ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಪ್ರಜ್ಞೆ ಬಿತ್ತುವವರು ಬೇಕು: ಲೇಖಕ ಜಗದೀಶ ಕೊಪ್ಪ

ಕಾಳೇಗೌಡ–ಕೆಂಪಮ್ಮ ದಂಪತಿ ವಿವಾಹಕ್ಕೆ 50 ವರ್ಷ: ಜಾನಪದ ಲೋಕದಲ್ಲಿ ವಿಚಾರ ಸಂಕಿರಣ
Last Updated 12 ಜೂನ್ 2022, 4:43 IST
ಅಕ್ಷರ ಗಾತ್ರ

ರಾಮನಗರ: ನಮ್ಮ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ, ನೈತಿಕತೆ ತಳಹದಿಯಲ್ಲಿ ಮಾರ್ಗದರ್ಶನ ನೀಡುವವರ ಅಗತ್ಯ ಹೆಚ್ಚಿದೆ ಎಂದು ಲೇಖಕ ಜಗದೀಶ ಕೊಪ್ಪ ಅಭಿಪ್ರಾಯಪಟ್ಟರು.

ಕೆಂಪಮ್ಮ ಅಬ್ಬೂರು ಮತ್ತು ಕಾಳೇಗೌಡ ನಾಗವಾರ ದಂಪತಿಯ ಸರಳ ಮದುವೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ಜಾನಪದ ಲೋಕದಲ್ಲಿ ಶನಿವಾರ ಆಯೋಜಿಸಿದ್ದ ಅವಲೋಕನ ಕಾರ್ಯಕ್ರಮದಲ್ಲಿ ‘ ಸರಳ‌ ಮದುವೆ; ಸಾಂಸ್ಕೃತಿಕ ಮತ್ತು‌ ಸಾಮಾಜಿಕ ತಲ್ಲಣಗಳು’ ಕುರಿತು ಅವರು ಮಾತನಾಡಿದರು.

‘ಇಂದು ₹5ರಿಂದ ₹20 ಲಕ್ಷದಷ್ಟು ಹಣವನ್ನು‌ ಕೇವಲ ಪ್ರೀ ವೆಡ್ಡಿಂಗ್ ಫೋಟೊಶೂಟ್ ಗಾಗಿ‌ ಬಳಸಲಾಗುತ್ತಿದೆ. ಬಹುತೇಕರು ಮನೆಯಂಗಳದಲ್ಲಿ ಮದುವೆ ಕಾರ್ಯ ಮಾಡುವುದನ್ನು ಬಿಟ್ಟು ಕಲ್ಯಾಣ ಮಂಟಪಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ವಿದ್ಯಾವಂತ ದಲಿತರ ಮನೆಗಳಲ್ಲಿ ಸತ್ಯನಾರಾಯಣ ಪೂಜೆಯಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ದುರಂತ’ ಎಂದು ವಿಷಾದಿಸಿದರು.

‘ಕಾಳೇಗೌಡರ ಮದುವೆ ನಮ್ಮ‌ ತಲೆಮಾರಿಗೆ ಬಹುದೊಡ್ಡ ಪ್ರಭಾವ ಬೀರಿತ್ತು. ಇದರಿಂದಾಗಿ ನನ್ನ ಬಹುತೇಕ ಗೆಳೆಯರು ಸರಳ ವಿವಾಹಗಳಿಗೆ ಮೊರೆ ಹೋದೆವು ಎಂದು ಅವರು ಬಣ್ಣಿಸಿದರು.

ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ ‘ಮದುವೆ ಎನ್ನುವುದು ವೈಯಕ್ತಿಕ ಜೊತೆಗೆ ಸಾಮಾಜಿಕ ಅಂಶವೂ ಹೌದು. ಗಾಂಧಿ ಕೂಡ ಅಂತರ್ಜಾತಿ ವಿವಾಹವನ್ನು‌ ಒಪ್ಪಿದ್ದರು’ ಎಂದರು.

‘ ಸ್ತ್ರೀ ಸಮಾನತೆ, ಅಂತರ್ಜಾತಿ‌ ಮದುವೆ ಆದವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಬೇಕು ಎನ್ನುವುದು ಲೋಹಿಯಾರ ಸಪ್ತ ಕ್ರಾಂತಿಗಳಲ್ಲಿ ಒಂದು ಅಂಶವಾಗಿತ್ತು’ ಎಂದು ವಿವರಿಸಿದರು. ‘ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಪೋಷಕರ ಕರ್ತವ್ಯ. ಆದರೆ ಮದುವೆ ಸ್ವಾತಂತ್ರ್ಯ ವನ್ನು ಅವರಿಗೇ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ರಾಜೇಂದ್ರ ಪ್ರಸಾದ್ ಮಾತನಾಡಿ ' ಮಂಡ್ಯ ಭಾಗದಲ್ಲಿ ದಶಕಗಳ ಹಿಂದೆ ಶೇ 70ರಷ್ಟು ಸರಳ ವಿವಾಹ ನಡೆಯುತ್ತಿತ್ತು.‌ ಈಗ ಅಂತಹ ವಿವಾಹ ಕಾಣುವುದೇ ಅಪರೂಪ ಆಗಿದೆ. ವೈದಿಕಮಯ ಆಚರಣೆಗಳಿಗೆ ಒತ್ತು ನೀಡಿದ್ದು, ವೈಭವೀಕರಣ ಹೆಚ್ಚಿದೆ. ಪರಿಣಾಮವಾಗಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಚೆಗೆ ವಚನ ಮಾಂಗಲ್ಯ, ಸಂವಿಧಾನ ಸಾಕ್ಷಿಯ‌ ಮಾಂಗಲ್ಯ, ಸಾಮೂಹಿಕ ಮದುವೆಗಳು ಹೆಚ್ಚುತ್ತಿರುವುದು ಆರೋಗ್ಯಕಾರಿ ಬೆಳವಣಿಗೆ ಆಗಿದೆ‌. ರೈತ ಸಂಘದಂತಹ ಸಂಘಟನೆಗಳ‌ ಮೂಲಕ ಮತ್ತೊಂದು ಆಂದೋಲನ ನಡೆಯಬೇಕಿದೆ’ ಎಂದರು.

‘ಸರಳ ಮದುವೆಗೆ ರೈತ ಸಂಘದ ಪ್ರಭಾವ’ ಕುರಿತು ರೈತ ಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ ‘ ಹಿಂದಿ‌ನ ಸರಳ ವಿವಾಹಗಳಲ್ಲಿ ಕಾಲ ನಿರ್ಗುಣವಾಗಿತ್ತು. ಕಲ್ಯಾಣ ಮಂಟಪಗಳ ಮದುವೆಯನ್ನು ರೈತ ಸಂಘ ನಿಷೇಧಿಸಿತ್ತು. ಮಾನವ ಮಂಟಪದಂತಹ ವೇದಿಕೆಗಳು ಸೃಷ್ಟಿಯಾದವು. ಇಂದು ಅಂತಹ ಪ್ರಯತ್ನಗಳು ನಿಂತಿರುವುದು ವಿಷಾದದ ಸಂಗತಿ. ಹೆಣ್ಣು‌ ಮಕ್ಕಳನ್ನು ಗೌರವಿಸಿ, ಸರಳ ಮದುವೆಗೆ ಪೋಷಕರು ಆದ್ಯತೆ‌ ನೀಡಬೇಕಿದೆ’ ಎಂದು ತಿಳಿಸಿದರು.

ಗ್ರಾಮೀಣ ಬದುಕಿನ ಮೇಲೆ ಸರಳ ಮದುವೆಗಳು ಉಂಟು ಮಾಡಿದ ತಲ್ಲಣ ಕುರಿತು ಕೇಶವರೆಡ್ಡಿ ಹಂದ್ರಾಳ ಮಾತನಾಡಿ ‘ಹಳ್ಳಿಗಳಲ್ಲಿ ಇಂದು ಸರಳ ಮದುವೆಗೆ ಒಲವು ತೋರುತ್ತಿದ್ದಾರೆ. ತುಂಬಾ ಪ್ರೀತಿ ಇದ್ದಾಗ ಮಾತ್ರ ಇಂತಹ ವಿವಾಹಗಳು ಯಶಸ್ವಿ ಆಗಲು ಸಾಧ್ಯ’ ಎಂದರು.

‘ಈಚೆಗೆ ಮತ್ತೆ ಮರ್ಯಾದೆ‌ ಹತ್ಯೆ ಶುರು ಆಗಿರುವುದು ಆತಂಕದ ಸಂಗತಿ. ಆಷಾಢಭೂತಿ ಪ್ರಗತಿಪರರು ನಮ್ಮಲ್ಲಿ ಇದ್ದಾರೆ. ದೊಡ್ಡ ಗ್ರಹಿಕೆ ಉಳ್ಳವರಲ್ಲೂ ಸ್ಪಷ್ಟತೆ ಕೊರತೆ ಇದೆ’ ಎಂದು ಮಂಜುನಾಥ ಅದ್ಯ ಕಳವಳ ವ್ಯಕ್ತಪಡಿಸಿದರು. ರೇಣುಕಾರಾಧ್ಯ ಮಾತನಾಡಿ ‘ ಇಡೀ ದೇಶ ಇನ್ನೂ ಜಾತಿ ಕೇಂದ್ರಿತ ವಾದ ವ್ಯವಸ್ಥೆಯಲ್ಲಿದೆ. ಅಂತರ್ಜಾತಿ ವಿವಾಹ ಆಗುವವರು ಆರ್ಥಿಕ ಭದ್ರತೆಗೂ ಆದ್ಯತೆ‌ ನೀಡಬೇಕು ಎಂದರು. ಪತ್ರಕರ್ತ ಅಗ್ನಿ‌ ಶ್ರೀಧರ್, ಕಾಳೇಗೌಡರ ಮದುವೆ ಅಂದಿನ ಕಾಲಕ್ಕೆ ಒಂದು ಕ್ರಾಂತಿ. ಅದು ಅವರ ಬದುಕಿನ ದೊಡ್ಡ ಕಾವ್ಯ’ ಎಂದು ಬಣ್ಣಿಸಿದರು.

ಅಬ್ಬೂರು ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ಬೂರು ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT