ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಮ್ಮದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ

ಮಾಗಡಿ ತಾಲ್ಲೂಕಿನ ಮೋಟಗೊಂಡನಹಳ್ಳಿಯಲ್ಲಿ ಕುಂಭಾಭಿಷೇಕ ಮಹೋತ್ಸವ
Last Updated 28 ಏಪ್ರಿಲ್ 2019, 13:29 IST
ಅಕ್ಷರ ಗಾತ್ರ

ಮಾಗಡಿ: ಭೂಮಿಯ ಮೇಲಿನ ನೀರೆಲ್ಲವೂ ಪವಿತ್ರಳಾದ ಗಂಗಾಮಾತೆ ಇದ್ದಂತೆ, ಜಲಮೂಲಗಳನ್ನು ಕಲುಷಿತಗೊಳಿಸಬೇಡಿ ಎಂದು ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗಸ್ವಾಮಿ ಕರೆನೀಡಿದರು.

ಮೋಟಗೊಂಡನಹಳ್ಳಿಯಲ್ಲಿ ನೂತನ ಗಂಗಮ್ಮ ದೇವಾಲಯ ನವ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಅನ್ನೋದು ನಾಶಕ್ಕೆ ಕಾರಣವಾಗಲಿದೆ. ನಾವು ಅನ್ನೋದು ಬೆಳವಣಿಗೆಗೆ ಪ್ರೇರಣೆಯಾಗಲಿದೆ. ಮನಸ್ಸೇ ದೇವಮಮಂದಿರ ಎಂದು ತಿಳಿದು ಸರ್ವರ ಏಳಿಗೆಗೆ ಶ್ರಮಿಸಿ’ ಎಂದು ತಿಳಿಸಿದರು.

‘ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಲು ಮುಂದಾಗಬೇಕು. ನಮಗೆ ಬದುಕುವುದಕ್ಕೆ ಎಲ್ಲವನ್ನೂ ಕೊಟ್ಟಿರುವ ದೇವರನ್ನು ಒಂದೇ ಒಂದು ಕ್ಷಣ ಸ್ಮರಿಸಿದರೆ, ಮುಕ್ತಿಗೆ ಮಾರ್ಗದೊರೆಯಲಿದೆ. ಶರಣರ ವಚನಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಆಸೆ ನಾಶಕ್ಕೆ ಕಾರಣವಾದೀತು’ ಎಂದರು.

‘ಮೊಬೈಲ್‌ ಬಳಕೆ ಮಿತಿಗೊಳಿಸಿ, ಮಕ್ಕಳ ಕೈಗೆ ನೈತಿಕತೆ ಸಾರುವ ಕೃತಿಗಳನ್ನು ಕೊಟ್ಟು ಓದಿಸಿ, ಪರಿಸರವನ್ನು ಪ್ರೀತಿಸುವುದನ್ನು ಕಲಿಸಿ. ದೇವಾಲಯ ಕಟ್ಟಿಸಿರುವ ರಾಜಮ್ಮ , ಮಕ್ಕಳಾದ ಆರ್‌.ಸುರೇಶ್‌, ರಮೇಶ್‌ ಅವರ ಸೇವೆ ಸಾರ್ಥಕವಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಗಂಗೆ ಮೇಲಣಗವಿ ಮಠಾಧ್ಯಕ್ಷ ಮಲಯ ಶಾಂತಮುನಿದೇಶೀಕೇಂದ್ರ ಶಿವಾಚಾರ್ಯ ಮಾತನಾಡಿ, ದೇವರನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆರಾಧಿಸಬೇಕು. ಮೂಢನಂಬಿಕೆ, ಡಂಬಾಚಾರ, ಮೋಸ, ವಂಚನೆ ಮಾಡುವುದು ತರವಲ್ಲ. ಸಕಲರಿಗೆ ಲೇಸನ್ನೇ ಬಯಸುವುದು ಮುಖ್ಯ ಎಂದು ಅಭಿಪ್ರಯಾಪಟ್ಟರು.

ದೇವರ ಗುಡಿ ಕಟ್ಟಿದರೆ ಸಾಲದು, ನಿತ್ಯ ದೇವರ ಆರಾಧನೆಯನ್ನು ಮಾಡುವುದರ ಜತೆಗೆ ಲೋಕಕಲ್ಯಾಣಕ್ಕಾಗಿ ದುಡಿಯಬೇಕು ಎಂದರು.

ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರಸ್ವಾಮಿ ಮಾತನಾಡಿ, ‘ಆಚಾರ ವಿಚಾರಗಳಿಂದ ಸಂಸ್ಕಾರಯುತ ಜೀವನ ನಡೆಸಲು ಸಾದ್ಯ. ಭಗವಂತ ಎಲ್ಲರಿಗೂ ಸ್ವಂತ ಎಂದು ಪೂಜಿಸಿ. ಮಕ್ಕಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಬೆಳೆಸಬೇಕು. ನೀವು ಬದುಕಿ, ಇತರರು ಬದುಕುವಂತೆ ನೋಡಿಕೊಳ್ಳುವುದು ದೇವರು ಮೆಚ್ಚುವ ಕೆಲಸ’ ಎಂದರು.

ಗದ್ದುಗೆ ಮಠದ ಮಹಂತಸ್ವಾಮಿ, ಶಿವಗಂಗೆ ಮಹಾಲಕ್ಷ್ಮೀಪೀಠದ ಜ್ಞಾನಾನಂದಪುರಿಸ್ವಾಮಿ, ನೀಲಕಂಠಾಚಾರ್ಯ ಸ್ವಾಮಿ, ವಿಜಯಶಕ್ತಿ ಗುರೂಜಿ, ಕಾಂಗ್ರೆಸ್‌ ಮುಖಂಡ ಆಂಜನಮೂರ್ತಿ, ರಾಜಮ್ಮ ರಾಮಣ್ಣ, ಗಂಗರಂಗಯ್ಯ, ಪಾರ್ವತಮ್ಮ ಗೋವಿಂದಶೆಟ್ಟಿ ವೇದಿಕೆಯಲ್ಲಿದ್ದರು. ಸಾಮೂಹಿಕ ದಾಸೋಹ ನಡೆಯಿತು. ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT