ಬುಧವಾರ, ಡಿಸೆಂಬರ್ 2, 2020
17 °C
* ನಾಡಪ್ರಭು ಹೆಸರಿನಿಂದ ಬೆಂಗಳೂರು ಸುತ್ತಮುತ್ತ ಹೆಸರಾದವರು

ಮಾಗಡಿ: ಕೆಂಪೇಗೌಡರ 511ನೇ ಜಯಂತಿ, ಜನಪರ ಆಡಳಿತ ರೂವಾರಿಗಳ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಜೂನ್ 27ರಂದು ಬೆಳಿಗ್ಗೆ 8ಕ್ಕೆ ಕೆಂಪೇಗೌಡರ 511ನೇ ಜಯಂತಿ ಪುರಸಭೆ ಮುಂದಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರಳವಾಗಿ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.

ಕೆಂಪೇಗೌಡ ವಂಶಜರ ಚಾರಿತ್ರಿಕ ಹಿನ್ನೆಲೆ: ವಿಜಯನಗರ ಸಾಮ್ರಾಜ್ಯದ ದಕ್ಷಿಣದ ಗಡಿರಕ್ಷಣೆಗೆ ದುಡಿದು ಮಡಿದ ಕೆಂಪೇಗೌಡರ ವಂಶಜರ ಆದರ್ಶ ನಾಡಿನ ಜನರೆಲ್ಲರಿಗೂ ಮಾರ್ಗದರ್ಶಿ ಎಂದು ಇತಿಹಾಸ ಸಂಶೋಧಕ ಪ್ರೊ.ತಿಮ್ಮಹನುಮಯ್ಯ ಅಭಿಪ್ರಾಯಪಟ್ಟರು. 

ತಮಿಳುನಾಡಿನ ಯಣಮಂಜಿ ಪುತ್ತೋರಿನಿಂದ ಆವತಿ, ದೇವನಹಳ್ಳಿ, ಯಲಹಂಕಗಳಲ್ಲಿ ಕೆಂಪೇಗೌಡರ ಪೂರ್ಜಜರು ಪಾಳೆಪಟ್ಟು ಕಟ್ಟಿ ಆಳ್ವಿಕೆ ನಡೆಸಿದ್ದಾರೆ. ಹಿರಿಯ ಕೆಂಪೇಗೌಡ ಮತ್ತು ಅವರ ಮಕ್ಕಳು ಬೆಂಗಳೂರು, ಸಾವನದುರ್ಗ, ಮಾಗಡಿ, ಭೈರವನದುರ್ಗ, ಹುತ್ರಿದುರ್ಗ, ಕುಣಿಗಲ್ ಗಳನ್ನು ತಮ್ಮ ಆಡಳಿತದ ನೆಲೆಗಳನ್ನಾಗಿಸಿಕೊಂಡು ಜನೋಪಯೋಗಿ ಕೆಲಸಗಳನ್ನು ಮಾಡಿ ಯಥಾರಾಜ ತಥಾ ಪ್ರಜೆ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 

ಹಿರಿಯ ಕೆಂಪೇಗೌಡ: (1510-1570) ಬೆಂಗಳೂರು ನಿರ್ಮಾತೃ. ವಿಜಯನಗರ ಅರಸರ ಆಶಯದಂತೆ ಬೆಂಗಳೂರಿನಲ್ಲಿ ಗುಡಿಗೋಪುರ, ಕೆರೆಕಟ್ಟೆ, ಸರ್ವಸಮುದಾಯದರಿಗೆ ಮಾರುಕಟ್ಟೆ ನಿರ್ಮಿಸಿದರು. ವಿಜಯನಗರದ ಅರಸರ ಸಾಮಂತ ಪ್ರಭುಗಳಾಗಿ ಜನಪರ ಆಡಳಿತ ನಡಸಿದರು.

ಇಮ್ಮಡಿ ಕೆಂಪೇಗೌಡ: (1585-1658) ಧೈರ್ಯ ಸಾಹಸಗಳಿಗೆ ಹೆಸರಾದವರು. ವಿಜಯನಗರದ ಅರವೀಡು ಸಂತತಿಯ ವೆಂಕಟಪತಿ ಮತ್ತು ಶ್ರೀರಂಗರಾಯ, ಅಳಿಯರಾಮರಾಯರ ಆಡಳಿತಕ್ಕೆ ಭುಜಬಲ ನೀಡಿದ್ದವರು. ಕ್ರಿ.ಶ.1628ರಲ್ಲಿ ರಣದುಲ್ಲಾಖಾನ್ ಬೆಂಗಳೂರಿಗೆ ದಾಳಿ ಮಾಡಿದ ನಂತರ ಸಾವನದುರ್ಗದಲ್ಲಿ ನೆಲೆಸಿದರು. ಮಾಗಡಿ ಆಳುತ್ತಿದ್ದ ಗುಡೇಮಾರನಹಳ್ಳಿ ತಳಾರಿ ಗಂಗಪ್ಪ ನಾಯಕನನ್ನು ಕೊಂದು ಮಾಗಡಿ ದುರ್ಗವನ್ನು ವಶಪಡಿಸಿಕೊಂಡರು. ಪಾಳೇಗಾರ ಕಟ್ಟಿಸಿದ್ದ ಮಣ್ಣಿನ ಕೋಟೆ ಹೊರಮೈಗೆ ಕಲ್ಲುಗಳನ್ನು ಕಟ್ಟಿಸಿದರು. ಪತ್ನಿ ಸವಿ ನೆನಪಿಗಾಗಿ ಭಾರ್ಗಾವತಿ ಕೆರೆ, ಸೋಮೇಶ್ವರಸ್ವಾಮಿ ದೇವಾಲಯ ಕಟ್ಟಿಸಿದರು.

ಮುಮ್ಮಡಿ ಕೆಂಪೇಗೌಡ: (1658-1678) ಕೆಂಪಮ್ಮ ಮತ್ತು ಇಮ್ಮಡಿ ಕೆಂಪೇಗೌಡರ ಪುತ್ರ. ಶಿವಭಕ್ತ, ಜನಪರ ಚಿಂತನೆಗೆ ಹೆಸರಾಗಿದ್ದರು. ಮಳೆಕೆಂಪರಾಯನೆಂಬ ಬಿರುದು ಗಳಿಸಿದ್ದರು. ತಾಯಿ ಕೆಂಪಮ್ಮ ಅವರ ಸವಿನೆನಪಿಗಾಗಿ ಕೆಂಪಸಾಗರದ ಕೆರೆ ಕಟ್ಟಿಸಿದರು.

ದೊಡ್ಡವೀರಪ್ಪಗೌಡ: (1678-1697) ಕೊರಟಗೆರೆ, ಮಧುಗಿರಿ, ಬಿಜ್ಜಾವರ, ಎಲಿಯೂರುಗಳನ್ನು ಆಳಿದರು.

ಕೆಂಪವೀರಪ್ಪಗೌಡ: (1697-1728) ದೊಡ್ಡವೀರಪ್ಪಗೌಡ-ಮುದ್ದುವೀರಾಂಬೆಯ ಪುತ್ರ. ಹುತ್ರಿದುರ್ಗಕ್ಕೆ ದೇವಗಿರಿ ಎಂದು ಕರೆದು ಬೆಟ್ಟಡ ಮೇಲೆ ಶಂಕರಲಿಂಗೇಶ್ವರ ದೇವಾಲಯ ಕಟ್ಟಿಸಿದರು. ಬ್ರಾಹ್ಮಣರಿಗೆ ಗ್ರಾಮಗಳನ್ನು ದತ್ತು ನೀಡಿ ಅಗ್ರಹಾರ ಎಂದು ಕರೆದರು. ದಳವಾಯಿ ದೇವರಾಜಯ್ಯ ಸೇನೆ ಸಾವನದುರ್ಗವನ್ನು ವಶಪಡಿಸಿಕೊಂಡಿತು. ಹುತ್ರಿದುರ್ಗದಲ್ಲಿ ಸ್ವತಂತ್ರ ಭೈರವ ನಾಣ್ಯಗಳನ್ನು ಟಂಕಿಸಿದ ನೆಪದ ಮೇಲೆ ವಿಜಯನಗರದ ಅರಸರಿಗೆ ಗೌಡರ ಮೇಲೆ ದೂರು ಸಲ್ಲಿಸಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕೈದಿ ಮಾಡಲಾಯಿತು.

ಕೆಂಪೇಗೌಡರ ವಂಶಜರು ಜನಪರ ಆಳ್ವಿಕೆ ಮಾಡಿ ಸರ್ವಸಮುದಾಯದವರ ಏಳಿಗೆಗೆ ದುಡಿದ ಮಹಾನುಭಾವರು. ಶಿವಗಂಗೆ, ಮಾಗಡಿ, ಸಾವನದುರ್ಗ, ಕೆಂಪಸಾಗರ, ಹುತ್ರಿದುರ್ಗ, ಹುಲಿಯೂರು ದುರ್ಗ,ಭೈರವನದುರ್ಗ, ಹುಲಿಕಲ್, ಕೆಂಪಾಪುರಗಳಲ್ಲಿ ಕೆಂಪೇಗೌಡರ ವಂಶಜರ ಸ್ಮಾರಕಗಳು ರಕ್ಷಣೆಯಿಲ್ಲದೆ ವಿನಾಶದತ್ತ ಸಾಗಿವೆ ಎನ್ನುತ್ತಾರೆ ಇತಿಹಾಸ ತಜ್ಞರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು