ಮಂಗಳವಾರ, ನವೆಂಬರ್ 12, 2019
28 °C
ರೂರಲ್‌ ಪದವಿ ಕಾಲೇಜಿನ ವಿಚಾರ ಸಂಕಿರಣದಲ್ಲಿ ಚಿಂತಕ ಡಾ. ಜಿ.ರಾಮಕೃಷ್ಣ ಅಭಿಮತ

ಶಿಕ್ಷಣ, ವೇತನ ವ್ಯವಸ್ಥೆಯಲ್ಲಿ ತಾರತಮ್ಯ

Published:
Updated:
Prajavani

ಕನಕಪುರ: ‘ಇಂದು ವಿಶ್ವಮಟ್ಟದಲ್ಲಿ ಸ್ಪರ್ಧೆ ಮತ್ತು ಸವಾಲುಗಳನ್ನು ಎದುರಿಸಬೇಕಿದ್ದು, ಆ ನಿಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಜ್ಞಾನ ಬೆಳೆಸಿಕೊಳ್ಳಬೇಕಿದೆ’ ಎಂದು ಪ್ರಾಧ್ಯಾಪಕರು ಮತ್ತು ಚಿಂತಕರು ಆದ ಡಾ. ಜಿ.ರಾಮಕೃಷ್ಣ ಅಭಿಪ್ರಾಯ ಪಟ್ಟರು.

ಇಲ್ಲಿನ ರೂರಲ್‌ ಪದವಿ ಕಾಲೇಜಿನ ಪೂಜ್ಯ ಶ್ರೀ ಎಸ್‌.ಕೆ. ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ‘21ನೇ ಶತಮಾನದ ಪರಿಸ್ಥಿತಿಗೆ ಉನ್ನತ ಶಿಕ್ಷಣವನ್ನು ಸಿದ್ಧಪಡಿಸುವುದು, ಸಮಸ್ಯೆಗಳು ಮತ್ತು ಸವಾಲುಗಳು’ ವಿಷಯ ಕುರಿತು ಮಂಗಳವಾರ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ತಾರತಮ್ಯವಿದೆ. ಅಂತೆಯೇ ಒಂದೇ ಕೆಲಸದಲ್ಲಿ ವೇತನ ತಾರತಮ್ಯವೂ ಇದೆ. ಈ ರೀತಿ ವ್ಯತ್ಯಾಸ ಮತ್ತು ತಾರತಮ್ಯವಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಸರ್ಕಾರ ವಿಶ್ವಮಟ್ಟದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಬೇಕು. ಹಾಗಾದರೆ ವಿಶ್ವದ ಯಾವುದೇ ಭಾಗದಲ್ಲೂ ಉದ್ಯೋಗ, ವ್ಯವಹಾರ ಗಳಿಸಬಹುದು. ದೇಶದಲ್ಲಿ ಅಂತಹ ವ್ಯವಸ್ಥೆ, ವಿಶ್ವಮಟ್ಟದ ಶಿಕ್ಷಣ ಸಿಗದಿರುವುದರಿಂದಲೇ ವಿದೇಶಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯುತ್ತಿರುವುದು. ಉನ್ನತ ಶಿಕ್ಷಣ ಪಡೆದ ಮೇಲೆ ಅಲ್ಲಿಯೇ ಉಳಿದು, ಆ ದೇಶದಲ್ಲೇ ಕೆಲಸ ಮಾಡುತ್ತಿರುವುದು’ ಎಂದು ಪ್ರತಿಪಾದಿಸಿದರು.

‘ನಮ್ಮಲ್ಲಿ ಬುದ್ದಿಗೆ ಕೊರತೆ ಇಲ್ಲ. ಆದರೆ ಅದಕ್ಕೆ ತಕ್ಕನಾದ ಶಿಕ್ಷಣ ಸಿಗಬೇಕಿದೆ. ವಿದ್ಯೆ ಕಲಿಸಲು ರೂಪುಗೊಳ್ಳುವ ಶಿಕ್ಷಕರಲ್ಲೇ ಭಿನ್ನತೆ ಮತ್ತು ತಾರತಮ್ಯ ಇದೆ. ಇಂತಹ ವ್ಯವಸ್ಥೆ ಬದಲಾಗಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಮಾನವಾಗಿ ಸಿಗಬೇಕು. ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಸ್ವಾತಂತ್ರ್ಯವಿಲ್ಲದೆ ಕೊರಗುತ್ತಿವೆ. ವಿದ್ಯಾಭ್ಯಾಸದ ಕ್ರಮವು ರಾಜಕೀಯ ನಾಯಕರುಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿದೆ’ ಎಂದು ವಿಷಾದಿಸಿದರು.

 

ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ. ಸುದೇಶ್‌ ಮಾತನಾಡಿ, ‘ಉನ್ನತ ಶಿಕ್ಷಣವು ಜಾಗತೀಕರಣದ ನಂತರ ಬದಲಾವಣೆಯ ಹಾದಿ ಹಿಡಿದಿದೆ. ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಡೀನ್‌ ಪ್ರೊ.ಪಿ.ಎಸ್‌. ಜಯರಾಮು, ಆರ್‌ಇಎಸ್‌ ಅಧ್ಯಕ್ಷ ಕೆ.ಬಿ.ನಾಗರಾಜು, ಮಾಜಿ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ, ಉಪಾಧ್ಯಕ್ಷ ಎಲ್‌.ಶಿವಕುಮಾರ್‌, ಕಾರ್ಯದರ್ಶಿ ಸಿ.ರಮೇಶ್‌, ಖಜಾಂಚಿ ಪುಟ್ಟಸ್ವಾಮಿ, ನಿರ್ದೇಶಕರಾದ ವೆಂಕಟೇಶ್‌, ಬಲರಾಮೇಗೌಡ, ಪ್ರಾಂಶುಪಾಲ ಎಂ.ಗೋವಿಂದಪ್ಪ, ಉಪ ಪ್ರಾಂಶುಪಾಲ ನಂಜುಂಡಯ್ಯ, ಪ್ರಾಧ್ಯಾಪಕರಾದ ಎಂ.ಕುಮಾರ್‌, ಪ್ರಕಾಶ್‌.ಎ.ಪಿ, ದೇವರಾಜು, ಬಾಲಕೃಷ್ಣ, ತಮ್ಮಣ್ಣಗೌಡ, ಬಿ.ಮಂಜುನಾಥ್‌, ಚನ್ನಪ್ಪ, ರಾಜಣ್ಣ ಕಣೇಗಾಲ್‌, ಪತ್ತೇಪುರ್‌, ಬಿ.ಎಂ.ಶ್ರೀನಿವಾಸ್‌ ಇದ್ದರು.

ಪ್ರತಿಕ್ರಿಯಿಸಿ (+)