ಗುರುವಾರ , ಅಕ್ಟೋಬರ್ 17, 2019
27 °C

ಸಿಡಿಲು ಬಡಿದು ₹ 15 ಲಕ್ಷ ವಸ್ತುಗಳು ನಾಶ

Published:
Updated:
Prajavani

ಹಾರೋಹಳ್ಳಿ (ಕನಕಪುರ): ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸಿಡಿಲು ಬಡಿದು ಮನೆಯಲ್ಲಿನ ಗೋದಾಮಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಸುಮಾರು ₹ 15 ಲಕ್ಷ ಬೆಲೆಬಾಳುವ ಡಿ.ಜೆ. ಸೌಂಡ್‌ ಸಿಸ್ಟಮ್‌ ನಾಶವಾಗಿದೆ.

ಮುದುವಾಡಿ ಗ್ರಾಮದ ತಿಮ್ಮಮ್ಮ ಉರುಫ್‌ ಲಕ್ಷ್ಮಿದೇವಮ್ಮ ಬಿನ್‌ ನಾರಾಯಣಪ್ಪ ಎಂಬುವರಿಗೆ ಸೇರಿದ ಮನೆಯಾಗಿದ್ದು ಲಕ್ಷ್ಮಿದೇವಮ್ಮ ಅವರು ಮದುವೆ ಸಭೆ ಸಮಾರಂಭಗಳಲ್ಲಿ ಮೈಕ್‌ಸೆಟ್‌ ಮತ್ತು ಸೌಂಡ್‌‌ ಸಿಸ್ಟಮ್‌ ಹಾಕುವ ಡಿ.ಜೆ. ಸೌಂಡ್‌ ಸಿಸ್ಟಮ್‌ ನಡೆಸುತ್ತಿದ್ದು ಎಲ್ಲ ಉಪಕರಣಗಳನ್ನು ಇದೇ ಮನೆಯಲ್ಲಿ ಗೋದಾಮು ಮಾಡಿಕೊಂಡು ಇಟ್ಟಿದ್ದರು.

ಗುರುವಾರ ಬೆಳಿಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಜೋರಾಗಿ ಸಿಡಿಲು ಬಡಿದಾಗ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಅಕ್ಕಪಕ್ಕ ಮನೆಯವರು ಲಕ್ಷ್ಮಿದೇವಮ್ಮ ಅವರ ಮನೆಗೆ ತಿಳಿಸಿದ್ದಾರೆ.

ಅವರು ಬಂದು ಬಾಗಿಲು ತೆಗೆದು ನೋಡುವಷ್ಟರಲ್ಲಿ ಮನೆಯಲ್ಲಿ ದೊಡ್ಡ ಬೆಂಕಿಯ ಜ್ವಾಲೆ ಆವರಿಸಿಕೊಂಡಿದ್ದು ಅದರಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.

ಸಂತ್ರಸ್ತರು ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಾಲ್ಲೂಕು ಆಡಳಿತ ಮತ್ತು ಪಂಚಾಯಿತಿಗೆ ಸಿಡಿಲಿನಿಂದ ಆಗಿರುವ ನಷ್ಟ ಕುರಿತು ದೂರು ನೀಡಿದ್ದು ಪ್ರಕೃತಿ ವಿಕೋಪದಡಿ ಸೂಕ್ತ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದಾರೆ.

Post Comments (+)