ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಂದ ಮಾತ್ರ ಸಂಸ್ಕೃತಿ ಉಳಿವು: ನಿರ್ದೇಶಕ ಟಿ.ಎಸ್. ನಾಗಾಭರಣ

'ಬಯಲುಸಿದ್ದನ ವಚನಗಳು', 'ಮಾಯಾಜಿಂಕೆ ಜೀವ ತಳೆದು' ಪುಸ್ತಕ ಬಿಡುಗಡೆ
Last Updated 20 ಏಪ್ರಿಲ್ 2019, 13:51 IST
ಅಕ್ಷರ ಗಾತ್ರ

ರಾಮನಗರ: ‘ನಮ್ಮ ಸಂಸ್ಕೃತಿ ಮಹಿಳೆಯರಿಂದ ಮಾತ್ರ ಇಲ್ಲಿಯವರೆಗೆ ಉಳಿದುಕೊಂಡು ಬಂದಿದೆ’ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಅವರ 'ಬಯಲುಸಿದ್ದನ ವಚನಗಳು', 'ಮಾಯಾಜಿಂಕೆ ಜೀವ ತಳೆದು' ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂಸ್ಕೃತಿಯಲ್ಲಿ ಮಹಿಳೆಯನ್ನು ವಿವಿಧ ಹೆಸರುಗಳಿಂದ ಕರೆಯುತ್ತೇವೆ. ಮಹಿಳೆಯರು ದೇವತೆಗಳಿಗಿಂತಲೂ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವತೆಗಳು ನಾಲ್ಕು ಗೋಡೆಗಳ ಮಧ್ಯೆ ಇರುತ್ತಾರೆ. ಆದರೆ ಮಹಿಳೆಯರು ಸಮಾಜದ ಮಧ್ಯೆ ಇದ್ದು ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳಾದ ನೀವು ನಿಮ್ಮದೇ ಆದ ಜೀವನವನ್ನು ರೂಪಿಸಿಕೊಳ್ಳಬೇಕು. ನೀವು ಪದವಿಯಲ್ಲಿ ಓದುವ ಪಠ್ಯ ಉಪಯೋಗಕ್ಕೆ ಬರದೇ ಹೋಗಬಹುದು. ವೃತ್ತಿಗೆ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಪ್ರವೃತ್ತಿಗೆ ಯಾವುದರ ಅವಶ್ಯಕತೆಯೂ ಬೇಕಾಗಿಲ್ಲ, ನಿಮ್ಮಲ್ಲಿರುವ ಪ್ರತಿಭೆಯ ಸಾಕು’ ಎಂದು ಅವರು ಹೇಳಿದರು.

‘ನಾನು 'ಅಲ್ಲಮ' ಚಿತ್ರವನ್ನು ನಿರ್ದೇಶಿಸಿದಾಗ ಎಲ್ಲರೂ ಬಸವಣ್ಣನನ್ನು ಯಾಕೆ ಸರಿಯಾಗಿ ಚಿತ್ರಿಸಿಲ್ಲ ಎಂದು ಕೇಳಿದರು. ಜನರು ಈಗಲೂ ವ್ಯಕ್ತಿ ಹಾಗೂ ವೈಯುಕ್ತಿಕ ಹಿನ್ನೆಲೆಯಲ್ಲಿ ಯೋಚನೆ ಮಾಡುತ್ತಿದ್ದಾರೆಯೆ ಹೊರೆತು ವಸ್ತುನಿಷ್ಠವಾಗಿ ಚಿಂತಿಸುತ್ತಿಲ್ಲ. ಇದರಿಂದ ವಚನಕಾರರ ಆಶಯಗಳು ಈಗಲೂ ಗಾಯನದಲ್ಲಿಯೇ ಉಳಿದುಕೊಂಡಿವೆ’ ಎಂದು ತಿಳಿಸಿದರು.

ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ಶ್ರೇಷ್ಠವಾದುದಾಗಿದೆ. ಆಧುನಿಕತೆಯ ಉತ್ಕರ್ಷದಲ್ಲಿರುವ ಈ ಹೊತ್ತಿಗೂ ‘ವಚನ’ ಎನ್ನುವುದು ಒಂದು ಪ್ರಜ್ಞೆಯಾಗಿ ಕಾಡುತ್ತಿದೆ. ಬದುಕು ದೊಡ್ಡದು ಎನ್ನುವ ಸತ್ಯಕ್ಕೆ ಮುಖಾಮುಖಿಯಾಗುವ ದೊಡ್ಡ ಎಚ್ಚರವೊಂದು ವಚನ ಸಾಹಿತ್ಯದ ಮೂಲಕ ತೆರೆದುಕೊಂಡಿದೆ. ಕನ್ನಡದ ವೈಚಾರಿಕತೆಯ ದಿಟ್ಟಹೆಜ್ಜೆಗಳನ್ನು ವಚನಕಾರರೊಂದಿಗೆ ಗುರುತಿಸುವುದಾದರೂ ಈ ನೆಲದ ಜಾಗೃತಿಯ ಹೆಮ್ಮೆ ಎಂದು ತಿಳಿಸಿದರು.

ಬೈರೇಗೌಡರು ಬಯಲು ಸಿದ್ದ ಅಂಕಿತ ನಾಮದ ಮೂಲಕ ರಚಿಸಿರುವ 202 ವಚನಗಳಲ್ಲಿ ಸಮಾಜದಲ್ಲಿನ ವಿವಿಧ ವಿಷಯಗಳನ್ನು ಕಾಣಬಹುದಾಗಿದೆ. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಿರುವ ಇವರ ಪ್ರಯತ್ನ ಶ್ಲಾಘನೀಯ. ಆಧುನೀಕರಣ, ಜಾಗತೀಕರಣದ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಚನಗಳ ಮೂಲಕ ಸಮಸಮಾಜವನ್ನು ನಿರ್ಮಿಸಬಹುದು ಎಂದರು.

ಇವರ 'ಮಾಯಾಜಿಂಕೆ ಜೀವ ತಳೆದು' ಕವನ ಸಂಕಲನದಲ್ಲಿ 48 ಕವಿತೆಗಳಿವೆ. ಎಲ್ಲರಲ್ಲೂ ಮಾಯಜಿಂಕೆ ವಿವಿಧ ರೂಪದಲ್ಲಿ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಕಾವ್ಯಾಸಕ್ತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಸುಸಂಸ್ಕೃತ ಸಮಾಜವನ್ನು ನಿರ್ಮಿಸಬಹುದು ಎಂದು ತಿಳಿಸಿದರು.

ಬಯಲುಸಿದ್ದ ಚಾರಿಟಬಲ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ನಂಜುಂಡಿ ಬಾನಂದೂರು ಮಾತನಾಡಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಾಗೂ ಪ್ರತಿಭೆಗಳಿಗೆ ವೇದಿಕೆಗಳನ್ನು ಕಲ್ಪಿಸಿಕೊಡಲು ಟ್ರಸ್ಟ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಮಕ್ಕಳಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ. ರಾಜಣ್ಣ, ಜಾನಪದ ವಿದ್ವಾಂಸ ಡಾ.ಎಂ. ಬೈರೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಇದ್ದರು.

ಗಾಯಕರಾದ ದೇಸೀ ಮೋಹನ್, ಪಂಚಮ್, ಸುಚ್ಚಿನ್ ಶರ್ಮ ಬಯಲು ಸಿದ್ದನ ವಚನಗಳನ್ನು ಪ್ರಸ್ತುತ ಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ಬಯಲುಸಿದ್ದ ಚಾರಿಟಬಲ್ ಟ್ರಸ್ಟಿನ ಸಹಯೋಗದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿನಿ ಸ್ವಾತಿ ಪ್ರಾರ್ಥಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಪಿ. ರೂಪ ಸ್ವಾಗತಿಸಿದರು. ಟಿ.ವಿ. ಪವಿತ್ರ ನಿರೂಪಿಸಿದರು. ಚಂದ್ರಿಕಾ, ವಿಶಾಲಾಕ್ಷಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT