ಶುಕ್ರವಾರ, ಅಕ್ಟೋಬರ್ 18, 2019
28 °C
ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಆಯೋಜನೆ

ದಸರಾ ಉತ್ಸವದಲ್ಲಿ ಗಮನ ಸೆಳೆದ ಸ್ಪರ್ಧೆಗಳು

Published:
Updated:
Prajavani

ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಮಂಗಳವಾರ ನಡೆದ ದಸರಾ ಜಾನಪದ ಉತ್ಸವದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆ ಜನರ ಗಮನ ಸೆಳೆಯಿತು.

ಮದಗಜಗಳಂತೆ ಶಕ್ತಿಶಾಲಿ ಯುವಕರನ್ನ ಹೊಂದಿದ್ದ ಪುರುಷ ತಂಡಗಳು, ಮಹಿಳಾ ತಂಡಗಳು ಹಾಗೂ ಮಕ್ಕಳ ತಂಡಗಳ ಮಧ್ಯೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯ ಪ್ರದರ್ಶನ ರೋಮಾಂಚನಕಾರಿಯಾಗಿತ್ತು. ಹಗ್ಗಜಗ್ಗಾಟ ಪಂದ್ಯ ನೋಡಲು ಜಮಾಯಿಸಿದ್ದ ವೀಕ್ಷಕರು ಸಿಳ್ಳೆ ಹಾಕುವುದು ಮತ್ತು ಕೇಕೆ ಹಾಕುವುದರ ಜತೆಗೆ ಬಿಡಬ್ಯಾಡ, ಜಗ್ಗು ಜಗ್ಗು, ಇನ್ನಷ್ಟು ಜಗ್ಗು ಎಂದು ಸ್ಪರ್ಧಾಗಳನ್ನು ಹುರುದುಂಬಿಸುತ್ತಿದ್ದರು.

ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ರಾಮನಗರದ ಚೇತನ್ ಮತ್ತು ತಂಡ (ಪ್ರಥಮ), ಸುಗ್ಗನಹಳ್ಳಿ ರಾಖಿ ಮತ್ತು ತಂಡ (ದ್ವಿತೀಯ), ಚನ್ನಪಟ್ಟಣದ ಮಹದೇವ ಮತ್ತು ತಂಡ (ತೃತೀಯ) ಮತ್ತು ಕನಕಪುರದ ತೇಜಸ್ ಮತ್ತು ತಂಡ ಸಮಾಧಾನಕರ ಬಹುಮಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಬಿಡದಿಯ ಪೂಜಾ ಮತ್ತು ತಂಡ (ಪ್ರಥಮ), ನಿಖಿತಾ ಮತ್ತು ತಂಡ (ದ್ವಿತೀಯ), ರಾಮನಗರದ ವೀಣಾ ಮತ್ತು ತಂಡ (ತೃತೀಯ) ಸ್ಥಾನ ಪಡೆದರು. 18 ವರ್ಷ ಒಳಗಿನ ವಿಭಾಗದಲ್ಲಿ ರಾಮನಗರದ ಚಂದನ್ ಮತ್ತು ತಂಡ (ಪ್ರಥಮ), ಕುಂಬಾಪುರದ ಮನೋಜ್ ಮತ್ತು ತಂಡ (ದ್ವಿತೀಯ), ಚನ್ನಪಟ್ಟಣದ ಚಂದನ್ ಮತ್ತು ತಂಡ (ತೃತೀಯ) ಸ್ಥಾನ ಮತ್ತು ಚನ್ನಪಟ್ಟಣದ ರಮ್ಯಾ ಸಮಾಧಾನಕರ ಬಹುಮಾನ ಪಡೆದರು.

ಪುರುಷರಿಗೆ ತೂರ್ ಚೆಂಡು ಸ್ಪರ್ಧೆ ನಡೆಯಿತು. ಕಂಸಾಳೆ, ಕರಗ, ಸುಗ್ಗಿ ಕುಣಿತ, ಪಟ ಹಾಗೂ ಪೂಜಾ ಕುಣಿತಗಳ ಪ್ರದರ್ಶನ ನಡೆಯಿತು. ಜಾನಪದ ಲೋಕದ ಮಹಾದ್ವಾರದಿಂದ ಕನ್ನಮಂಗಲದೊಡ್ಡಿಯ ಮಹಿಳೆಯರ ಆರತಿ ಮತ್ತು ಗ್ರಾಮಸ್ಥರ ಮೆರವಣಿಗೆಯೊಂದಿಗೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಬನ್ನಿ ಮರದ ಬಳಿ ಹೋಗಿ ಬನ್ನಿ ಮುಡಿದರು.

6 ರಿಂದ 12 ವರ್ಷದವರೆಗಿನ ಮಕ್ಕಳಿಗೆ 'ಜಾನಪದ ವೇಷಭೂಷಣ ಸ್ಪರ್ಧೆ' ನಡೆಯಿತು. ಈ ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನವಾಗಿ ಕ್ರಮವಾಗಿ ₹3 ಸಾವಿರ, ₹2 ಸಾವಿರ, ₹1 ಸಾವಿರ ಹಾಗೂ ₹500 ನಗದನ್ನು ನೀಡಲಾಯಿತು. ರಾಜ್ಯ ಮತ್ತು ಹೊರ ರಾಜ್ಯಗಳ ಜನಪದ ಕಲೆಗಳ ಪ್ರದರ್ಶನ ನಡೆಯಿತು.

ದಸರಾ ಜಾನಪದ ಉತ್ಸವಕ್ಕೆ ಫೌಂಡೇxನ್ ಫಾರ್ ಕ್ವಾಲಿಟಿ ಇಂಡಿಯಾದ ಸಿಇಒ ಡಾ. ತುಪ್ಪಿಲ್ ವೆಂಕಟೇಶ್ ಚಾಲನೆ ನೀಡಿದರು. ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕೆ.ವಿ.ಆರ್. ಠಾಗೂರ್, ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಸಂಘಟಕ ಹಾಸನ ರಘು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್, ಸಾಂಸ್ಕೃತಿಕ ಸಂಘಟಕ ಸಿ.ಕೆ. ರಾಮೇಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ಹನುಮಂತಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಇದ್ದರು.

‘ಇಂದಿನ ಯಾಂತ್ರಿಕ ಬದುಕಿನಲ್ಲಿ ಮನುಷ್ಯನ ನೈಜ ಶಕ್ತಿಯ ಅನಾವರಣಕ್ಕೆ ಈ ಪಂದ್ಯಾವಳಿ ಒಳ್ಳೆಯ ವೇದಿಕೆಯಾಗಿದೆ. ಪಾಶ್ಚಾತ್ಯ ವ್ಯಾಮೋಹಕ್ಕೆ ಮಾರು ಹೋಗಿ ಕ್ರಿಕೇಟ್ ನಂತಹ ಕ್ರೀಡೆಗಿಂತ ಗ್ರಾಮೀಣ ಭಾಗದ ಆರೋಗ್ಯವಂತಹ ಸಮಾಜ ನಿರ್ಮಾಣ ಮಾಡುವಂತಹ ಆಟಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

Post Comments (+)