ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಿಕೆಗಾಗಿ ಶಿಸ್ತು ಪ್ರದರ್ಶನ ಬೇಡ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು
Last Updated 27 ಜುಲೈ 2022, 3:56 IST
ಅಕ್ಷರ ಗಾತ್ರ

ಮಾಗಡಿ: ‘ವಿದ್ಯಾರ್ಥಿಗಳು ಒತ್ತಡಕ್ಕಾಗಿ ಶಿಸ್ತು ರೂಢಿಸಿಕೊಳ್ಳಬಾರದು. ಕೇವಲ ತೋರಿಕೆಗಾಗಿಯೂ ಪ್ರದರ್ಶಿಸಬಾರದು. ಅದು ಮನಸ್ಸಿನ ಒಳಗಿನಿಂದ ಬರಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ಪಟ್ಟಣದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಬೆಂಗಳೂರಿನ ಅರಮನೆ ರಾತ್ರಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಜಗಮಗಿಸುತ್ತದೆ. ಬೆಳಿಗ್ಗೆ ದೂಳಿನಿಂದ ಕೂಡಿರುತ್ತದೆ. ಬೆಳಿಗ್ಗೆ ವಿವಿಧ ಶೃಂಗಾರ ದ್ರವ್ಯಗಳಿಂದ ಶೃಂಗರಿಸಿಕೊಂಡಿದ್ದರೂ ಸಂಜೆ ವೇಳೆಗೆ ದೇಹ ದುರ್ಗಂಧ ಸೂಸುತ್ತದೆ. ಕೊಳೆತು ನಾರುವ ಮಣ್ಣಿನಲ್ಲಿ ನೆಟ್ಟ ಮಲ್ಲಿಗೆ ಬಳ್ಳಿಯಲ್ಲಿ ಸುವಾಸನೆ ಬೀರುವ ಹೂವುಗಳು ಅರಳಿ ದೇವರಿಗೆ ಅರ್ಪಣೆಯಾಗುತ್ತವೆ. ಹಾಗಾಗಿ, ಭಗವಂತನ ಸಾಮ್ರಾಜ್ಯದಲ್ಲಿ ನಾವೆಲ್ಲರೂ ಬಿತ್ತಿದ ಬೀಜಗಳಿದ್ದಂತೆ ಎಂದರು.

ವಿದ್ಯಾರ್ಥಿಗಳು ಜ್ಞಾನ ಸಂಪನ್ನರಾಗಿ ಬೆಳೆದು ಅರಳಬೇಕು; ಎಂದಿಗೂ ನರಳಬಾರದು. ಬೆಳೆದಂತೆಲ್ಲಾ ಬದುಕಿನ ನಗ್ನ ಸತ್ಯ ಅನಾವರಣವಾಗಲಿದೆ. ಪ್ರಜ್ಞೆಯ ಸ್ಥಿತಿಯಿಂದ ಎತ್ತರದ ಸ್ಥಿತಿಗೆ ಹೋಗುವ ಪಯಣವೇ ಜೀವನ. ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಓದದ ಪ್ರಾಣಿ, ಪಕ್ಷಿಗಳು ಬದುಕುತ್ತಿವೆ. ಮಾನವ ಪ್ರಾಣಿ, ಪಕ್ಷಿಗಳಿಗಿಂತ ವಿಶೇಷವಾಗಿ ಬದುಕಬೇಕು ಎಂದು ಆಶಿಸಿದರು.

ವಿದ್ಯಾರ್ಥಿಗಳು ಗಳಿಸುವ ರ‍್ಯಾಂಕ್‌ನಿಂದ ಪ್ರಜ್ಞೆಯ ಸ್ತರವನ್ನು ಏರಿಸಲಾಗದು. ಬಾಲ್ಯದಲ್ಲಿಯೇ ಅಕ್ಕಮಹಾದೇವಿ, ಮೀರಾಬಾಯಿ, ಯೌವನದಲ್ಲಿ ಬುದ್ಧ ಮನೆ ಬಿಟ್ಟು ಹೊರ ನಡೆದರು. ಅವರು ಜ್ಞಾನದ ವೃಕ್ಷಗಳಾಗಿ ಇಂದಿಗೂ ನೆರಳು ನೀಡುವುದನ್ನು ಕಾಣುತ್ತಿದ್ದೇವೆ. ಪ್ರತಿ ಮಗುವಿನಲ್ಲೂ ವಿಶ್ವಮಾನವರಾಗುವಷ್ಟು ಬುದ್ಧಿವಂತಿಕೆ ಇರುತ್ತದೆ. ನಿಮಗಾಗಿ ನೀವು ಓದಿ ಬುದ್ಧಿವಂತರಾಗಬೇಕು. ಮನೆಯ ಬೆಳಕಾಗಬೇಕು ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ್ ಮಾತನಾಡಿ, ಜೀವನ ವೀಣೆ ಇದ್ದಂತೆ. ಬಾಲಗಂಗಾಧರನಾಥ ಸ್ವಾಮೀಜಿ ಪ್ರೀತಿ ಹಂಚಿ ಸಮಾಜ ಕಟ್ಟಿದ್ದಾರೆ. ಎಲ್ಲರನ್ನು ಸಮಾನವಾಗಿ ಕಾಣುವ, ಶ್ರಮಪಟ್ಟು ಪ್ರಾಮಾಣಿಕವಾಗಿ ಬದುಕುವ, ತಂತ್ರಜ್ಞಾನ ಮತ್ತು ಮಾಧ್ಯಮ ಸಂವಹನ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಆದಿಚುಂಚನಗಿರಿ ವಿಜಯನಗರ ಶಾಖಾ ಮಠಾಧೀಶ ಸೌಮ್ಯನಾಥ ಸ್ವಾಮೀಜಿ, ರಾಮನಗರ ಶಾಖಾ ಮಠಾಧೀಶ ಅನ್ನದಾನೇಶ್ವರನಾಥ ಸ್ವಾಮೀಜಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಗೋವಿಂದರಾಜು, ಜಿಲ್ಲಾ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೊತ್ತಿಪುರ ಶಿವಣ್ಣ, ಡಾ.ಹನಿಯೂರು ಚಂದ್ರೇಗೌಡ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಕೆ. ಉಮೇಶ್ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ನಂದಿನಿ ಸಿ., ಜಯಕುಮಾರ್‌, ಸಹನಾ, ದಿಲೀಪ್‌ಕುಮಾರ್‌, ವೀರನಾರಾಯಣ ಗೌಡ, ಸುಜಾತಾ, ಸುನಿಲ್‌, ರವಿ, ಸಿದ್ದರಾಮ, ಲೋಕೇಶ್‌, ಸೈಯದ್‌ ಇಸ್ಮಾಯಿಲ್‌, ಶಿವಕುಮಾರ್‌, ಲೋಹಿತ್‌ ಕುಮಾರ್‌, ನಾಗೇಶ್‌ ರಾವ್‌, ಶ್ರೀಧರ್‌, ವೆಂಕಟೇಶ್‌, ಪುನೀತ್‌ಕುಮಾರ್‌, ದಿಲೀಪ್‌ ಕುಮಾರ, ಗಂಗಲಕ್ಷ್ಮಮ್ಮ, ಗುರುರಾಜ್‌, ನಾಗರಾಜ ಸಿ., ಚೇತನ್‌ಕುಮಾರ್‌, ಗೋಪಾಲ ಕೃಷ್ಣ ಬಿ.ಎಂ., ನಾರಾಯಣಸ್ವಾಮಿ, ಅಭಿಷೇಕ್‌, ಪುಟ್ಟರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT