ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಅಯೋಡಿನ್‌ ನ್ಯೂನತೆ ಪರಿಹರಿಸಿ

ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 5 ನವೆಂಬರ್ 2021, 3:45 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಸಹಯೋಗದಡಿ ಗುರುವಾರ ಸೋಲೂರಿನ ಸ್ನೇಹಾಲಯ ಆಸ್ಪತ್ರೆಯ ಆವರಣದಲ್ಲಿ ಕಾನೂನು ಅರಿವು ನೆರವು ಮತ್ತು ರಾಷ್ಟ್ರೀಯ ಅಯೋಡಿನ್‌ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹೇಶ್‌ ಬಿ.ಪಿ. ಮಾತನಾಡಿ, ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರು, ವಿಕಲಚೇತನರು ಕಾನೂನು ನೆರವು ಪಡೆಯಬಹುದು. ಮಧ್ಯಸ್ಥಿಕೆ ಮೂಲಕ ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳನ್ನು ಮಾತುಕತೆ ಮೂಲಕ ರಾಜಿ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಅಯೋಡಿನ್‌ ಕೊರತೆಯ ನ್ಯೂನತೆಗಳನ್ನು ವೈದ್ಯರು ನೀಡುವ ಸಲಹೆ ಮೇರೆಗೆ ಬಗೆಹರಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯ ಸವಲತ್ತು ಬಳಸಿಕೊಂಡು ಆರೋಗ್ಯವಂತ ಭಾರತ ಕಟ್ಟಲು ಮುಂದಾಗಬೇಕು ಎಂದರು.

ಸ್ನೇಹಾಲಯ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಸಿಸ್ಟರ್‌ ಡಾ.ಆನ್‌ರೋಜ್‌ ಮಾತನಾಡಿ, ದಿನನಿತ್ಯದ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನ್ನು ಬಳಸಬೇಕು. ಅಯೋಡಿನ್‌ ಕೊರತೆಯ ನ್ಯೂನತೆ ತಡೆಗಟ್ಟಬೇಕು ಎಂದು ಹೇಳಿದರು.

ಸೋಲೂರಿನ ಸ್ನೇಹಾಲಯದ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಗ್ಲಾಡೀಸ್‌ ಮಾತನಾಡಿ, ಕತ್ತಿನ ಗಂಟು, ಅದೃಷ್ಟದ ಗಂಟಲ್ಲ. ಗಳಗಂಡ ರೋಗದ ನಂಟು. ಅಯೋಡಿನ್‌ಯುಕ್ತ ಉಪ್ಪು ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಕ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಬಿಎಚ್‌ಇಒ ಆರ್‌. ರಂಗನಾಥ್‌ ಮಾತನಾಡಿ, ಪ್ರತಿದಿನ ವಯಸ್ಕರಿಗೆ 150 ಮೈಕ್ರೊ ಗ್ರಾಂ ಅಯೋಡಿನ್‌ ಉಪ್ಪಿನ ಅವಶ್ಯಕತೆ ಇದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ 200 ಮೈಕ್ರೊ ಗ್ರಾಂ ಅಯೋಡಿನ್‌ ಉಪ್ಪು ಬಳಸಬೇಕು ಎಂದು ಸಲಹೆನೀಡಿದರು.

ನಾವು ನಿತ್ಯ ಸೇವಿಸುವ ಪೌಷ್ಟಿಕ ಆಹಾರದಲ್ಲಿ ಅಯೋಡಿನ್‌ ಪೋಷಕಾಂಶವಾಗಿದೆ. ಮನುಷ್ಯನ ದೇಹದ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳು, ವಯಸ್ಕರು ಹಾಗೂ ಗರ್ಭಿಣಿಯರಲ್ಲಿ ನ್ಯೂನತೆಗಳು ಕಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಅಯೋಡಿನ್‌ ಕೊರತೆಯಿಂದ ಥೈರಾಯಿಡ್‌ ರೋಗ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜಿ. ಪಾಪಣ್ಣ, ವಕೀಲರಾದ ಸಿದ್ದರಾಜು, ನವೀನ್‌ ಕುಮಾರ್‌, ಶ್ರೀಧರ್‌, ಎಲ್‌ಎಚ್‌ಒ ಆರ್‌. ಮಂಜುಳಾ, ಪುರುಷ ಆರೋಗ್ಯ ಅಧಿಕಾರಿ ತುಕಾರಾಮ್‌, ಸೋಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸರಳಾ, ಸುಶೀಲಮ್ಮ, ಆಶಾ ಕಾರ್ಯಕರ್ತೆಯರು, ಸ್ನೇಹಾಲಯದ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT