ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ ಪುರಸಭೆ : ಜೆಡಿಎಸ್ ಮತ್ತೆ ಅಧಿಕಾರಕ್ಕೆ

Published : 19 ಸೆಪ್ಟೆಂಬರ್ 2024, 12:55 IST
Last Updated : 19 ಸೆಪ್ಟೆಂಬರ್ 2024, 12:55 IST
ಫಾಲೋ ಮಾಡಿ
Comments

ಬಿಡದಿ: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಗೆ ಜೆಡಿಎಸ್ ನ ಹರಿಪ್ರಸಾದ್ ಮತ್ತು ಮಂಜುಳಾ ಗೋವಿಂದಪ್ಪ ಗೆಲುವಿನೊಂದಿಗೆ ಅಂತಿಮ ತೆರೆ ಬಿದ್ದಿದೆ.

ಜೆಡಿಎಸ್ ಸದಸ್ಯರು ಪ್ರವಾಸ ಮುಗಿಸಿಕೊಂಡು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ ಖಾಸಗಿ ಹೋಟೆಲ್ ನೇರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೇತಗಾನಹಳ್ಳಿ ತೋಟದ ಮನೆಗೆ ಬಂದು ಸೇರಿದರು. ಅಲ್ಲಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಶಾಸಕ ಎ ಮಂಜುನಾಥ್ ಮತ್ತು ಜೆಡಿಎಸ್ ಸದಸ್ಯರೊಂದಿಗೆ ನೇರವಾಗಿ ಬಿಡದಿ ಪುರಸಭೆ ಕಾರ್ಯಾಲಯಕ್ಕೆ ಬಂದರು.

ಸ್ಪಷ್ಟ ಬಹುಮತ: ಪುರಸಭೆ ಅಧ್ಯಕ್ಷರಾಗಿ ವಾರ್ಡ್ ನಂಬರ್ 11ರ ಅಭ್ಯರ್ಥಿ ಎಂ.ಎನ್. ಹರಿಪ್ರಸಾದ್ ಮತ್ತು ಉಪಾಧ್ಯಕ್ಷೆಯಾಗಿ ವಾರ್ಡ್ ನಂಬರ್ 3ರ ಸದಸ್ಯೆ ಮಂಜುಳಾ ಗೋವಿಂದಪ್ಪ ತಲಾ 15 ಮತಗಳನ್ನು ಪಡೆಯುವುದರೊಂದಿಗೆ ಗೆಲುವು ಸಾಧಿಸಿದರು.

ಜೆಡಿಎಸ್ ನ 14 ಸದಸ್ಯರು ಮತ್ತು ಸಂಸದ ಡಾ. ಮಂಜುನಾಥ್ ತಮ್ಮ ಮತವನ್ನು ಚಲಾಯಿಸುವುದರೊಂದಿಗೆ ಜೆಡಿಎಸ್ ಗೆಲುವಿಗೆ ಸಾಥ್ ನೀಡಿದರು.

ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂಬರ್ 21ರ ರಾಮಚಂದ್ರಯ್ಯ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ವಾರ್ಡ್ ನಂಬರ್ 15ರ ಬಿಂದಿಯಾ ಸ್ಪರ್ಧಿಸಿದ್ದರು. ಇಬ್ಬರೂ ತಲಾ 9 ಮತಗಳನ್ನು ಪಡೆದು ನಿರಾಸೆ ಅನುಭವಿಸಿದರು.

ಪುರಸಭೆ ಕಾರ್ಯಾಲಯದ ಎದುರುಗಡೆ ಸೇರಿದ ಜೆಡಿಎಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿನ ಘೋಷಣೆ ಮುನ್ನವೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರು ನೇರವಾಗಿ ಬಿಜಿಎಸ್ ವೃತ್ತದ ಬಾಲ ಗಂಗಾಧರನಾಥ ಸ್ವಾಮಿ ಪುತ್ತಳಿಗೆ ಗೌರವ ಸಲ್ಲಿಸಿದರು. ರಾಮನಗರ ತಹಶೀಲ್ದಾರ್ ತೇಜಸ್ವಿನಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು, ಬಿಡದಿ ಆರಕ್ಷಕ ಠಾಣೆ ಸಿಬ್ಬಂದಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳುವುದರೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಕೋಟ್;

ಜೆಡಿಎಸ್ ನ ಎಲ್ಲಾ ಸದಸ್ಯರ ಸಹಕಾರದಿಂದ ಮತ್ತು ಎಲ್ಲರೂ ಪ್ರಾಮಾಣಿಕವಾಗಿ ಮತ ಚಲಾಯಿಸಿದ್ದರಿಂದ ಈ ಗೆಲುವು ಸಾಧ್ಯವಾಯಿತು. ವಿಶೇಷವಾಗಿ ಸಂಸದ ಡಾ. ಸಿ.ಎನ್ ಮಂಜುನಾಥ್ ಅವರಿಗೆ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಬಿಜೆಪಿ ಸ್ನೇಹಿತರ ಸಹಕಾರ ಇದಕ್ಕೆ ಕಾರಣ. ನಾವೆಲ್ಲಾ ಸೇರಿ ಬಿಡದಿಯ ಅಭಿವೃದ್ಧಿಗೆ ಶ್ರಮಿಸಬೇಕು.

ಎ ಮಂಜುನಾಥ್, ಮಾಗಡಿ ಮಾಜಿ ಶಾಸಕ 

ಬಿಡದಿ ಪುರಸಭೆಗೆ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಉತ್ತಮ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. 

ಡಾ. ಸಿ.ಎನ್, ಮಂಜುನಾಥ್, ಸಂಸದ 

ಮೈತ್ರಿ ಪಕ್ಷಗಳ ಎಲ್ಲಾ ಹಿರಿಯ ಮುಖಂಡರ ಹಾಗೂ ಸದಸ್ಯರ ಸಹಕಾರದೊಂದಿಗೆ ಪುರಸಭೆಯ 23 ವಾರ್ಡ್‌ಗಳ ಅಭಿವೃದ್ಧಿಯತ್ತ ಗಮನಹರಿಸುತ್ತೇನೆ.

ಹರಿಪ್ರಸಾದ್, ಬಿಡದಿ ಪುರಸಭೆ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT