ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ’

ಎರಡನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ
Last Updated 8 ಫೆಬ್ರುವರಿ 2021, 17:37 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಖುದ್ದು ಲಸಿಕೆ ಪಡೆಯುವ ಮೂಲಕ ಇತರರನ್ನು ಹುರಿದುಂಬಿಸಿದರು.

‘ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸರ್ಕಾರ ಕೊರೊನಾ ಸೇನಾನಿಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡುತ್ತಿದ್ದು, ನೋಂದಣಿ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆದುಕೊಳ್ಳಿ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸಹ ಕೋವಿಶೀಲ್ಡ್ ಲಸಿಕೆ ಪಡೆದರು. ಈ ಸಂದರ್ಭ ಮಾತನಾಡಿದ ಅವರು ‘ನೋಂದಣಿ ಮಾಡಿಕೊಂಡವರು ಲಸಿಕೆ ನೀಡುವ ಕೇಂದ್ರಕ್ಕೆ ಬಂದಲ್ಲಿ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ ಎರಡು ನಿಮಿಷದಲ್ಲಿ ಲಸಿಕೆ ನೀಡಲಾಗುವುದು. ನಂತರ ಅರ್ಧ ಗಂಟೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸುವರು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಖಾತ್ರಿ ಪಡಿಸಿಕೊಂಡ ನಂತರ ಕಳುಹಿಸಿಕೊಡುತ್ತಾರೆ’ ಎಂದು ವಿವರಿಸಿದರು.

‘ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ತೊಂದರೆಗಳ ಬಗ್ಗೆ ಪ್ರತಿಯೊಬ್ಬರಿಗೆ ತಿಳಿದಿದೆ. ಈಗಾಗಲೇ ಮೊದಲ ಹಂತದಲ್ಲಿ ಸಾವಿರಾರು ಮಂದಿ ಲಸಿಕೆ ಪಡೆದುಕೊಂಡಿದ್ದು, ಯಾರಿಗೂ ಸಹ ತೊಂದರೆಯಾಗಿಲ್ಲ. ಎಲ್ಲರೂ ಲಸಿಕೆ ಪಡೆದು ಕೋವಿಡ್-19 ವಿರುದ್ಧ ಹೋರಾಡಲು ಸಹಕರಿಸಬೇಕು’ ಎಂದು ಕೋರಿದರು.

ಲಸಿಕೆ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ‘ಕೋವಿಡ್-19 ತಡೆಗಟ್ಟಲು ಕಳೆದ ಕೆಲವು ತಿಂಗಳಿನಿಂದ ಹೋರಾಟವನ್ನೇ ನಡೆಸಿದ್ದೇವೆ. ಕಂದಾಯ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಅವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಯಾರು ಕೂಡ ಲಸಿಕೆಯಿಂದ ವಂಚಿತರಾಗಬೇಡಿ’ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಪದ್ಮಾ ಮಾತನಾಡಿ ‘ಎರಡನೇ ಹಂತದದಲ್ಲಿ ಕಂದಾಯ ಇಲಾಖೆಯಿಂದ 613, ಪಂಚಾಯತ್ ರಾಜ್ ಇಲಾಖೆಯಿಂದ 1699, ಗೃಹ ಇಲಾಖೆಯಲ್ಲಿ ಹೋಂ ಗಾರ್ಡ್‌, ಪೊಲೀಸ್ ಹಾಗೂ ಕಾರಾಗೃಹ ಸಿಬ್ಬಂದಿ ಸೇರಿದಂತೆ 1363 ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ 727 ಮಂದಿ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ರಾಮನಗರ ತಾಲ್ಲೂಕು ವೈದ್ಯಾಧಿಕಾರಿ ಡಾ. ಶಶಿಕಲಾ ಇದ್ದರು.

***

ಅಂಕಿ–ಅಂಶ
8737:
ಮೊದಲ ಹಂತದ ಲಸಿಕೆ ಕಾರ್ಯಕ್ಕೆ ನೋಂದಾಯಿಸಿಕೊಂಡವರು
5958: ಮೊದಲ ಹಂತದಲ್ಲಿ ಲಸಿಕೆ ಪಡೆದವರು
4402:ಎರಡನೇ ಹಂತದ ಲಸಿಕೆ ಕಾರ್ಯಕ್ಕೆ ನೋಂದಾಯಿಸಿಕೊಂಡವರು

**
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
-ಎಂ.ಎಸ್. ಅರ್ಚನಾ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT