ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ವ್ಯವಹಾರದಿಂದ ಅಕ್ರಮಕ್ಕೆ ತಡೆ

ಬ್ಯಾಂಕ್ ಆಫ್ ಬರೋಡದಿಂದ ‘ನಗದು ರಹಿತ ಗ್ರಾಮ’ ಉದ್ಘಾಟನೆ
Last Updated 30 ಜೂನ್ 2018, 13:31 IST
ಅಕ್ಷರ ಗಾತ್ರ

ಕನಕಪುರ: ದೇಶದ ಎಲ್ಲ ರೀತಿ ವ್ಯವಹಾರದಲ್ಲಿ ನಗದು ರಹಿತ ವ್ಯವಹಾರ ಜಾರಿಗೆ ಬಂದರೆ ಅಭಿವೃದ್ಧಿ ಜತೆಗೆ ಅಕ್ರಮ ಮತ್ತು ಕಳವು ತಡೆಗಟ್ಟಬಹುದಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್‌ ರಾಜೇಂದ್ರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮರಳವಾಡಿ ಹೋಬಳಿ ಚಿಕ್ಕಸಾದೇನಹಳ್ಳಿ ಗ್ರಾಮದಲ್ಲಿ ಹಾರೋಹಳ್ಳಿ ಬ್ಯಾಂಕ್ ಆಫ್ ಬರೋಡ ಶಾಖೆ ವತಿಯಿಂದ ನಡೆದ ನಗದು ರಹಿತ (ಕ್ಯಾಷ್‌ಲೆಸ್‌) ಗ್ರಾಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಮ್ಮ ರಾಷ್ಟ್ರದಲ್ಲಿ ನಗದುರಹಿತ ವ್ಯವಹಾರ ನಡೆಸಬೇಕು. ಸಣ್ಣಪುಟ್ಟ ಮೌಲ್ಯದ ಹಣ ಹೊರತುಪಡಿಸಿ ಉಳಿದಂತೆ ಎಲ್ಲವನ್ನು ಆನ್‌ಲೈನ್‌ ಮೂಲಕ ವ್ಯವಹರಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ನಗದು ಬಳಸದೆ ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿದರೆ ಅಂತವರಿಗೆ ಹಣ ಹಿಂತಿರುಗಿಸುವ (ಕ್ಯಾಷ್‌ಬ್ಯಾಕ್‌) ಲಾಭ ದೊರೆಯಲಿದೆ. ನಾಗರಿಕರು ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ದೇಶದಲ್ಲಿ ಹಣದುಬ್ಬರ, ತೆರಿಗೆ ವಂಚನೆ, ನಕಲಿ ನೋಟಿನ ಅಕ್ರಮ ವ್ಯವಹಾರ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಸಂಪೂರ್ಣ ನಗದುರಹಿತ ವ್ಯವಹಾರ ಜಾರಿಗೊಳ್ಳಬೇಕು. ಇದಕ್ಕೆ ದೇಶದ ಎಲ್ಲ ನಾಗರಿಕರು ಕೈ ಜೋಡಿಸಬೇಕು. ಇದರಿಂದ ವ್ಯವಹಾರದಲ್ಲಿ ಪಾರದರ್ಶಕತೆ ಕಾಣಲು ಸಾಧ್ಯ ಎಂದು ತಿಳಿಸಿದರು.

ಬ್ಯಾಂಕ್ ಆಫ್ ಬರೋಡದ ಜನರಲ್ ಮ್ಯಾನೇಜರ್ ವೀರೇಂದ್ರಕುಮಾರ್ ಮತ್ತು ಡಿ.ಜಿ.ಎಂ ಲಲಿತ್‌ತ್ಯಾಗಿ ಮಾತನಾಡಿ, ದೇಶದಲ್ಲಿ ಕ್ಯಾಷ್‌ಲೆಸ್ ವ್ಯವಹಾರ ತ್ವರಿತಗತಿಯಲ್ಲಿ ಆಗಬೇಕೆಂಬುದು ಬ್ಯಾಂಕಿನ ಉದ್ದೇಶವಾಗಿದೆ. ಇಂಥ ವ್ಯವಹಾರದಿಂದ ಕಪ್ಪು ಹಣದ ವ್ಯವಹಾರಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದರು.

ಈ ಯೋಜನೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಚನ್ನಪಟ್ಟಣದ ವಡ್ಡರಕುಪ್ಪೆಯಲ್ಲಿ ಜಾರಿಗೆ ತರಲಾಗಿದೆ. ನಂತರ 2ನೇ ನಗದುರಹಿತ ಗ್ರಾಮವಾಗಿ ಕನಕಪುರ ತಾಲ್ಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡು ಯೋಜನೆ ಸಾಕಾರಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೀತಾಈಶ್ವರ್, ಹಾರೋಹಳ್ಳಿ ಶಾಖೆಯ ವ್ಯವಸ್ಥಾಪಕ ರಾಧಾಕೃಷ್ಣ ಪ್ರಸಾದ್, ಬ್ಯಾಂಕ್ ಅಧಿಕಾರಿಗಳಾದ ಮಹೇಶ್, ಶ್ರೀಧರ್, ರೋಟರಿ ಅಧ್ಯಕ್ಷ ಮೊಹಮ್ಮದ್ ಏಜಾಸ್‌, ಡಾ.ಪ್ರಾಣೇಶ್, ರಾಧಾಕೃಷ್ಣ, ಹೊನ್ನೇಗೌಡ, ಪ್ರಕಾಶ್, ನದೀಂ, ರೈತ ಸಂಘದ ಅಧ್ಯಕ್ಷ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT