ಶುಕ್ರವಾರ, ಜುಲೈ 30, 2021
28 °C
ಕ್ವಾರಂಟೈನ್‌ನಲ್ಲಿ ಇದ್ದವರಿಗೂ ಸೋಂಕು; ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ

ರಾಮನಗರ: ಒಂದೇ ದಿನ ಐದು ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಬುಧವಾರ ಐವರಿಗೆ ಕೋವಿಡ್‌-19 ಸೋಂಕು ಧೃಡಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 12ಕ್ಕೆ ಏರಿದೆ.

ಬುಧವಾರದ ಐದೂ ಪ್ರಕರಣಗಳೂ ಚನ್ನಪಟ್ಟಣದಲ್ಲೇ ಧೃಡಪಟ್ಟಿವೆ. ಅದರಲ್ಲಿಯೂ ಕ್ವಾರಂಟೈನ್‌ನಲ್ಲಿ ಇದ್ದವರಿಗೇ ಸೋಂಕು ತಗುಲಿದೆ. ಈ ಮೂಲಕ ಚನ್ನಪಟ್ಟಣ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.

ಕೆಲವು ದಿನಗಳ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಶ್ಯಾನುಬೋಗನಹಳ್ಳಿಯಲ್ಲಿ ರಾಮನಗರದ ಜೈಲು ಸಿಬ್ಬಂದಿಯೊಬ್ಬರಿಗೆ ಸೋಂಕು ಧೃಡಪಟ್ಟಿತ್ತು. ಇತನ ಕುಟುಂಬ ಸದಸ್ಯರು ಹಾಗೂ ಗೆಳೆಯರೂ ಸೇರಿದಂತೆ ಒಟ್ಟು 24 ಮಂದಿಯನ್ನು ಕ್ವಾರಂಟೈನ್ ಮಾಡಿದ್ದರು. ಈ ಪೈಕಿ 24, 26 ಹಾಗೂ 27 ವರ್ಷದ ಯುವಕರಲ್ಲಿ ಸೋಂಕು ಇರುವುದು ಖಾತ್ರಿಯಾಗಿದೆ. ಈ ಮೂವರನ್ನೂ ಸದ್ಯ ರಾಮನಗರದ ಕಂದಾಯ ಭವನದಲ್ಲಿ ಇರುವ ಕೋವಿಡ್‌-19 ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕ್ವಾರಂಟೈನ್‌ನಲ್ಲಿ ಮುಂದುವರಿಸಿದ್ದು, ಮತ್ತೊಮ್ಮೆ ಗಂಟಲ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸ್‌ನಿಂದ ಸೋಂಕು: ಬೆಂಗಳೂರಿನಲ್ಲಿ ಕಳೆದ ವಾರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ಸೋಂಕು ತಗುಲಿತ್ತು. ಪಿ- 3360 ಸಂಖ್ಯೆಯ ಈ ವ್ಯಕ್ತಿಯು ಚನ್ನಪಟ್ಟಣದ ಎನ್.ಆರ್. ಕಾಲೊನಿಯಲ್ಲಿ ಇರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದ ನಾಲ್ವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರಲ್ಲಿ 55 ಹಾಗೂ 43 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ. ಈ ಎರಡೂ ಪ್ರಕರಣಗಳಲ್ಲಿ ಕ್ವಾರಂಟೈನ್‌ನಲ್ಲಿ ಇದ್ದವರಿಗೇ ಸೋಂಕು ತಗುಲಿರುವ ಕಾರಣ ಮತ್ತೆ ಹೊಸತಾಗಿ ಯಾವ ಪ್ರದೇಶಗಳನ್ನು ಅಧಿಕಾರಿಗಳು ಸೀಲ್‌ಡೌನ್‌ ಮಾಡಿಲ್ಲ.

ಜನರಲ್ಲಿ ಆತಂಕ ಹೆಚ್ಚಳ
ಕೊರೊನಾ ಲಾಕ್‌ಡೌನ್‌ ಅವಧಿಯ ಮೊದಲೆರಡು ತಿಂಗಳ ಕಾಲ ಯಾವುದೇ ಸೋಂಕು ಇಲ್ಲದೆ ಅಜೇಯವಾಗಿ ಉಳಿದಿದ್ದ ರಾಮನಗರ ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಚನ್ನಪಟ್ಟಣ ತಾಲ್ಲೂಕು ಕೊರೊನಾ ಹಾಟ್‌ಸ್ಪಾಟ್‌ ಆಗಿ ಬದಲಾಗುತ್ತಿದೆ. ಇದರೊಟ್ಟಿಗೆ ಮಾಗಡಿಯಲ್ಲಿ ಮೂರು, ರಾಮನಗರದಲ್ಲಿ ಎರಡು ಹಾಗೂ ಕನಕಪುರದಲ್ಲಿ ಒಂದು ಪ್ರಕರಣ ವರದಿಯಾಗಿದೆ. ನಾಲ್ಕೂ ತಾಲ್ಲೂಕುಗಳಲ್ಲೂ ಈಗ ಸೋಂಕಿತರು ಕಂಡುಬಂದಿದ್ದಾರೆ.

ಅಂಕಿ-ಅಂಶ

ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪ್ರಕರಣಗಳು 12
ಸಕ್ರಿಯ ಪ್ರಕರಣಗಳು 11
ಗುಣಮುಖ 1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು