ಭಾನುವಾರ, ಜೂಲೈ 12, 2020
22 °C
ಕೈ ಪಾಳಯದಲ್ಲಿ ಸಂಭ್ರಮ

ಜೆಡಿಎಸ್‌ ಕೈ ಜಾರಿದ ಅಧಿಕಾರ; ಕಾಂಗ್ರೆಸ್‌ ತೆಕ್ಕೆಗೆ ರಾಮನಗರ ಎಪಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಗಾದಿಯನ್ನು ಜೆಡಿಎಸ್‌ನಿಂದ ಕಿತ್ತುಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿ ಆಗಿದ್ದು, ಲಾಟರಿ ಮೂಲಕ ವಿಜಯಲಕ್ಷ್ಮಿ ಒಲಿದಿದೆ.

ಮಾರುಕಟ್ಟೆಯ ಮೂರನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ಎಪಿಎಂಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‍ ಬೆಂಬಲಿತ ವಿ.ಎಚ್. ರಮೇಶ್ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ವೆಂಕಟರಂಗಯ್ಯ ಚುನಾಯಿತರಾದರು.

ಅಧ್ಯಕ್ಷ ಸ್ಥಾನಕ್ಕೆ ವಿ.ಎಚ್. ರಮೇಶ್ ಮತ್ತು ಜೆಡಿಎಸ್‌ನ ದೊರೆಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟರಂಗಯ್ಯ ಮತ್ತು ಎಚ್.ಎನ್. ಅನುಸೂಯಗೌಡ ನಾಮಪತ್ರ ಸಲ್ಲಿಸಿದರು. ಯಾರೊಬ್ಬರು ನಾಮಪತ್ರ ಹಿಂಪಡೆಯದ ಹಿನ್ನಲ್ಲೆಯಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ನರಸಿಂಹಮೂರ್ತಿ ಚುನಾವಣೆ ನಡೆಸಿದರು. ಸಭೆಯಲ್ಲಿ ಹಾಜರಿದ್ದ 11 ಸದಸ್ಯರು ಮತದಾನ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ವಿ.ಎಚ್.ರಮೇಶ್ ಮತ್ತು ದೊರೆಸ್ವಾಮಿ ತಲಾ 5 ಮತಗಳನ್ನು ಪಡೆದರು, ಒಂದು ಮತ ಅಸಿಂಧುವಾಗಿತ್ತು. ಇಬ್ಬರು ತಲಾ ಐದು ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿಗಳು ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಕೊನೆಗೆ ರಮೇಶ್‍ಗೆ ವಿಜಯಲಕ್ಷ್ಮಿ ಒಲಿಯಿತು.

ಉಪಾಧ್ಯಕ್ಷ ಸ್ಥಾನದ ಮತ ಎಣಿಕೆಯಲ್ಲಿ ಜೆಡಿಎಸ್ ಬೆಂಬಲಿತ ವೆಂಕಟರಂಗಯ್ಯ ಅವರಿಗೆ 7 ಮತಗಳು, ಎಚ್.ಎನ್. ಅನುಸೂಯಗೌಡ ಅವರಿಗೆ 4 ಮತಗಳು ಲಭಿಸಿದ್ದರಿಂದ ವೆಂಕಟರಂಗಯ್ಯ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಎಪಿಎಂಸಿ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಪಿಎಂಸಿ ಮುಂಭಾಗ ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ರಮೇಶ್ ಮಾತನಾಡಿ ‘ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಚುನಾಯಿತನಾಗಿದ್ದೇನೆ. ಎಲ್ಲರ ಸಹಕಾರ ಪಡೆದು ರೈತರ ಪರವಾದ ಕೆಲಸ ಮಾಡುತ್ತೇನೆ. ರೈತರು ಮತ್ತು ವರ್ತಕರನ್ನು ವಿಶ್ವಾಸಕ್ಕೆ ಪಡೆದು ಮಾದರಿ ಎಪಿಎಂಸಿಯಾಗಿ ರೂಪಿಸಲು ಶ್ರಮಿಸುತ್ತೇನೆ’ ಎಂದರು.

ಪಕ್ಷದ ಮುಖಂಡರಾದ ಇಕ್ಬಾಲ್ ಹುಸೇನ್, ವಿ.ಎಚ್. ರಾಜು, ಚೇತನ್ ಕುಮಾರ್, ಲೋಹಿತ್, ಬಿಡದಿ ರೈತ ಸೇವಾ ಸಹಕಾರ ಸಂಘದ ನಿರ್ದೇಶಕ ಆರ್. ಮಹೇಶ್, ಮಾಡಬಾಳ್ ಜಯರಾಮು ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಜೆಡಿಎಸ್‌ನಲ್ಲಿ ಅಸಮಾಧಾನ
ಬಹುಮತವಿದ್ದರೂ ಎಪಿಎಂಸಿಯಲ್ಲಿ ಅಧಿಕಾರ ಕಳೆದುಕೊಂಡಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟು 11 ಸದಸ್ಯಬಲದ ಎಪಿಎಂಸಿಯಲ್ಲಿ ಆರು ಜೆಡಿಎಸ್‌ ಬೆಂಬಲಿತರು ಹಾಗೂ 4 ಕಾಂಗ್ರೆಸ್‌ ಬೆಂಬಲಿತರು ಹಾಗೂ ಒಬ್ಬರು ಸ್ವತಂತ್ರವಾಗಿ ಆಯ್ಕೆಯಾಗಿದ್ದರು. ಹಿಂದಿನ ಎರಡು ಬಾರಿ ಜೆಡಿಎಸ್‌ ಅಧಿಕಾರ ಹಿಡಿದಿತ್ತು. ಈ ಬಾರಿ ಹಾಲಿ ಅಧ್ಯಕ್ಷ ದೊರೆಸ್ವಾಮಿ ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಹೊತ್ತು ಕಣಕ್ಕೆ ಇಳಿದಿದ್ದರು. ಆದರೆ ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲಷ್ಟೇ ಜೆಡಿಎಸ್ ಶಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು