ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ಫಲಿತಾಂಶ ಬಿಜೆಪಿ ನಿರ್ಧಾರಗಳಿಗೆ ಉತ್ತರ: ಡಿ.ಕೆ.ಶಿವಕುಮಾರ್

Last Updated 23 ಡಿಸೆಂಬರ್ 2019, 14:40 IST
ಅಕ್ಷರ ಗಾತ್ರ

ಕನಕಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ದೇಶದ ಏಕತೆ ಮತ್ತು ಒಗ್ಗಟ್ಟನ್ನು ಒಡೆಯುವ ಕೆಲಸವನ್ನುಬಿಜೆಪಿ ಮಾಡುತ್ತಿದೆ. ಇದಕ್ಕೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿದ್ದು ಸರ್ಕಾರದ ವಿರುದ್ಧ ಜನತೆ ತಿರುಗಿಬಿದ್ದಿದ್ದಾರೆ. ಜಾರ್ಖಂಡ್‌ ರಾಜ್ಯದ ಫಲಿತಾಂಶ ಬಿಜೆಪಿ ತೆಗೆದುಕೊಂಡ ನಿರ್ಧಾರಗಳಿಗೆ ಉತ್ತರ’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ನಡೆಸಿದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ಎಲ್ಲಾ ತೀರ್ಮಾನಗಳು ದೇಶದ ಜನತೆಯನ್ನುಇಕ್ಕಟ್ಟಿಗೆ ಸಿಲುಕಿಸುತ್ತಿವೆ. ನೋಟು ರದ್ದತಿಯಿಂದ ಸಾವಿರಾರು ಕಾರ್ಖಾನೆಗಳು ಮುಚ್ಚುತ್ತಿವೆ. ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದ ಅವರು, ಕಸ ಗುಡಿಸುವ, ಪಂಚರ್‌ ಹಾಕುವ ಮೂಲಕ ಸ್ವಾಭಿಮಾನದ ಬದುಕು ನಡೆಸುತ್ತಿರುವ ಬಡವರನ್ನು ಬಿಜೆಪಿಯವರು ಅವಮಾನಿಸಿದ್ದಾರೆ. ಬಡವರು ಕಳ್ಳತನ ಮಾಡಿಲ್ಲ; ದರೋಡೆ ಮಾಡಿಲ್ಲ, ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿಲ್ಲವೆಂದರೆ ನೀವು ಜಾರಿಗೆ ತಂದ ಸ್ವಚ್ಛ ಭಾರತ್‌ ಹೇಗೆ ಆಗುತ್ತಿತ್ತು ಎಂದು ಕಿಡಿಕಾರಿದರು.

‘ಅವರು ಮಾಡುತ್ತಿರುವ ಸ್ವಚ್ಚತೆಯಿಂದ ನಿಮ್ಮ ಕಾರ್ಯಕ್ರಮ ನಡೆಯುತ್ತಿದೆ. ಅವರು ಪಂಚರ್‌ ಹಾಕಿಲ್ಲವೆಂದರೆ ನೀವು ಹೋಗಿ ಹಾಕುತ್ತಿದ್ರ, ಅವರ ಎದೆ ಸೀಳಿದ್ರೆ ನಾಲ್ಕು ಅಕ್ಷರ ಬರಲ್ಲ ಎಂದು ಅವಮಾನಿಸಿದ್ದೀರಿ; ಅವರು ವಿದ್ಯಾವಂತರಿಲ್ಲದಿರಬಹುದು, ಆದರೆ ನಿರುದ್ಯೋಗಿಯಾಗಿ ಸಮಾಜಕ್ಕೆ ಭಾರವಾಗದೆ ಸ್ವಂತ ಉದ್ಯೋಗದಿಂದ ಜೀವನ ಕಟ್ಟಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಮೋದಿ ಮತ್ತು ಬಿಜೆಪಿಗೆ ಅಂತ್ಯದ ಕಾಲ ಆರಂಭವಾಗಿದೆ ಎಂದು ಎಚ್ಚರಿಸಿದ ಅವರು, ದೇಶದಲ್ಲಿ ದ್ವೇಷದ ಮನೋಭಾವನೆ ಬಿತ್ತಬೇಡಿ, ಯುವಕರು, ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಬೇಡಿ, ಹಾಕಿರುವ ಕೇಸುಗಳನ್ನು ವಾಪಸ್‌ ಪಡೆಯಿರಿ, ಇಲ್ಲವಾದಲ್ಲಿ ಇನ್ನಷ್ಟು ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ಕಾಂಗ್ರೆಸ್‌ ಮುಖಂಡರು, ಮುಸ್ಲಿಂ ವಿವಿಧ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT