ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಪಠ್ಯ ಕೈಬಿಡಲು ಒತ್ತಾಯ

ದಲಿತ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Last Updated 8 ಜೂನ್ 2022, 2:40 IST
ಅಕ್ಷರ ಗಾತ್ರ

ರಾಮನಗರ: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಅಸಂವಿಧಾನಿಕವಾಗಿ ಮರು ಪರಿಷ್ಕರಿಸಿದ ಎಲ್ಲಾ ಪಠ್ಯಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ರೋಹಿತ್ ಚಕ್ರತೀರ್ಥ ತನ್ನ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿ ನಾಡಗೀತೆಯನ್ನು ಕೆಟ್ಟದಾಗಿ ತಿರುಚಿ ಅಪಮಾನ ಮಾಡಿದ್ದಾರೆ. ರಾಷ್ಟ್ರಕವಿ ಕುವೆಂಪು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ತುಚ್ಛ ಮಾತುಗಳಲ್ಲಿ ನಿಂದಿಸಿ ವ್ಯಂಗ್ಯವಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆಗೆ ನೇಮಿಸಿದ್ದು ತಪ್ಪು ಎಂದು ಪ್ರತಿಭಟನಕಾರರು ದೂರಿದರು.

ಶಾಲಾ ಶಿಕ್ಷಣವನ್ನು ಅವೈಜ್ಞಾನಿಕ, ಅಸಾಂವಿಧಾನಿಕ ಹಾಗೂ ಅನೈತಿಕತೆಗೊಳಿಸಲು ಹೊರಟಿರುವ ಪಠ್ಯಪುಸ್ತಕ ಮರುಪರಿಷ್ಕರಣೆ ಪಠ್ಯವನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹೊಸದಾಗಿ ಸೇರಿಸಲಾದ 10 ಪಠ್ಯಗಳಲ್ಲಿ 9 ಪಠ್ಯಗಳನ್ನು ಬ್ರಾಹ್ಮಣ ಲೇಖಕರು ಬರೆದಿದ್ದಾರೆ. ಇದಕ್ಕಾಗಿ ಗೌತಮ ಬುದ್ಧರ ಹೊಸ ಧರ್ಮಗಳ ಉದಯ ಪಠ್ಯವನ್ನು ಕೈಬಿಟ್ಟಿದ್ದಾರೆ. ದಲಿತ ಸಾಹಿತಿ ಅರವಿಂದ ಮಾಲಗತ್ತಿ ಅವರ ಬುದ್ಧನ ಕುರಿತ ಪದ್ಯವನ್ನು ಕೈಬಿಡಲಾಗಿದೆ. ಪಿ. ಲಂಕೇಶ್, ಸಾರಾ ಅಬೂಬಕರ್, ಎಲ್. ಬಸವರಾಜು, ಕೆ. ನೀಲಾ, ಬಿ.ಟಿ. ಲಲಿತಾ ನಾಯಕ್ ಅವರ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರ ಪಠ್ಯವನ್ನು ತಿರುಚಲಾಗಿದೆ. ಸಂಸ್ಕೃತಿ ಇಲ್ಲದವರು ‘ಕಾಡುಜನರು’ ಎಂಬ ಸಮಾಜ ವಿರೋಧಿ ಪಠ್ಯ ಸೇರಿಸಲಾಗಿದೆ. ದೇಶಭಕ್ತ ಭಗತ್ ಸಿಂಗ್ ಪಠ್ಯ ಕೈಬಿಡಲಾಗಿದೆ. ಜಾತಿ ಪದ್ಧತಿ, ವರ್ಣಾಶ್ರಮವನ್ನು ಪ್ರೋತ್ಸಾಹಿಸುವ ಆರ್‌ಎಸ್‌ಎಸ್ ಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಬಗ್ಗೆ ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ದ್ವೇಷ ಬಿತ್ತಲಾಗುತ್ತಿದೆ ಎಂದು ದೂರಿದರು.

ರೋಹಿತ್ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದು, ಆತ ಶಿಕ್ಷಣ ತಜ್ಞನಲ್ಲ. ಪಠ್ಯ ಪರಿಷ್ಕರಣೆ ಮಾಡುವ ಯಾವುದೇ ಯೋಗ್ಯತೆಯಾಗಲಿ, ಅರ್ಹತೆಯಾಗಲಿ ಇರುವುದಿಲ್ಲ. ಈ ಸಮಿತಿ ಪರಿಷ್ಕರಿಸಿರುವ ಪಠ್ಯಗಳು ಶೂದ್ರ, ದಲಿತ- ದಮನಿತ ಮಹಿಳಾ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿರೋಧಿಯಾಗಿದೆ. ಅರ್ಹತೆ ಇಲ್ಲದ ವ್ಯಕ್ತಿಯನ್ನು ಸರ್ಕಾರ ಪಠ್ಯ ಪರಿಷ್ಕರಣೆಗೆ ಏಕೆ ನೇಮಿಸಿತು ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಯ ಮುಖಂಡರಾದ ಶಿವಕುಮಾರಸ್ವಾಮಿ, ಕೆ. ಶಿವಪ್ರಕಾಶ್, ಜಗದೀಶ್, ಮುಖಂಡರಾದ ಶಿವಕುಮಾರ್, ಚೆಲುವರಾಜು, ಶಿವಲಿಂಗಯ್ಯ, ಶೇಖರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT