ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಮೂಲಸೌಕರ್ಯ ವಂಚಿತ ಆದಿವಾಸಿ ಇರುಳಿಗರು

Last Updated 10 ಡಿಸೆಂಬರ್ 2021, 4:07 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಕಲ್ಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೂಜುಗಲ್ಲು ಗ್ರಾಮದ ಉತ್ತರಕ್ಕೆ ಇರುವ ಕವಡಗಲ್ಲು ಬೆಟ್ಟದಲ್ಲಿ ವಾಸಿಸುತ್ತಿರುವ ಆದಿವಾಸಿ ಇರುಳಿಗ ಸಮುದಾಯಕ್ಕೆ ಸೇರಿದ 6 ಕುಟುಂಬಗಳು ಮೂಲಸೌಕರ್ಯದಿಂದ ವಂಚಿತವಾಗಿವೆ.

ಇರುಳಿಗ ಸಮುದಾಯದ ಕುಟುಂಬಗಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ. ಇವರು ವಾಸಿಸುತ್ತಿರುವ ಸ್ಥಳಕ್ಕೆ ಹೋಗಬೇಕಾದರೆ ನಾಗಶೆಟ್ಟಿಹಳ್ಳಿಯಿಂದ ಜೇನುಕಲ್ಲು ಬೆಟ್ಟ ಬಳಸಿಕೊಂಡು ಮೂರು, ನಾಲ್ಕು ಕಿ.ಮೀ ಬೆಟ್ಟ ಹತ್ತಿ ಹೋಗಬೇಕು. ಇಲ್ಲವೆ ಹೂಜುಗಲ್ಲಿನಿಂದ ಮೂರು ಕಿ.ಮೀ ನಡೆದು ಹೋಗಬೇಕು.

‘ನಾವು ಇಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದೇವೆ. ನಮಗೆ ಕುಡಿಯುವ ನೀರಿಲ್ಲ, ವಿದ್ಯುತ್ ಸಂಪರ್ಕ ಇಲ್ಲ. ಹಲವು ಬಾರಿ ನಾವು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಇರುಳಿಗ ಸಮುದಾಯದ ಕೃಷ್ಣಪ್ಪ, ಸಾಕಯ್ಯ, ಈರಮ್ಮ, ವೆಂಕಟೇಶ್, ವೆಂಕಟಲಕ್ಷ್ಮಮ್ಮ, ಪುಟ್ಟಮಾದಯ್ಯ ತಮ್ಮ ಸಂಕಟ ತೋಡಿಕೊಂಡರು.

‘ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಬರುತ್ತಾರೆ. ನಿಮಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿ ಮತ ಹಾಕಿಸಿಕೊಳ್ಳುತ್ತಾರೆ. ಗೆದ್ದ ನಂತರ ಈ ಕಡೆ ಬರುವುದು ಮುಂದಿನ ಚುನಾವಣೆಗೇ’ ಎಂದು ಕೃಷ್ಣಪ್ಪ ತಿಳಿಸಿದರು.

‘ಅಧಿಕಾರಿಗಳು ಬರುತ್ತಾರೆ, ನಮ್ಮ ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನೊಂದು ವಾರದಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿ ಹೋಗಿ ವರ್ಷಗಳಾದರೂ ಈ ಕಡೆ ಬರುವುದಿಲ್ಲ. ಕೂಲಿ ಮಾಡಿದರೆ ನಮ್ಮ ಜೀವನ ನಡೆಯುತ್ತದೆ, ಇಲ್ಲವಾದರೆ ಉಪವಾಸ ಇರಬೇಕು’
ಎಂದರು.

‘ಕೆಲವರಿಗೆ ರೇಷನ್ ಕಾರ್ಡ್‌ ಇದೆ, ಇನ್ನು ಕೆಲವರಿಗೆ ಇಲ್ಲ. ನಾವು ನೂರಾರು ಬಾರಿ ಕೇಳಿ ಕೇಳಿ ಸಾಕಾಗಿ ಹೋಗಿದೆ. ಮಾಗಡಿಗೆ ಹೋಗಬೇಕೆಂದರೆ ಹಣದ ಸಮಸ್ಯೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ತೊಂದರೆಯಾಗಿದೆ’ ಎಂದು ಅವರು ಹೇಳಿದರು.

ಕುಡಿಯಲು ಕಟ್ಟೆ ನೀರು: ‘ಮನೆ, ರಸ್ತೆ, ಕುಡಿಯುವ ನೀರು ಇಲ್ಲದೆ ಕಟ್ಟೆ ನೀರನ್ನು ನಾವು ಈಗಲೂ ಕುಡಿಯಲು ಬಳಸುತ್ತಿದ್ದೇವೆ. ಈ ಕಟ್ಟೆ ನೀರಿನಲ್ಲಿ ದನ, ಎಮ್ಮೆಗಳನ್ನು ತೊಳೆಯಲಾಗುತ್ತದೆ. ಕಲುಷಿತವಾಗಿರುವ ಈ ಕಟ್ಟೆಯ ನೀರನ್ನು ಬಳಸಲು ಈಗ ನಾಗಶೆಟ್ಟಿಹಳ್ಳಿಯ ಕೆಲವು ಜನರು ತೊಂದರೆ ನೀಡುತ್ತಿದ್ದಾರೆ’ ಎಂದು ವೆಂಕಟಲಕ್ಷ್ಮಮ್ಮ ಆರೋಪಿಸಿದರು.

‘ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಜಿಗಲ್ಲಿನ ಕವಡಗಲ್ಲು ಬೆಟ್ಟದಲ್ಲಿ ವಾಸಿಸುತ್ತಿರುವ ಇರುಳಿಗ ಸಮುದಾಯದ ಕುಟುಂಬಗಳಿಗೆ ಸೌಕರ್ಯಗಳನ್ನು ಕಲ್ಪಿಸಬೇಕಾದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಬುಡಕಟ್ಟು ಅಧ್ಯಯನ ಮಾಡುತ್ತಿರುವ ಸಂಶೋಧಕ ಎಸ್. ರುದ್ರೇಶ್ವರ ದೂರಿದರು.

ನಮ್ಮನ್ನು ಕಾಡುಪ್ರಾಣಿ ಎಂದು ತಿಳಿದಿದ್ದಾರೆ...

‘ಸರ್ಕಾರದ ಯೋಜನೆಗಳು ಇವರನ್ನು ತಲುಪುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮನ್ನು ಕಾಡು ಪ್ರಾಣಿಗಳು ಎಂದು ಪರಿಗಣಿಸಿದಂತಿದೆ. ಪರಿಶಿಷ್ಟ ಜಾತಿಗೆ ಸೇರಿರುವ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಗ್ರಾಮಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮತ್ತ ಬರುವುದು ಮೈಲಿಗೆ ಎಂದುಕೊಂಡಿರಬಹುದು. ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇವರಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು. ಸೋಲಾರ್ ದೀಪಗಳನ್ನು ನೀಡಬೇಕು. ರಸ್ತೆ, ರೇಷನ್ ಕಾರ್ಡ್‌ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕು’ ಎಂದು ಇರುಳಿಗ ಸಮುದಾಯದ ಕೃಷ್ಣಪ್ಪ, ಸಾಕಯ್ಯ, ಈರಮ್ಮ, ವೆಂಕಟೇಶ್, ವೆಂಕಟಲಕ್ಷ್ಮಮ್ಮ, ಪುಟ್ಟಮಾದಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT