ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಗುರುತಿಸಿ ಕೊಡಲು ಒತ್ತಾಯ

1991-92 ರಲ್ಲಿ ಬಡವರಿಗೆ ನಿವೇಶನ ವಿತರಣೆ * ಗಡಿ ಗುರುತಿಸಿ ಕೊಡಲು ಆಗ್ರಹ
Last Updated 24 ಮೇ 2019, 13:19 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಬಾನಂದೂರು ಗ್ರಾಮದ ಸರ್ವೇ ನಂಬರ್ 111ರಲ್ಲಿ ಈಗಾಗಲೇ ಬಡವರಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದ್ದು, ಕೂಡಲೇ ಜಾಗ ಗುರುತಿಸಿಕೊಡಬೇಕು ಎಂದು ಫಲಾನುಭವಿಗಳು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಬಿಡದಿ ಹೋಬಳಿಯ ಬಾನಂದೂರು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಮದ ಹಿರಿಯ ಮುಖಂಡ ಕ್ಯಾತಯ್ಯ ಮಾತನಾಡಿ, ‘ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸೂಚನೆ ಮೇರೆಗೆ ಅಂದಿನ ಶಾಸಕರಾಗಿದ್ದ ಸಿ.ಎಂ ಲಿಂಗಪ್ಪನವರು 1991-92 ರಲ್ಲಿ ಬಾನಂದೂರು ಗ್ರಾಮದ ಎಲ್ಲ ಜನಾಂಗದ ಬಡವರಿಗೆ ನಿವೇಶನವನ್ನು ವಿತರಿಸಲು ತೀರ್ಮಾನಿಸಿ, 23 ಜನ ಬಡವರನ್ನು ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸಿದ್ದರು’ ಎಂದು ತಿಳಿಸಿದರು.

‘30x40 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ರಾಮನಗರ ತಾಲ್ಲೂಕಿನ ತಹಶೀಲ್ದಾರ್ ಅವರ ಸಹಿ ಮತ್ತು ಸೀಲ್ ಇರುವ ಹಕ್ಕುಪತ್ರ ನೀಡಲಾಗಿದೆ. ಆದರೆ ಮಂಜೂರಾತಿ ನೀಡಿರುವ ನಿವೇಶನಗಳನ್ನು ಗುರುತಿಸಿಕೊಡಲು ತಾಲ್ಲೂಕು ಆಡಳಿತ ಇದುವರೆಗೂ ಮುಂದಾಗಿಲ್ಲ. ಮನವಿ ಸಲ್ಲಿಸಿದ್ದರೂ ಸ್ಥಳ ನಿಗದಿ ಮಾಡಿಲ್ಲ’ ಎಂದು ಆರೋಪಿಸಿದರು.

ಗ್ರಾಮದ ಮಹಿಳೆ ಕಮಲಮ್ಮ ಮಾತನಾಡಿ, ‘ಹಿಂದೆ ಚಿಕ್ಕದಾಗಿದ್ದ ಕುಟುಂಬಗಳು ಈಗ ದೊಡ್ಡದಾಗಿವೆ. ಇರುವ ಸಣ್ಣ ಜಾಗದಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಕೆಲವರು ಪಟ್ಟಣಗಳಿಗೆ ವಲಸೆ ಹೋಗಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಹಿಂದೆ ನಮಗೆ ಹಕ್ಕುಪತ್ರ ನೀಡಲಾಗಿದೆ ಅಷ್ಟೇ. ಆದರೆ ನಿವೇಶನ ಗುರುತಿಸಿಕೊಟ್ಟಿಲ್ಲ. ಕೂಡಲೇ ನಿವೇಶನ ಗುರುತಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

ಸ್ಥಳೀಯ ಪುರಸಭೆ ಸದಸ್ಯ ಶಿವಕುಮಾರ್ ಮಾತನಾಡಿ, ‘ಬಡವರಿಗೆ ನೀಡಿರುವ ಗೋಮಾಳ ಪ್ರದೇಶದಲ್ಲಿ ಖಾಸಗಿಯವರಿಂದ ಭೂ ಕಬಳಿಕೆಯಾಗುತ್ತಿದೆ. ಕೆಲವು ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ಸ್ವಾರ್ಥಕ್ಕಾಗಿ ವಿವಿಧ ಉದ್ದೇಶಗಳಿಗೆ ಭೂಮಿ ಮಂಜೂರು ಮಾಡಿಸುವಂತೆ ಷಡ್ಯಂತ್ರಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ಬಡವರಿಗೆ ವಿತರಣೆ ಮಾಡಿರುವ ಹಕ್ಕುಪತ್ರದ ಅನ್ವಯ ನಿವೇಶನಗಳನ್ನು ಗುರುತಿಸಿ ಹಂಚಿಕೆ ಮಾಡಬೇಕು. ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು. ಇಲ್ಲದಿದ್ದರೆ ಬೇಡಿಕೆ ಈಡೇರುವವರೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಫಲಾನುಭವಿಗಳಾದ ಪಿಳ್ಳವೆಂಕಟಯ್ಯ, ಗೋವಿಂದಯ್ಯ, ಪೀಚಯ್ಯ, ನಿಂಗಯ್ಯ, ಮೈಲಾರಯ್ಯ, ಚಾಮಯ್ಯ, ನಿಂಗಮಾರ, ಗಣೇಶಯ್ಯ, ಮಹದೇವಯ್ಯ, ಗೇಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT