ಮಾಗಡಿ: ಮಳೆ ನೀರು ಹರಿದು ಫಸಲು ನಾಶ, ಒತ್ತುವರಿ ತೆರವಿಗೆ ರೈತರ ಆಗ್ರಹ

ಮಾಗಡಿ: ಕೆಲವರು ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಮಳೆ ನೀರು ರಾಜಕಾಲುವೆಯಲ್ಲಿ ಹರಿಯದೆ ರೈತರ ಹೊಲ, ಗದ್ದೆಗಳ ಮೇಲೆ ಹರಿದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ ಎಂದು ನಾರಾಯಣಪುರದ ರೈತ ಭೀಮಣ್ಣ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಕಟ ತೋಡಿಕೊಂಡ ಅವರು, ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಸಂಕೀಘಟ್ಟ ಕೆರೆ ಕೋಡಿ ಯಿಂದ ಕಲ್ಯಾಣಿವರೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ರಾಜಕಾಲುವೆಯನ್ನು ತೆರವುಗೊಳಿಸಬೇಕು. ರೈತರ ತೋಟಗಳ ಮೇಲೆ ಮಳೆ ನೀರು ಹರಿಯದಂತೆ ಅನುಕೂಲ ಮಾಡಿಕೊಡಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
‘ನಾರಾಯಣಪುರ ಮತ್ತು ಮಂಗಿಪಾಳ್ಯದ ನಡುವಿನ ರಾಜಕಾಲುವೆ ಒತ್ತುವರಿಯಾಗಿದೆ. ಶಿವಗಂಗಾ ಬೆಟ್ಟದ ತಪ್ಪಲಿನಲ್ಲಿ ಇರುವ ಏಳೆಂಟು ಕೆರೆಗಳು ತುಂಬಿವೆ. ಕೆರೆಗಳ ಕೋಡಿಯ ನೀರು ಈ ಪ್ರದೇಶದ ರಾಜಕಾಲುವೆ ಮೂಲಕ ಹರಿದು ಬರುತ್ತಿದೆ. ನಕ್ಷೆಯಲ್ಲಿ ರಾಜಕಾಲುವೆ ಇದೆ. ಆದರೆ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಳೆ ನೀರು ಮುಂದೆ ಹರಿದುಹೋಗದಂತೆ ಮುಚ್ಚಲಾಗಿದೆ. ನೀರು ಕಾಲುವೆಯಲ್ಲಿ ಹರಿಯದೆ ರೈತರ ಹೊಲ, ಗದ್ದೆಗಳಿಗೆ ಹರಿದು ಬೆಳೆ ನಷ್ಟವಾಗಿದೆ’ ಎಂದು ಮಂಗಿಪಾಳ್ಯದ ರೈತ ಧನಂಜಯ ಗೌಡ ನೋವು
ತೋಡಿಕೊಂಡರು.
ರಾಜಕಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರು ಕಾಲುವೆ ತೆರವುಗೊಳಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ರೈತರಾದ ಕೆಂಪಣ್ಣ, ಚಂದ್ರು ಆರೋಪಿಸಿದರು.
ತೆರವಿಗೆ ಕ್ರಮ: ಸಂಕೀಘಟ್ಟದ ಕೆರೆ ಕೋಡಿಯಿಂದ ಕೆಲವರು ರಾಜಕಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮುಚ್ಚಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸುವಂತೆ ರೈತರು ಕೋರಿದ್ದಾರೆ. ನನ್ನ ಎದುರಿನಲ್ಲಿ ರಾಜಕಾಲುವೆ ಒತ್ತುವರಿದಾರರು ತೆರವುಗೊಳಿಸುವುದಾಗಿ ಒಪ್ಪಿದ್ದರು ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸಪ್ರಸಾದ ತಿಳಿಸಿದರು.
ಕಂದಾಯ ಅಧಿಕಾರಿಗಳು ತೆರಳಿದ ಮೇಲೆ ಒತ್ತುವರಿ ತೆರವಿನ ಬಗ್ಗೆ ತಕರಾರು ತೆಗೆದಿದ್ದಾರೆ. ರಾಜಕಾಲುವೆ ಸರ್ಕಾರದ ಸ್ವತ್ತು. ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸದಿದ್ದರೆ ತಾಲ್ಲೂಕು ಆಡಳಿತವೇ ಒತ್ತುವರಿಯನ್ನು ತೆರವುಗೊಳಿಸಲಿದೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.