ ಅತ್ತಿಬೆಲೆ ಠಾಣೆ ವ್ಯಾಪ್ತಿಯ ಅರೇಹಳ್ಳಿ ಬಳಿ ಸುನಿತಾ ಎಂಬುವರ ಸರ ಕಸಿದಿದ್ದರು. ಇದೇ ವರ್ಷ ಆ.2ರಂದು ಕೆ. ಗೊಲ್ಲಹಳ್ಳಿ ಸಮೀಪ ಹೇಮಾವತಿ ಎಂಬುವರ ಬಳಿ, ಅದೇ ದಿನ ಊದಿಪಾಳ್ಯ ಬಳಿ ಲಕ್ಷ್ಮಿ ಎಂಬುವರ ಬಳಿ ಸರ ಕಸಿದಿದ್ದರು. ಕಳೆದ ಆ.20ರಂದು ವಿಶ್ವೇಶ್ವರಯ್ಯ ಲೇಔಟ್‌ ಬಳಿ ಅನಿತಾ ಎಂಬುವರಿಂದ, ಸೆ.9ರಂದು ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಕಾತ್ಯಾಯಿನಿ ಎಂಬುವರಿಂದ, ಅ.11ರಂದು ಮಹದೇಶ್ವರ ನಗರ ಬಳಿ ಆಶಾ ಎಂಬುವರಿಂದ ಚಿನ್ನದ ಸರ ಅಪಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕಳ್ಳವಿಗಾಗಿಯೇ ಬೈಕ್‌ ಕಳ್ಳತನ: ಆರೋಪಿಗಳು ಸರಕಳವು ಮಾಡುವ ಸಲುವಾಗಿಯೇ ಬೈಕ್ ಕಳವು ಮಾಡುತ್ತಿದ್ದರು. ಕದ್ದ ಬೈಕ್‌ನಲ್ಲೇ ಬೀದಿ ಸುತ್ತಿ ಸರ ಎಗರಿಸುತ್ತಿದ್ದರು. ಜ್ಞಾನಭಾರತಿ ನಗರ, ಬಾಣಾವರ, ಹಾಗೂ ಬಿಡದಿ ಪಟ್ಟಣದ ಹನುಮಂತನಗರ, ನಿಂಗೇಗೌಡನ ದೊಡ್ಡಿ ಬಳಿ ಹೀಗೆ ನಾಲ್ಕು ಬೈಕ್‌ಗಳನ್ನು ಆರೋಪಿಗಳು ಬೈಕ್‌ ಕದ್ದಿದ್ದರು. ಇವರ ಜೊತೆ ಇನ್ನೂ ಹಲವು ಮಂದಿ ಕೈ ಜೋಡಿಸಿದ್ದು, ಅವರಲ್ಲಿ ಕೆಲವರು ಈಗಾಗಲೇ ಜೈಲಿನಲ್ಲಿ ಇದ್ದಾರೆ. ಇನ್ನೂ ಇಬ್ಬರು ತಲೆಮರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಕರಣ ಪತ್ತೆಗೆ ಶ್ರಮಿಸಿದ ಮಾಗಡಿ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಬ್ಯಾಡರಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಬಿ.ಎನ್‌. ಶ್ರೀನಿವಾಸ್‌, ಕಂಟ್ರೋಲ್‌ ರೂಮ್‌ನ ಇನ್‌ಸ್ಪೆಕ್ಟರ್‌ ಶೀವಶಂಕರ್‌, ಪಿಎಸ್ಐಗಳಾದ ಮಂಜುನಾಥ್‌, ಶಿವರಾಜು, ಸಿಬ್ಬಂದಿಯಾದ ಉಮೇಶ್, ಬೈರಪ್ಪ, ಜಯಣ್ಣ, ಬಸವರಾಜ ಓಣಿಮನಿ, ಸೋಮನಾಥ ಅವರನ್ನು ಎಸ್ಪಿ ಅಭಿನಂದಿಸಿದರು.

 

ಪ್ರತಿಕ್ರಿಯಿಸಿ (+)