ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟ: ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕೆ
Last Updated 4 ಮೇ 2022, 20:01 IST
ಅಕ್ಷರ ಗಾತ್ರ

ರಾಮನಗರ: ‘ಸಚಿವ ಅಶ್ವತ್ಥನಾರಾಯಣ ಕರ್ನಾಟಕ ಕಂಡಂತಹ ಅತ್ಯಂತ ಭ್ರಷ್ಟ ರಾಜಕಾರಣಿಗಳಲ್ಲಿ ಒಬ್ಬರು. ಆದರೂ ನಾನು ಬ್ರಾಹ್ಮಣನ ಥರ ಇದ್ದೇನೆ, ಶುದ್ಧ ರಾಜಕಾರಣಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.

ದೊಡ್ಡಾಲಹಳ್ಳಿಯಲ್ಲಿ ಬುಧವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ರಾಜ್ಯಕ್ಕೆ ಅಮಿತ್‌ ಶಾ ಬರುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಅಶ್ವತ್ಥನಾರಾಯಣ ಅವರನ್ನು ಟಾರ್ಗೆಟ್ ಮಾಡಿಲ್ಲ. ಸತ್ಯ ಜನರ ಮುಂದೆ ಇಟ್ಟಿದ್ದೇವೆ. ನಮ್ಮ ವಿರುದ್ಧ ಏನು ಬೇಕಾದರೂ ತನಿಖೆ ಮಾಡಲಿ. ಅದನ್ನೆಲ್ಲ ಎದುರಿಸಲು ಸಿದ್ಧರಿದ್ದೇವೆ’ ಎಂದರು.

ಬಿಜೆಪಿ ಮಂತ್ರಿಗಳಿಂದಲೇ ಅಶ್ವತ್ಥನಾರಾಯಣ ವಿರುದ್ಧ ಷಡ್ಯಂತ್ರ ನಡದಿದೆ ಎಂಬ ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿ ‘ಪಕ್ಕದ ಮನೆಯಲ್ಲಿ ಇದ್ದವರೇ ಕಲ್ಲು ಹೊಡೆಯುವುದು ಸಹಜ. ಬಹುತೇಕ ಸಂದರ್ಭದಲ್ಲಿ ಹತ್ತಿರ ಇದ್ದವರೇ ಮಾಹಿತಿ ನೀಡುತ್ತಾರೆ. ಹೀಗಾಗಿ ಕುಮಾರಸ್ವಾಮಿ ಮಾತು ನಿಜ ಇದ್ದರೂ ಇರಬಹುದು’ ಎಂದರು.

‘ಪಿಎಸ್‌ಐ ಪರೀಕ್ಷೆಯಲ್ಲಿ ನಾಲ್ಕನೇ ರ್‍ಯಾಂಕ್ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರು ವಿಚಾರಣೆಗೆ ನೋಟಿಸ್‌ ನೀಡಿದ್ದರು. ಆದರೆ ಸಚಿವರ ಸಂಬಂಧಿ ಹೇಳಿದ ನಂತರ ವಿಚಾರಣೆ ಮಾಡದೇ ಕಳುಹಿಸಿದ್ದಾರೆ. ಇದರ ಅರ್ಥ ಏನು?’ ಎಂದು ಶಿವಕುಮಾರ್ ಪ್ರಶ್ನಿಸಿದರು.

‘ರಾಮನಗರ ಜಿಲ್ಲೆಯ ಮೂರ್ನಾಲ್ಕು ಮಂದಿಯೂ ಪೊಲೀಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ನಮಗೆ ಬೇಕಾದ ಹುಡುಗರೂ ಇದ್ದಾರೆ. ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಅವರಿಗೆ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ ಇಲ್ಲ ಅವರ ಸಂಬಂಧಿಕರು ಸಹಾಯ ಮಾಡಿದ್ದಾರೋ ಗೊತ್ತಿಲ್ಲ. ಅಂಗಡಿ ತೆರೆದಾಗ ಗ್ರಾಹಕರು ಬರುವುದು ಸಹಜ. ಸರ್ಕಾರ ಭ್ರಷ್ಟಾಚಾರಕ್ಕೆ ಮುಂದಾಗಿದ್ದರಿಂದಲೇ ಕೆಲವರು ನೌಕರಿ ಆಸೆಗೆ ಸಾಲ–ಸೋಲ ಮಾಡಿ ಹಣ ಕೊಟ್ಟು ಈಗ ಸಿಕ್ಕಿಹಾಕಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT