ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನಿಗೆ ಒತ್ತಾಯ; ಇರುಳಿಗರ ಪ್ರತಿಭಟನೆ

ಸುಪ್ರೀಂ ಕೋರ್ಟ್‌ ಆದೇಶ ಪಾಲಿಸದ ಅಧಿಕಾರಿಗಳು– ಆಕ್ಷೇಪ
Last Updated 15 ಜುಲೈ 2019, 13:14 IST
ಅಕ್ಷರ ಗಾತ್ರ

ಮಾಗಡಿ: ಅರಣ್ಯ ಹಕ್ಕು ಕಾಯ್ದೆ 2006ರ ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಇರುಳಿಗ ಸಮಾಜದವರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಇರುಳಿಗ(ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘2005ರ ಹಿಂದೆ ಅರಣ್ಯ ಪ್ರದೇಶದಲ್ಲಿ ಜಮೀನು ಮತ್ತು ವಾಸಕ್ಕೆ ಸಂಬಂಧಿಸಿದ ಕುರುಹುಗಳಾದ ಜಮೀನಿನ ಬದು, ಕಲ್ಲುಸೇವೆ (ಸ್ಮಶಾನ), ನೀರಿನ ಕೊಳ, ಪೂಜಾಸ್ಥಳ, ಒರಳುಕಲ್ಲು ಮತ್ತು ಕೆಲವು ಕಡೆಗಳಲ್ಲಿ ನ್ಯಾಯಿಕ ಹಾಗೂ ಅರೆನ್ಯಾಯಿಕ ದಾಖಲೆಗಳು ಕಂಡು ಬಂದರೂ ಅವುಗಳನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು. ಇರುಳಿಗರಿಗೆ ಭೂಮಿ ಮಂಜೂರಾಗಿ ಮಾಡಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಬರಹರೂಪದಲ್ಲಿ ಇರುವ ದಾಖಲಾತಿ ನೀಡಿ ಎನ್ನುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.

‘ಭೂಮಿ ಹುಟ್ಟಿದಂದಿನಿಂದಲೂ ಅರಣ್ಯದಲ್ಲಿ ವಾಸವಾಗಿರುವ ಇರುಳಿಗ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ. ಬುಡಕಟ್ಟು ಸಮುದಾಯದವರ ಬಳಿ ಯಾವುದೇ ಲಿಖಿತ ದಾಖಲೆಗಳಿಲ್ಲ. ಗ್ರಾಮ ಅರಣ್ಯ ಸಮಿತಿಗಳ ನಿರ್ಣಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಅಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಬುಡಕಟ್ಟು ಜನರು ತಲೆಮಾರಿನಿಂದ ವಾಸಿಸುತ್ತಿರುವ ಅರಣ್ಯದಿಂದ ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಜತೆಗೆ, ಬಲಾಢ್ಯರಿಗೆ ಅರಣ್ಯಭೂಮಿ ಮಂಜೂರು ಮಾಡಿದ್ದಾರೆ. ಇರುಗಳಿರಿಗೆ ಭೂಮಿ ಹಕ್ಕು ನೀಡದೆ ವಂಚಿಸಿದ್ದಾರೆ. ಪಾರಂಪರಿಕ ಅರಣ್ಯವಾಸಿಗಳನ್ನು ಅವರ ಪುನರ್‌ ವಸತಿಯ ಕಾನೂನು ಹಕ್ಕನ್ನು ಮಾನ್ಯ ಮಾಡಬೇಕು. ಅರಣ್ಯದಿಂದ ಒಕ್ಕಲೆಬ್ಬಿಸಿ ಹೊರಗೆ ಕಳುಹಿಸಬಾರದು’ ಎಂದರು.

ಸಂಘದ ಗೌರವಾಧ್ಯಕ್ಷ ಮಹದೇವಯ್ಯ ಮಾತನಾಡಿ, ‘12 ತಲೆಮಾರುಗಳಿಂದಲೂ ಅರಣ್ಯವನ್ನು ನಮ್ಮ ತಾಯಿ ಎಂದು ನಂಬಿಕೊಂಡು ಬದುಕುತ್ತಿರುವ ಇರುಳಿಗರ ವಾಸಿಸುವ ಹಾಡಿಗಳ ಸುತ್ತಲಿನ ಸಾಕ್ಷ್ಯಗಳನ್ನು ಪರೀಶೀಲನೆಗೆ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅರಣ್ಯ ಭೂಮಿಯಲ್ಲಿ ನಮ್ಮ ಪೂರ್ವಿಕರ ತಲೆಬರುಡೆ, ಮೂಳೆಗಳಿವೆ ಅವುಗಳನ್ನೇ ಸಾಕ್ಷ್ಯವನ್ನಾಗಿಸಬೇಕು. ಅರಣ್ಯದಲ್ಲಿ ಮೈಸೂರು ರಾಜರ ತಲೆಬುರುಡೆಗಳಿಲ್ಲ. ವನವಾಸಿಗಳನ್ನು ಒಕ್ಕಲೆಬ್ಬಿಸುವುದು ಮಾನವ ಹಕ್ಕುಗಳ ಉಲ್ಲಂಘನೆ’ ಎಂದರು.

ದಲಿತ ಮುಖಂಡ ದೊಡ್ಡಿ ಲಕ್ಷ್ಮಣ್‌ ಮಾತನಾಡಿದರು. ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್‌ ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ, ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಲೋಕೇಶ್‌, ಪ್ರಭಾರಿ ಪಿಡಿಒ ಸುರೇಶ್‌ ಕುಮಾರ್‌ ಇದ್ದರು.

ರಾಮನಗರ ತಾಲ್ಲೂಕು ಇರುಳಿಗರ (ಅರಣ್ಯವಾಸಿ) ಸಂಘದ ಅಧ್ಯಕ್ಷ ರಾಜು, ಮುಖಂಡರಾದ ಮಾರಪ್ಪ, ಅಟ್ಟಬರಿಯಪ್ಪ, ಪುಟ್ಟಮಾದಯ್ಯ, ಚಿಕ್ಕಮಾದಯ್ಯ, ಮುನಿಯಪ್ಪ,ಯಳಗಯ್ಯ, ಚಿಕ್ಕಬಗರಮ್ಮ, ಮುತ್ತಯ್ಯ, ಚಿಕ್ಕೋಳಮ್ಮ, ಅಪ್ಪಯ್ಯ ಇರುಳಿಗರ ಸಮಸ್ಯೆಗಳನ್ನು ವಿವರಿಸಿದರು. ಅಗಲಕೋಟೆ, ಏಳಿಗೆಹಳ್ಳಿ, ಸಿದ್ದೇಶ್ವರ ಕಾಲೊನಿ, ಕುರಿಲಿಂಗಯ್ಯನ ದೊಡ್ಡಿ ಜೋಡುಗಟ್ಟೆ, ರಾಮಕಲ್ಲ ಪಾಳ್ಯ, ಕಾಳಯ್ಯನ ಪಾಳ್ಯದ ಹಾಡಿಗಳಿಂದ ಬಂದಿದ್ದ ನೂರಾರು ಜನರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT