ಶನಿವಾರ, ಸೆಪ್ಟೆಂಬರ್ 25, 2021
30 °C
ಮಾಗಡಿ ‘ಅರಿವು-ನೆರವು’ ಕಾರ್ಯಕ್ರಮ

ಸರಕು ಸಾಗಾಣಿಕೆ ವಾಹನಗಳು ಪ್ರಯಾಣಕ್ಕಲ್ಲ: ನ್ಯಾಯಾಧೀಶ ಮಹಾವೀರ್ ಎಂ.ಕರೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಸರಕು ಸಾಗಣೆ ವಾಹನಗಳಲ್ಲಿ ಮಾನವರನ್ನು ಸಾಗಿಸುವುದು ಅಸುರಕ್ಷಿತ ಹಾಗೂ ಅದು ಮೋಟಾರು ವಾಹನ ಕಾಯಿದೆ ಉಲ್ಲಂಘನೆ’ ಎಂದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಾವೀರ್ ಎಂ.ಕರೆಣ್ಣವರ ತಿಳಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸು ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಸರಕು ಸಾಗಾಣಿಕ ವಾಹನಗಳಲ್ಲಿ ಕೂಲಿಕಾರ್ಮಿಕರು, ಶಾಲಾ ಮಕ್ಕಳು, ಹಾಗೂ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರ ಎಂಬುದರ ಕುರಿತು ‘ಅರಿವು-ನೆರವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾನವರನ್ನು ಪಶುಗಳಂತೆ ಸರಕು ಸಾಗಾಣಿಕೆ ವಾಹನಗಳಲ್ಲಿ ತುಂಬಿ ಸಾಗಿಸುವುದನ್ನು ಕಂಡೂ ಕಾಣದಂತಿರುವ ಆರ್‌ಟಿಒ ಮತ್ತು ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅಪಘಾತಗಳು ಹೆಚ್ಚಾಗಿ ಪ್ರಾಣಹಾನಿಯಾಗುವ ಸಭವವೇ ಹೆಚ್ಚು. ಲಾರಿ, ಟೆಂಪೊ, ಅಫೆ ಆಟೋಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ವೇಗವಾಗಿ ಚಲಿಸುವ ವಾಹನ ಚಾಲಕ, ಮಾಲೀಕರ ಬಗ್ಗೆ ಸಾರ್ವಜನಿಕರು ನಮಗೆ ಮಾಹಿತಿ ನೀಡಿ ಕ್ರಮಕೈಗೊಳ್ಳಲು ಸಹಕರಿಸಿ’ ಎಂದು ಅವರು ತಿಳಿಸಿದರು.

‘ಕೆಲವು ಖಾಸಗಿ ಬಸ್‌ಗಳ ಮೇಲೆ ಪ್ರಯಾಣಿಕರನ್ನು ಕೂರಿಸಿ ಅತಿವೇಗದಲ್ಲಿ ಚಲಿಸುವುದು ಕಂಡುರುತ್ತಿದೆ. ಇಂತಹ ಅಕ್ರಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೋಟೆಲ್, ರೇಷ್ಮೆ ಹುರಿ ಕಾರ್ಖಾನೆ, ಗ್ಯಾರೇಜ್, ಕ್ರಷರ್‌ಗಳು, ಇಟ್ಟಿಗೆ ತಯಾರಿಕೆ, ಕೋಳಿ ಸಾಕಾಣಿಕೆ ಇತರೆಡೆಗಳಲ್ಲಿ ಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಅವರು ಹೇಳಿದರು.

‘ಸರಕು ಸಾಗಾಣಿಕೆ ವಾಹನದ ಮಾಲೀಕ, ಚಾಲಕರು ತಾವಾಗಿಯೇ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದರು.

‘ಕಟ್ಟಡ ಕಾರ್ಮಿಕರನ್ನು ಸರಕು ಸಾಗಣೆ ವಾಹನದಲ್ಲಿ ಸಾಗಿಸುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುತ್ತೇವೆ. ಟೆಂಪೊ, ಲಾರಿ, ಟ್ರಕ್, ಅಫೆ ಆಟೋ ಮತ್ತು ಟ್ರಾಕ್ಟರ್‌ಗಳಲ್ಲಿ ಕಾರ್ಮಿಕರ ಸಾಗಾಟ ಕಾನೂನು ಬಾಹಿರ. ಉಲ್ಲಂಘಿಸಿದವರಿಗೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಮಿಕ ನಿರೀಕ್ಷಕಿ ಸುಷ್ಮಾ ತಿಳಿಸಿದರು. 

ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೇಖಾ.ಎಸ್.ಸಿ ಮಾತನಾಡಿ ‘ರಾಜ್ಯ ರಸ್ತೆ ಸಾರಿಗೆ ಬಸ್‌ಗಳನ್ನು ಎಲ್ಲೆಡೆ ಸಂಚರಿಸುವಂತೆ ಮಾಡಬೇಕು.  ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಎನ್.ಶಾರದ ಹಿರಿಯೂರು, ಯಶೋಧ.ಎಚ್.ಆರ್, ವಕೀಲರ ಸಂಘದ ಉಪಾಧ್ಯಕ್ಷ ದೇವರಾಜೇಗೌಡ, ಎಎಸ್ಐ ಕೋದಂಡರಾಮಯ್ಯ, ಶಿಕ್ಷಕ ಚಿಕ್ಕವೀರಯ್ಯ ಮಾತನಾಡಿದರು. ವಾಹನಗಳ ಮಾಲೀಕರು, ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.