ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: 56 ಶಾಲೆ ದುರಸ್ತಿಗೆ ಬೇಕಿದೆ ₹2.87 ಕೋಟಿ

Published 11 ಜುಲೈ 2024, 4:31 IST
Last Updated 11 ಜುಲೈ 2024, 4:31 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನಲ್ಲಿರುವ ಹಳೆಯ ಹಾಗೂ ಶಿಥಿಲಾವಸ್ಥೆ ತಲುಪಿರುವ 56 ಶಾಲೆಗಳನ್ನು ಶಿಕ್ಷಣ ಇಲಾಖೆಯು ಗುರುತಿಸಿದೆ. ಈ ಶಾಲೆಗಳ ದುರಸ್ತಿ ಕಾರ್ಯಕ್ಕೆ ಸುಮಾರು ₹2.87 ಕೋಟಿಯ ಅಗತ್ಯವಿದೆ ಎಂದು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಕಳಿಸಿ ಕೊಟ್ಟಿದ್ದಾರೆ.

ಚಾವಣಿ ಕುಸಿತ, ಕಿಟಕಿ ಮತ್ತು ಬಾಗಿಲು ಮುರಿದಿರುವುದು, ಶೀಟು ಒಡೆದಿರುವುದು, ಹೆಂಚು ಬಿದ್ದಿರುವುದು, ಸೀಲಿಂಗ್ ಕಿತ್ತಿರುವುದು, ಎಲೆಕ್ಟ್ರಿಕ್ ದುರಸ್ತಿ, ಗೋಡೆ ಬಿರುಕು, ಪೇಂಟಿಂಗ್, ಗೋಡೆ ಶಿಥಿಲವಾಗಿರುವುದು, ಕಾರಿಡಾರ್ ದುರಸ್ತಿ, ಶೌಚಾಲಯ ದುರಸ್ತಿ ಸೇರಿದಂತೆ ಶಾಲಾ ಕೊಠಡಿಗಳಲ್ಲಿ ಆಗಬೇಕಾದ ವಿವಿಧ ರೀತಿಯ ದುರಸ್ತಿ ಕೆಲಸಗಳನ್ನು ಪಟ್ಟಿ ಮಾಡಿ, ಅದಕ್ಕೆ ತಗುಲುವ ಅಂದಾಜು ವೆಚ್ಚದ ಮಾಹಿತಿಯನ್ನು ಸಹ ಬಿಇಒ ನೀಡಿದ್ದಾರೆ.

ದುರಸ್ತಿ ಆಗಬೇಕಾದ ಶಾಲೆಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (ಜಿಎಎಚ್‌ಪಿಎಸ್), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು (ಜಿಎಲ್‌ಪಿಎಸ್), ಸರ್ಕಾರಿ ಪ್ರೌಢಶಾಲೆಗಳು (ಜಿಎಚ್ಎಸ್) ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು (ಜಿಯುಎಚ್‌ಪಿಎಸ್) ಸಹ ಸೇರಿವೆ.

ಹೊಸ ಕಟ್ಟಡದ ಪ್ರಸ್ತಾವಿಲ್ಲ: ಹಲವೆಡೆ ಇರುವ ಶಾಲಾ ಕಟ್ಟಡಗಳು ಅರ್ಧ ಶತಮಾನದಿಂದಿಡಿದು ಕಾಲು ಶತಮಾನದಷ್ಟು ಹಳೆಯದಾಗಿವೆ. ವರ್ಷಗಳಿಂದ ದುರಸ್ತಿ ಕಾಣದೆ ಶಿಥಿಲಗೊಂಡಿರುವ ಈ ಕಟ್ಟಡಗಳು ಶಾಲೆ ನಡೆಸಲು ಯೋಗ್ಯವಾಗಿಲ್ಲ. ದುರಸ್ತಿಯೂ ಯೋಗ್ಯವಾಗಿಲ್ಲದಂತಹ ಇಂತಹ ಶಾಲೆಗಳಿಗೆ ನೆಪ ಮಾತ್ರಕ್ಕೆ ದುರಸ್ತಿ ಮಾಡುವ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

‘ಮೆಂಗಹಳ್ಳಿಯ ಶಾಲಾ ಕಟ್ಟಡವು ಸುಮಾರು 50 ವರ್ಷಗಳಷ್ಟು ಹಳೆಯದು. ಗೋಡೆಗಳು ಬಿರುಕು ಬಿಟ್ಟಿದ್ದು, ಹೆಂಚುಗಳು ಬಿದ್ದು, ಚಾವಣಿಯೂ ಹಾನಿಗೊಂಡಿದೆ. ಇಡೀ ಕಟ್ಟಡ ಪಾಳು ಕಟ್ಟಡದಂತಿದೆ. ಇದನ್ನು ಯಾವುದೇ ಕಾರಣಕ್ಕೂ ದುರಸ್ತಿ ಸಾಧ್ಯವಿಲ್ಲ. ಮಾಡಿದರೂ ಹೆಚ್ಚು ದಿನಗಳು ಉಳಿಯದು. ಆದರೆ, ಈ ಶಾಲೆ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ₹3 ಲಕ್ಷದ ಅಗತ್ಯವಿದೆ ಎಂದು ಬಿಇಒ ನಮೂದಿಸಿದ್ದಾರೆ’ ಎಂದು ಗ್ರಾಮಸ್ಥ ಮಹೇಶ್ ‘ಪ್ರಜಾವಾಣಿ’ಯೊಂದಿಗೆ ಬೇಸರ ವ್ಯಕ್ತಪಡಿಸಿದರು.

ಶಾಲಾ ಕಟ್ಟಡಗಳ ಸ್ಥಿತಿ ಕುರಿತು ಪ್ರತಿಕ್ರಿಯೆ ಪಡೆಯಲು ಬಿಇಒ ಮರಿಗೌಡ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಶಿಥಿಲಗೊಂಡಿರುವ ಹಳೆಯದಾದ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕಿದೆ. ಈ ಕುರಿತು ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಹೊಸ ಕಟ್ಟಡ ನಿರ್ಮಿಸಿ ಶಾಲೆ ಉಳಿಸಿಕೊಡಿ ಎಂದು ಬೇಡಿಕೊಳ್ಳುತ್ತೇನೆ
- ಮಹೇಶ್ ಮೆಂಗಹಳ್ಳಿ ಗ್ರಾಮಸ್ಥ ಚನ್ನಪಟ್ಟಣ ತಾಲ್ಲೂಕು

‘ಶಿಥಿಲ ಕೊಠಡಿಗಳಲ್ಲಿ ಆತಂಕದಲ್ಲೇ ಪಾಠ’

‘ಶಿಕ್ಷಕರು ಶಿಥಿಲ ಕೊಠಡಿಗಳಲ್ಲಿ ಆತಂಕದಲ್ಲೇ ಮಕ್ಕಳಿಗೆ ಪಾಠ ಮಾಡಿಕೊಂಡು ಬರುತ್ತಿದ್ದಾರೆ. ಕಟ್ಟಡ ದುರಸ್ತಿಗೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಬಂಧಿಸಿದ ಶಾಲೆಗಳ ಶಿಕ್ಷಕರು ಮನವಿ ಕೊಟ್ಟಿದ್ದಾರೆ. ಜೊತೆಗೆ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯವರು ಹಾಗೂ ಗ್ರಾಮ ಪಂಚಾಯಿತಿಯವರು ಸಹ ದುರಸ್ತಿ ಹಾಗೂ ಹೊಸ ಕಟ್ಟಡಗಳಿಗೆ ಒತ್ತಾಯಿಸುತ್ತಾ ಬಂದಿದ್ದಾರೆ.

ಬಿಇಒ ಸಹ ದುರಸ್ತಿ ಮತ್ತು ಹೊಸ ಕಟ್ಟಡಕ್ಕೆ ಪ್ರಸ್ತಾವ ಮತ್ತು ಕ್ರಿಯಾಯೋಜನೆ ಕಳಿಸುತ್ತಲೇ ಇದ್ದಾರೆ. ಆದರೆ ಅನುದಾನ ಬಿಡುಗಡೆಯಾಗದೆ ಯಾವ ಕೆಲಸವೂ ನಡೆಯುತ್ತಿಲ್ಲ. ಶಿಥಿಲ ಕಟ್ಟಡಗಳಲ್ಲಿ ಅನಾಹುತ ಸಂಭವಿಸುವುದಕ್ಕೆ ಮುಂಚೆ ಇವುಗಳಿಗೆ ದುರಸ್ತಿ ಭಾಗ್ಯ ಸಿಗಬೇಕಿದೆ. ಆಗ ಶಿಕ್ಷಕರು ಸಹ ನೆಮ್ಮದಿಯಿಂದ ಯಾವುದೇ ಆತಂಕವಿಲ್ಲದೆ ಪಾಠ ಮಾಡಲು ಸಾಧ್ಯವಾಗಲಿದೆ’ ಎಂದು ಚನ್ನಪಟ್ಟಣ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಕೆ. ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT