ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಲ್ಲಿ ಪ್ಲಾಸ್ಟಿಕ್‌ ಕಸ ನೀಡಿದ್ರೆ ಸಿಗುತ್ತೆ ಉಪಾಹಾರ

‘ಸ್ವಚ್ಛತಾ ಹೀ ಸೇವಾ’ ಅಭಿಯಾನ: ನಗರಸಭೆಯಿಂದ ವಿವಿಧ ಕಾರ್ಯಕ್ರಮ
Last Updated 2 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ರಾಮನಗರ: ಪ್ಲಾಸ್ಟಿಕ್‌ ಕಸ ಉಪಯೋಗಕ್ಕೆ ಬಾರದ್ದು ಎಂದು ಬಿಸಾಡಬೇಡಿ. ಅದನ್ನೇ ಇಂದಿರಾ ಕ್ಯಾಂಟೀನ್‌ಗೆ ತಂದುಕೊಡಿ. ಒಪ್ಪೊತ್ತಿನ ಊಟ ಇಲ್ಲವೇ ಉಪಾಹಾರ ದೊರೆಯುತ್ತದೆ.

ಹೌದು! ನಗರದಲ್ಲಿನ ತ್ಯಾಜ್ಯ ಸಂಗ್ರಹಣೆ ಹಾಗೂ ಸ್ವಚ್ಚತಾ ಹಿ ಸೇವಾ ಆಂದೋಲನದ ಸಮರ್ಪಕ ಅನುಷ್ಠಾನಕ್ಕಾಗಿ ಇಲ್ಲಿನ ನಗರಸಭೆಯು ಒಂದು ತಿಂಗಳು ಪೂರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರ ಅಂಗವಾಗಿ ಪ್ಲಾಸ್ಟಿಕ್‌ ತಂದುಕೊಡುವವರಿಗೆ ಉಪಾಹಾರ ನೀಡುವ ಪ್ರೋತ್ಸಾಹಕ ಕಾರ್ಯಕ್ರಮವನ್ನೂ ಜಾರಿಗೆ ತಂದಿದೆ. ಗಾಂಧಿ ಜಯಂತಿಯ ದಿನವಾದ ಬುಧವಾರ ಇಂದಿರಾ ಕ್ಯಾಂಟೀನ್‌ನಲ್ಲಿ ಈ ಕಾರ್ಯಕ್ರಮಕ್ಕೆ ನಗರಸಭೆ ಸಿಬ್ಬಂದಿ ಚಾಲನೆ ನೀಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 1 ಟನ್‌ನಷ್ಟು ಕಸ ಸಂಗ್ರಹ ಆಗುತ್ತಿದ್ದು, ಇದರ ವಿಲೇವಾರಿ ಸವಾಲಾಗಿದೆ. ಈ ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮಾರಾಟ ಮಾಡುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಇದನ್ನು ಮುಂದುವರಿಸಲಾಗುವುದು’ ಎಂದು ನಗರಸಭೆ ಆಯುಕ್ತೆ ಶುಭಾ ತಿಳಿಸಿದರು.

ವಿವಿಧ ಕಾರ್ಯಕ್ರಮ: ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಸ್ವಚ್ಚತಾ –ಹೀ– ಆಂದೋಲನ’ ಕಾರ್ಯಕ್ರಮ ರೂಪಿಸಿದ್ದು, ಒಂದು ತಿಂಗಳು ಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದರ ಅಂಗವಾಗಿ ನಗರಸಭೆಯ 4 ಟನ್‌ನಷ್ಟು ಪ್ಲಾಸ್ಟಿಕ್ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಗುರಿ ಹೊಂದಿದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಸಂಘ–ಸಂಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವವರಿಗೆ ಬಹುಮಾನವೂ ಸಿಗಲಿದೆ. ಉತ್ತಮ ಶ್ರಮದಾನ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಬಹುಮಾನ ಕೂಡ ವಿತರಣೆ ಮಾಡಲಾಗುತ್ತದೆ.

ವಿಶೇಷ ವಲಯ ರಚನೆ: ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಚಕರಹಳ್ಳಿವರೆಗೆ ಕಸ ಸಂಗ್ರಹಕ್ಕೆ 9 ವಿಶೇಷ ವಲಯಗಳನ್ನು ಗುರುತಿಸಲಾಗಿದೆ. ಹೆದ್ದಾರಿಯಲ್ಲಿನ ಸ್ವಚ್ಛತೆಯ ಜೊತೆಗೆ ಮನೆಮನೆಗೆ ತೆರಳಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಪುಟಾಣಿ ರಾಯಬಾರಿ ನೇಮಕ
ಸ್ವಚ್ಛತಾ ಕಾರ್ಯವನ್ನು ರಂಗಾಗಿಸುವ ಸಲುವಾಗಿ ನಗರಸಭೆಯು ರಿಯಾಲಿಟಿ ಶೋ ಕಾರ್ಯಕ್ರಮವೊಂದರ ಪುಟಾಣಿ ಗಾಯಕಿ ಜ್ಞಾನವಿಯನ್ನು ರಾಯಬಾರಿಯಾಗಿ ನೇಮಕ ಮಾಡಿಕೊಂಡಿದೆ. ಸದ್ಯದಲ್ಲೇ ಆಕೆ ಪ್ರಚಾರಕ್ಕೆ ಬರಲಿದ್ದಾರೆ.
ಇದಲ್ಲದೆ ನಗರಸಭೆಯು ಅಭಿಯಾನದ ಕುರಿತು ಕರಪತ್ರಗಳನ್ನೂ ಮುದ್ರಿಸಿ ಪ್ರಚಾರ ಮಾಡುತ್ತಿದೆ. ನಿಷೇಧಿಸಲಾದ ಪ್ಲಾಸ್ಟಿಕ್‌ ವಸ್ತುಗಳು, ಅವುಗಳಿಗೆ ಪರ್ಯಾಯವಾಗಿ ಬಳಸಬಹುದಾದ ವಸ್ತುಗಳ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT