ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಗೊಂಬೆಗಳ ಲೋಕದ ಶಿಲ್ಪ ಕಲಾವಿದ ಶಿವರಾಜು

ಕಲಾಕೃತಿಗಳಿಗೆ ವಿವಿಧ ಜಿಲ್ಲೆಗಳಿಂದ ಬೇಡಿಕೆ, ಇತರರಿಗೂ ತರಬೇತಿ, ಹಲವು ಸಂಘಸಂಸ್ಥೆಗಳಿಂದ ಸನ್ಮಾನ
Last Updated 15 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಿರ್ಜೀವ ವಸ್ತುಗಳಿಗೆ ಜೀವ ತುಂಬುವಲ್ಲಿ ಕಲಾವಿದರ ಪಾತ್ರ ಮಹತ್ವದ್ದು. ಅಂತೆಯೇ ಸಂಸ್ಕೃತಿ, ಆಧ್ಯಾತ್ಮ, ಸಾಹಿತ್ಯ ಸೇರಿದಂತೆ ಅದೆಷ್ಟೊ ವಸ್ತು–ವಿಷಯಗಳನ್ನು ಕೆತ್ತನೆಯ ಮೂಲಕ ಜೀವಂತವಾಗಿರಿಸುವ ಅವರ ಕಲಾ ಪ್ರಾವಿಣ್ಯತೆ ಮೆಚ್ಚುವಂತದ್ದು. ಕಲೆಗಳನ್ನು ಉಳಿಸುವಲ್ಲಿಯೂ ಕಲಾವಿದರ ಪಾತ್ರ ಪ್ರಮುಖವಾದುದು.

ಇದಕ್ಕೆ ನಿದರ್ಶನವೆಂಬಂತೆ ಇಲ್ಲಿನ ರಾಂಪುರ ಗ್ರಾಮದ ಆರ್.ಶಿವರಾಜು ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಮರದಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದು, ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಜಾನಪದ ಕಲಾ ಪ್ರದರ್ಶನದಲ್ಲಿ ಬಳಸುವ,ಮರದ ಸೋಮನ ಮುಖವಾಡಗಳು, ಕರಿಯಣ್ಣ-ಕೆಂಚಣ್ಣರ ಹರಿಗೆಗಳು, ಸಿಡೀರಣ್ಣ, ಹುಲಿ ಮುಖವಾಡ, ಮುಳ್ಳಿನ ಪಾದರಕ್ಷೆ, ಹಬ್ಬ– ಹರಿದಿನ ಧಾರ್ಮಿಕ ಉತ್ಸವಗಳಲ್ಲಿ ಬಳಸುವ ಹುಲಿ ವಾಹನ, ನಂದಿ ವಾಹನ, ಹಂಸ ವಾಹನ, ಗರುಡ ವಾಹನ, ಅಶ್ವ ವಾಹನ, ಶೇಷ ವಾಹನ, ಕಾಕ ವಾಹನ, ನವಿಲು ವಾಹನ ಮುಂತಾದ ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ.

ಜತೆಗೆ ದೇವರ ಮೂರ್ತಿಗಳಾದ ನಾಡಮಾರಮ್ಮ, ಗಣೇಶ, ಆಂಜನೇಯ, ಮುಳಕಟ್ಟಮ್ಮ ಸೇರಿದಂತೆ ವಿವಿಧ ದೇವರ ಮೂರ್ತಿಗಳನ್ನು ಮರದಿಂದಲೇ ಅರಳಿಸುವ ಕಲಾವಿದರಾದ ಇವರ ಕಲಾಕೃತಿಗಳಿಗೆ ರಾಮನಗರ ಜಿಲ್ಲೆಯಲ್ಲದೆ ತುಮಕೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮುಂತಾದ ಜಿಲ್ಲೆಗಳಿಂದಲೂ ಬೇಡಿಕೆ ಇದೆ.

15 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿರುವ ಇವರು ಗ್ರಾಮೀಣ ಆಟಗಳಲ್ಲಿ ಬಳಸುವ ಅಳಗುಳಿ ಮಣೆ, ಸಕ್ಕರೆ ಅಚ್ಚು ಮಣೆ, ಹಸೆಮಣೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದ ಮಹನೀಯರ ಪ್ರತಿಮೆಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇದರ ಜತೆಗೆ ಮರದ ಬಾಗಿಲುಗಳಿಗೆ ವಿಧವಿಧದ ಕೆತ್ತನೆ, ಬಾಗಿಲು, ಕಂಬದ ಮೇಲೆ ಕೆತ್ತನೆ ಮಾಡುವುದರಲ್ಲಿಯೂ ಇವರು ಪ್ರವೀಣರು.

ವಿಗ್ರಹಗಳಿಗೆಬೇಕಾದ ಕಚ್ಛಾ ಪದಾರ್ಥಗಳನ್ನುಸ್ಥಳೀಯವಾಗಿಯೇ ತಯಾರಿಸುತ್ತಾರೆ. ಪರಿಣಾಮ ಇವರ ವಿಗ್ರಹಗಳು ಉತ್ತಮ ಗುಣಮಟ್ಟದಿಂದ ಕೂಡಿರುವುದು ವಿಶೇಷ. ವಿಗ್ರಹ, ಕಲಾಕೃತಿ ಖರೀದಿಸಿರುವವರಿಂದ ಇದುವರೆಗೂ ಯಾವುದೇ ವ್ಯತಿರಕ್ತ ಅಭಿಪ್ರಾಯಗಳು ಬಂದಿಲ್ಲ ಎನ್ನುವುದು ಇವರ ಹೆಗ್ಗಳಿಕೆ.

ರಾಂಪುರ ಗ್ರಾಮದ ಪುಟ್ಟಸಿದ್ದಮ್ಮ, ಎಸ್.ರಾಚಯ್ಯ ದಂಪತಿ ಪುತ್ರ ಶಿವರಾಜು ಮರದಿಂದ ವಿವಿಧ ರೀತಿಯ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದನ್ನೆ ವೃತ್ತಿಯಾಗಿಸಿಕೊಂಡು ಕಲೆಗಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಲ್ಲಿನ ಕೆಂಗಲ್ ಬಳಿಯ ಗಂಗರಸ ಶಿಲ್ಪಕಲಾ ಕಾಲೇಜಿನಲ್ಲಿ ಮರದ ಕೆತ್ತನೆ ವಿಭಾಗದಲ್ಲಿ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್) ಶಿಕ್ಷಣ ಪಡೆದಿರುವ ಅವರು ಕಲೆಯನ್ನು ನಾಡಿನಾದ್ಯಂತ ಪಸರಿಸುವ ಗುರಿ ಹೊಂದಿದ್ದಾರೆ.

ಇವರ ಕಲಾ ಕಾರ್ಯ ಮೆಚ್ಚಿ ರಾಂಪುರ ಗ್ರಾಮದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ‘ಕಲಾಯೋಗಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಜತೆಗೆ ಹಲವು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇವರ ಕರಕುಶಲ ಕಲೆಯನ್ನು ಸರ್ಕಾರ ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT