ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ವಿದ್ಯುತ್‌ ಸರಬರಾಜುಗೆ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಆಕ್ರೋಶ

ರೈತರ ಪ್ರತಿಭಟನೆ
Last Updated 11 ಫೆಬ್ರುವರಿ 2019, 14:30 IST
ಅಕ್ಷರ ಗಾತ್ರ

ಮಾಗಡಿ: ಸಮರ್ಪಕ‌ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಬೆಸ್ಕಾಂ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿ‌ದರು. ಸರ್ಕಾರ ನಿಗದಿಪಡಿಸಿರುವ 3ಪೇಸ್‌ ವಿದ್ಯುತ್‌ ರಾತ್ರಿ ಬದಲು ಬೆಳಿಗ್ಗೆ 4ರಿಂದ 11ವರಗೆ ನೀಡಬೇಕು. ರಾತ್ರಿ ವೇಳೆ ಹೊಲದಲ್ಲಿ ನೀರು ಹಾಯಿಸಲು ಹೋಗುವಾಗ ವಿಷಜಂತು ಮತ್ತು ಚಿರತೆ, ಕರಡಿ ಕಾಟ ಜಾಸ್ತಿಯಾಗಿದೆ. ರಾತ್ರಿ ವಿದ್ಯುತ್‌ ಕಡಿತಗೊಳಿಸುವುದರಿಂದ ರೈತರ ದನ, ಕುರಿ –ಮೇಕೆ ಕಳವು ಜಾಸ್ತಿಯಾಗಿದೆ. ಕಳವು ಆಗಿರುವ ದನ– ಕರುಗಳಿಗೆ ಬೆಸ್ಕಾಂ ಇಲಾಖೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಎಚ್‌ಡಿವಿಎಸ್‌ ಯೋಜನೆಯಲ್ಲಿ ರೈತರನ್ನು ವಂಚಿಸಲಾಗಿದೆ. ನಿರಂತರ ಜ್ಯೋತಿ ಕಾಮಗಾರಿ ಕುಂಟುತ್ತಾ ನಡೆದಿದೆ. ಪ್ರತಿ ತಿಂಗಳು ರೈತರ ಸಭೆ ಕರೆದು ವಿದ್ಯುತ್‌ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಹಳೆ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋದರೆ ಮತ್ತೊಂದು ಟಿ.ಸಿ ಕೂಡದೆ ರೈತರಿಂದ ಹಣ ಕಟ್ಟಿಸಿಕೊಂಡು ಕಚೇರಿಗೆ ಅಲೆದಾಡಿಸುವುದು ತಪ್ಪಿಸಬೇಕು. ಮುರಿದು ಬಿದ್ದ ವಿದ್ಯುತ್‌ ಕಂಬ ಬದಲಿಸಿಲ್ಲ. ರೈತರನ್ನು ಹೀಯಾಳಿಸುವ ಕೆಲಸ ಬಿಡಬೇಕು. 15 ದಿನಗಳ ಒಳಗೆ ಸಮಸ್ಯೆಗಳನ್ನು ಈಡೇರಿಸದಿದ್ದರೆ ರಸ್ತೆ ತಡೆ ನಡೆಸಿ, ‌ ಹೋರಾಟ ಮಾಡಲಾಗುವುದು ಎಂದರು.

ಪಟ್ಟಣದಲ್ಲಿನ ಕಾರ್ಖಾನೆಗಳಿಗೆ ನಿರಂತರ ವಿದ್ಯುತ್‌ ಸರಬರಾಜು ಮಾಡುವ ಬೆಸ್ಕಾಂ ಅಧಿಕಾರಿಗಳು, ರೈತರಿಗೆ ಸರಿಯಾಗಿ ವಿದ್ಯುತ್‌ ನೀಡದೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ ದೂರಿದರು.

ಹಳೆ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಿಸುವಂತೆ ಸಂಘದ ಕಾರ್ಯದರ್ಶಿ ನೆಸೆಪಾಳ್ಯದ ಮಂಜುನಾಥ ಆಗ್ರಹಿಸಿದರು. ಸಹಾಯಕ ಎಂಜಿನಿಯರ್‌ ಶಿವರಾಜು, ಅಧಿಕಾರಿ ರವಿ ಅವರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು.

ರೈತ ಮುಖಂಡರಾದ ದೊಡ್ಡರಂಗಯ್ಯ, ಕಲ್ಯಾದ ಉಮೇಶ್‌, ಜಯಣ್ಣ, ರಂಗಸ್ವಾಮಣ್ಣ, ದಿವಾಕರ್‌, ಕೆಂಪರಾಜು, ವೆಂಕಟೇಶ್‌, ಆನಂದ್‌, ಲೋಕೇಶ್‌, ಕರಿಯಪ್ಪ ಮಾತನಾಡಿದರು. ತಾಲ್ಲೂಕಿನಾದ್ಯಂತ ಬಂದಿದ್ದ ರೈತರು ವಿದ್ಯುತ್‌ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಪ್ರೊಬೆಷನರಿ ಡಿವೈಎಸ್‌ಪಿ ಲಕ್ಷ್ಮಿ ರೈತರ ಮನವೊಲಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT