ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮವಹಿಸಿ ಓದಿ, ಉತ್ತಮ ಅಂಕ ಪಡೆಯಿರಿ

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಪೂರಕ ವಿಶೇಷ ತರಗತಿ ಸಭೆ
Last Updated 9 ಫೆಬ್ರುವರಿ 2020, 14:04 IST
ಅಕ್ಷರ ಗಾತ್ರ

ಕಸಬಾ (ಕನಕಪುರ): ‘ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷಾ ಪೂರಕ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಹೆಚ್ಚುವರಿ ನುರಿತ ಶಿಕ್ಷಕರಿಂದ ತರಗತಿಗಳನ್ನು ನಡೆಸುತ್ತಿದ್ದು ಪೋಷಕರು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ರವಿ ಹೇಳಿದರು.

ಇಲ್ಲಿನ ಕಸಬಾ ಹೋಬಳಿ ಚಿಕ್ಕಮುದುವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಪೂರಕ ವಿಶೇಷ ತರಗತಿಗಳನ್ನು ನಡೆಸುವ ಸಂಬಂಧ ಶನಿವಾರ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಪರೀಕ್ಷೆ ಗೊಂದಲ ಮತ್ತು ವಿಷಯಗಳನ್ನು ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಇಲ್ಲಿನ ಶಿಕ್ಷಕರ ಜತೆಗೆ ಹೆಚ್ಚುವರಿಯಾಗಿ ಹೊರಗಡೆಯಿಂದ ನುರಿತ ಶಿಕ್ಷಕರು ಬಂದು ರಾತ್ರಿ 8 ಗಂಟೆವರೆಗೂ ಪಾಠ ಹೇಳಿಕೊಡಲಿದ್ದಾರೆ’ ಎಂದರು.

‘10ನೇ ತರಗತಿಯಲ್ಲಿ 45 ಹೆಣ್ಣುಮಕ್ಕಳು, 25 ಗಂಡು ಮಕ್ಕಳಿದ್ದಾರೆ. ಸುತ್ತಲಿನ ಹಳ್ಳಿಗಳಿಂದ ಮಕ್ಕಳು ಬರುತ್ತಿದ್ದು ಅವರಿಗೆ ಅನುಕೂಲವಾಗಲೆಂದು ಶಾಲೆಯಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಿ, ರಾತ್ರಿ ಊಟ ಕಲ್ಪಿಸಲಾಗಿದೆ. ಹೆಣ್ಣು ಮಕ್ಕಳ ಹಿತ ದೃಷ್ಟಿಯಿಂದ ತರಗತಿ ಮುಗಿದ ಮೇಲೆ ಅವರನ್ನು ಮನೆಗೆ ಕಳಿಸಲಾಗುವುದು. ಪೋಷಕರು ಬಂದು ಕರೆದುಕೊಂಡು ಹೋಗಬೇಕು’ ಎಂದು ಹೇಳಿದರು.

‘ವಿಶೇಷ ತರಗತಿಗಳು ಸೋಮವಾರದಿಂದ ಪ್ರಾರಂಭವಾಗಿ ಪರೀಕ್ಷೆಯವರೆಗೂ ನಡೆಯಲಿವೆ. ಉಳಿದಿರುವ ಕಾಲಾವಧಿಯಲ್ಲಿ ಮಕ್ಕಳಿಗೆ ಕಠಿಣ ವಿಷಯಗಳ ಬಗ್ಗೆ ಶಿಕ್ಷಕರು ತಿಳಿಸಿಕೊಡಲಿದ್ದಾರೆ. ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾಡುತ್ತಿರುವ ಈ ಪ್ರಯತ್ನಕ್ಕೆ ಎಲ್ಲ‌ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಶಿಕ್ಷಕಿ ಲಕ್ಷ್ಮಿ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಿಕ್ಷಣದ ದಿಕ್ಕು ಬದಲಿಸುವ ಘಟ್ಟ. ಇಲ್ಲಿ ತೆಗೆದುಕೊಳ್ಳುವ ಅಂಕದ ಮೇಲೆ ಮುಂದಿನ ವಿದ್ಯಾಭ್ಯಾಸ ಅಡಗಿದ್ದು, ಶ್ರಮದಿಂದ ಓದಬೇಕು’ ಎಂದರು.

‘ವಿಶೇಷ ತರಗತಿಗಳು ಮಕ್ಕಳಿಗೆ ಒಂದು ಸುವರ್ಣ ಅವಕಾಶ. ಹಿಂದಿನ ದಿನಗಳಲ್ಲಿ ಯಾರು ಇಂತಹ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿರಲಿಲ್ಲ. ಕ್ಷೇತ್ರದ ಶಾಸಕರು ಮತ್ತು ಸಂಸದರು ಹೆಚ್ಚಿನ ಕಾಳಜಿಯಿಂದ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಇಂತಹ ಅವಕಾಶ ಕಲ್ಪಿಸಿದ್ದಾರೆ. ಮಕ್ಕಳು ಇದನ್ನು ಬಳಸಿಕೊಂಡು ಉತ್ತಮ ಅಂಕ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಮಕ್ಕಳಿಗೆ ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಯಸಂದ್ರ ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್‌, ಮುಖಂಡರಾದ ಬಸವರಾಜು, ಸೊಂಬಣ್ಣ, ನಾಗೇಶ್‌, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್‌, ಮುಖ್ಯ ಶಿಕ್ಷಕ ಮಧುಸೂದನ್‌, ಶಾಲಾ ಶಿಕ್ಷಕರು, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT