ಭಾನುವಾರ, ಡಿಸೆಂಬರ್ 8, 2019
20 °C

‘ಟಿಪ್ಪು ಜಯಂತಿ ಆಚರಣೆ ರದ್ದು ಸರಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಡುವುದನ್ನು ವಿರೋಧಿಸಿ ಹಾಗೂ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವುದನ್ನು ಖಂಡಿಸಿ ಇದೇ 23ರಂದು ಬೆಳಿಗ್ಗೆ 11 ಗಂಟಗೆ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ಅವರನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ದೇಶದ್ರೋಹಿ ಎಂಬಂತೆ ಬಿಂಬಿಸುತ್ತಿದ್ದು, ಟಿಪ್ಪು ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಕೆಲಸದಲ್ಲಿ ನಿರತವಾಗಿವೆ. ಈ ಜಾತ್ಯಾತೀತ ವಿರೋಧಿ ಧೋರಣೆಯನ್ನು ಖಂಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿ ಜಂಟಿಯಾಗಿ ಮೆರವಣಿಗೆ ಹಮ್ಮಿಕೊಂಡಿದೆ ಎಂದರು.

ಜಿಲ್ಲಾ ಪದಾಧಿಕಾರಿ ಎಸ್.ಜಿ. ವನಜಾ ಮಾತನಾಡಿ, ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಪಠ್ಯದಿಂದ ಟಿಪ್ಪುವಿನ ಇತಿಹಾಸ ತೆಗೆಯುವುದೆಂದರೆ, ಅದು ನಾಡಿನ ಚರಿತ್ರೆಗೆ ಮಾಡಿದ ಅಪಮಾನವಾಗುತ್ತದೆ. ಟಿಪ್ಪು ಜಯಂತಿಯನ್ನು ರದ್ದು ಮಾಡುವುದು ಕೂಡ ಸರ್ಕಾರಗಳ ತಾರತಮ್ಯ ನೀತಿಯನ್ನು ತೋರುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಅಂಕಪ್ಪ, ಉಪಾಧ್ಯಕ್ಷ ಎಂ. ಶ್ರೀನಿವಾಸ್, ಕಾರ್ಯದರ್ಶಿ ಸಿ.ಆರ್. ನಾಗೇಶ್, ಸಿಐಟಿಯು ಮುಖಂಡ ಸ್ವಾಮಿರಾಜ್, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಶಿವರಾಜು, ಪ್ರಕಾಶ್, ಚನ್ನಪ್ಪಾಜಿ, ಸೋಮಣ್ಣ, ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಖ್ವಾಜಾ, ಸಜದ್ ರೆಹಮತ್, ಫೈರೋಜ್, ಷಾಹಿದ್, ಫಾರೂಕ್ ಇದ್ದರು.

ಪ್ರತಿಕ್ರಿಯಿಸಿ (+)