ಮಂಗಳವಾರ, ಮಾರ್ಚ್ 28, 2023
33 °C
ಹೆದ್ದಾರಿಯಲ್ಲಿ ಜನಸಾಗರದ ಮಧ್ಯೆ ಮೆರವಣಿಗೆ

ಸ್ವಕ್ಷೇತ್ರದಲ್ಲಿ ಎಚ್‌ಡಿಕೆ ಶಕ್ತಿ ಪ್ರದರ್ಶನ: ಕಾರ್ಯಕರ್ತರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜೆಡಿಎಸ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಪಂಚರತ್ನ ರಥಯಾತ್ರೆಯು ಸೋಮವಾರ ಎಚ್‌.ಡಿ. ಕುಮಾರಸ್ವಾಮಿ ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಸಂಚರಿಸಿದ್ದು, ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.

ಸಂಜೆ 7ರ ಸುಮಾರಿಗೆ ಕೆಂಗಲ್‌ ಆಂಜನೇಯಸ್ವಾಮಿ  ಸನ್ನಿಧಿಯಲ್ಲಿ ಪುತ್ರ ನಿಖಿಲ್‌ ಜೊತೆಗೂಡಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ನಂತರ ಹಾಕಿಲ್‌ ಶಾಹಿ ದರ್ಗಾಕ್ಕೆ ಭೇಟಿ ನೀಡಿದರು. ಅಲ್ಲಿಂದ ಮೆರವಣಿಗೆ ಮೂಲಕವೇ ಚನ್ನಪಟ್ಟಣದಾದ್ಯಂತ ಸಂಚರಿಸಿದರು. ಹನುಮಂತನಗರದ ಬಳಿ ಕಾರ್ಯಕರ್ತರು ಅವರಿಗೆ ಬೃಹತ್‌ ಹೂವಿನ ಹಾರ ಅರ್ಪಿಸಿದರು. ಷೇರು ಸರ್ಕಲ್‌ ಬಳಿ ಜೆಸಿಬಿ ಯಂತ್ರಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ಕಬ್ಬಿನ ಹಾರ ಹಾಕಲಾಯಿತು.

ಸಾವಿರಾರು ಕಾರ್ಯಕರ್ತರೊಂದಿಗೆ ಎಚ್‌ಡಿಕೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬೃಹತ್‌ ಮೆರವಣಿಗೆ ನಡೆಸಿದರು. ಹೆದ್ದಾರಿಯಲ್ಲಿ ಜನಸಾಗರವೇ ನೆರೆದಿತ್ತು. ಎಲ್ಲೆಲ್ಲೂ ಜೆಡಿಎಸ್ ಬಾವುಟಗಳು ರಾರಾಜಿಸುತ್ತಿದ್ದು, ಬೀದಿಗೆಲ್ಲ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಪಟಾಕಿಗಳ ಸದ್ದಿಗೆ ಕಾರ್ಯಕರ್ತರೂ ಬೆದರಿದರು.  ಕ್ರೇನ್‌ಗಳ ಮೂಲಕ ಹಾಕಲಾದ ಹಾರಗಳನ್ನು ಸ್ವೀಕರಿಸಿಯೇ ಎಚ್‌ಡಿಕೆ ದಣಿದರು.

ದೂರದ ಊರುಗಳಿಂದಲೂ ಜೆಡಿಎಸ್ ಕಾರ್ಯಕರ್ತರು ಎಚ್‌ಡಿಕೆ ಕಾಣಲೆಂದು ಚನ್ನಪಟ್ಟಣಕ್ಕೆ ಬಂದಿದ್ದರು. ಜನರಿಗಾಗಿ ಬಸ್‌ಗಳ ವ್ಯವಸ್ಥೆ ಸಹ ಇತ್ತು. ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಮೆರವಣಿಗೆ ಸಾಗಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡಬೇಕಾಯಿತು.

ಮಾಗಡಿ ಶಾಸಕ ಎ. ಮಂಜುನಾಥ, ಸ್ಥಳೀಯ ಮುಖಂಡರಾದ ಜಯಮುತ್ತು, ಅಶ್ವತ್ಥ್‌ ಮತ್ತಿತರರು ಮೆರವಣಿಗೆಯಲ್ಲಿ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು