ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ: ಡಿಸಿಎಂ ಶಿವಕುಮಾರ್

Published : 8 ಸೆಪ್ಟೆಂಬರ್ 2024, 14:35 IST
Last Updated : 8 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ಕನಕಪುರ (ರಾಮನಗರ): ಕಾವೇರಿ ನದಿ ತೀರದ ಜನರ ಬದುಕು ಹಸನುಗೊಳಿಸಲು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಮೇಕೆದಾಟು ಯೋಜನೆ ರಾಜ್ಯಕ್ಕೆ ಅನಿವಾರ್ಯವಾಗಿದೆ. ನ್ಯಾಯಾಲಯದಲ್ಲಿ ಹೋರಾಟ ಮಾಡಿಯಾದರೂ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ತಾಲ್ಲೂಕಿನ ಹಾರೋಬೆಲೆ ಬಳಿಯ ಮೂಲೆಗುಂದಿಯಲ್ಲಿ ಕಾವೇರಿ ನೀರಾವರಿ ನಿಗಮ ನಿರ್ಮಿಸಿರುವ ಅರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಶನಿವಾರ ಪರೀಕ್ಷಾರ್ಥ ಚಾಲನೆ ನೀಡಿ ಅವರು ಮಾತನಾಡಿದರು.

‘ಯೋಜನೆ ಅನುಷ್ಠಾನದಿಂದ ಜಿಲ್ಲೆಯಲ್ಲಿ ಸುಮಾರು 600 ಎಕರೆ ಜಮೀನು ಮುಳುಗಡೆಯಾಗಬಹುದು. ಅವರಿಗೆ ಪರ್ಯಾಯ ಜಮೀನು ನೀಡಲಾಗುವುದು ಅಥವಾ ಕಳೆದುಕೊಳ್ಳುವ ಜಮೀನಿಗೆ ಉತ್ತಮ ಬೆಲೆ ನೀಡಲಾಗುವುದು. ಕೆಲವೆಡೆ ಅರಣ್ಯ ಮುಳುಗಡೆಯಾಗಬಹುದು. ಮಡಿವಾಳ ಹಾಗೂ ಸಂಗಮಕ್ಕೂ ತೊಂದರೆಯಾಗಬಹುದು. ಆದರೂ, ಜನರ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದರು.

‘ಕೇಂದ್ರದ ಬಿಜೆಪಿ ಸರ್ಕಾರ ಸಹಕಾರ ಕೊಟ್ಟರೆ ಎಲ್ಲವೂ ಸಾಧ್ಯ. ಯೋಜನೆಯಿಂದ ಕನಕಪುರ ಜನರಿಗೆ ಅನುಕೂಲವಾಗದಿರಬಹುದು. ಆದರೆ, ಕಾವೇರಿ ಭಾಗದ ಜನರಿಗೆ ಮತ್ತು ಬೆಂಗಳೂರಿನ ಕುಡಿಯುವ ನೀರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಸೇವೆ ಮಾಡುವವರನ್ನು ಸುತ್ತ ಇಟ್ಟುಕೊ’

‘ಬಡವರ ಸೇವೆ ಮಾಡುವವರನ್ನು ಮಾತ್ರ ಸುತ್ತ ಇಟ್ಟುಕೊಳ್ಳಬೇಕು. ನಮ್ಮನ್ನು ಹೊತ್ತು ಮೆರೆಸಿದ ಜನರನ್ನು ಬಿಟ್ಟು ಸೂಟು–ಬೂಟು ಹಾಕಿದವರನ್ನು ಮಾತ್ರ ಪೊಲೀಸರು ಮತ್ತು ಗನ್‌ಮ್ಯಾನ್‌ಗಳು ನಮ್ಮ ಬಳಿಗೆ ಕಳಿಸುತ್ತಾರೆ. ಆ ಕಾರಣಕ್ಕೆ ನಿನ್ನ ಸುತ್ತ ಬಡವರ ಸೇವೆ ಮಾಡುವರು ಮಾತ್ರ ಇಟ್ಟುಕೊ ಎಂದು ಸುರೇಶ್‌ಗೆ ಹೇಳಿದ್ದೀನೆ’ ಎಂದು ಶಿವಕುಮಾರ್ ಹೇಳಿದರು. ‘ರಸ್ತೆ ನೀರಾವರಿ ಶಾಲೆ ಆಸ್ಪತ್ರೆ ವಿದ್ಯುತ್ ಸೇರಿದಂತೆ ಎಲ್ಲಾ ಕೆಲಸಗಳನ್ನು ಕ್ಷೇತ್ರಕ್ಕೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ವ್ಯತ್ಯಾಸವಾಯಿತು. ಏಕೆ ಎಂದು ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಬೇಕು’ ಎಂದರು.

‘ನನ್ನ ಕ್ಷೇತ್ರ ಎಂದು ಗೊತ್ತಾದ ಮೇಲೆ ಬರುವುದನ್ನೇ ಬಿಟ್ಟರು’

‘ಸಾತನೂರು ಮತ್ತು ಕನಕಪುರ ಭಾಗದಲ್ಲಿ ನನ್ನನ್ನು ಜನಪ್ರತಿನಿಧಿಯಿಂದಾಗಿ ಆಯ್ಕೆ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಅಮುಲ್ ಸಂಸ್ಥೆಗಿಂತ ಉತ್ತಮವಾದ ಉಪಕರಣಗಳನ್ನು ಶಿವನಹಳ್ಳಿಯ ಬಳಿಯ ಡೈರಿಯಲ್ಲಿ ಸ್ಥಾಪಿಸಿದ್ದೇನೆ. ಅಮಿತ್ ಶಾ ಅವರ ಕಚೇರಿ ಅಧಿಕಾರಿಗಳು ಬಂದು ಅವುಗಳನ್ನು ವೀಕ್ಷಿಸಿದ್ದರು. ಇದು ಶಿವಕುಮಾರ್ ಕ್ಷೇತ್ರ ಎಂದು ತಿಳಿದ ತಕ್ಷಣ ಬರುವುದನ್ನೇ ಬಿಟ್ಟರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT