ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಬಿಡಿ: ಶಿಕ್ಷಕರಿಗೆ ಶಾಸಕ ಎ. ಮಂಜುನಾಥ್‌ ಆಕ್ರೋಶ

ಬೋಧಕರಿಂದ ರಿಯಲ್‌ ಎಸ್ಟೇಟ್‌ ದಂಧೆ:
Last Updated 1 ಆಗಸ್ಟ್ 2021, 3:42 IST
ಅಕ್ಷರ ಗಾತ್ರ

ಮಾಗಡಿ: ‘ಶಿಕ್ಷಕರು ಗುಂಪು ರಚಿಸಿಕೊಂಡು ರಾಜಕಾರಣಿಗಳನ್ನು ಬಳಸಿಕೊಳ್ಳುವುದು ಬೇಡ. ಮಕ್ಕಳ ಶಿಕ್ಷಣದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು’ ಎಂದು ಶಾಸಕ ಎ. ಮಂಜುನಾಥ್ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಶಾಖೆಯಿಂದ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ತವ್ಯ ಮರೆತು ಶಾಲೆಗೆ ಚಕ್ಕರ್ ಹೊಡೆದು, ರಿಯಲ್ ಎಸ್ಟೇಟ್ ಮತ್ತು ಸ್ವಂತ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕೆಲವು ಶಿಕ್ಷಕರಿಗೆ ಬುದ್ಧಿವಾದ ಹೇಳಿದ ಬಿಇಒ ಎಸ್. ಸಿದ್ದೇಶ್ವರ್ ವಿರುದ್ಧ ಅರ್ಜಿ ಬರೆದು ರಾಜಕಾರಣಿಗಳಿಗೆ ತಪ್ಪು ಮಾಹಿತಿ ನೀಡಿ ವರ್ಗಾವಣೆ ಮಾಡಿಸಿರುವುದು ನೋವು ತಂದಿದೆ ಎಂದು ವಿಷಾದಿಸಿದರು.

‘ನಾನು ಅಂಡರ್ ಕರೆಂಟ್ ಇದ್ದಂತೆ. ಎಲ್ಲಿ, ಯಾವಾಗ ಬ್ಲಾಸ್ಟ್ ಆಗುತ್ತೆ ಅನ್ನೋದು ಗೊತ್ತಾಗುವುದಿಲ್ಲ. ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಕಲಿಸುವ ಶಿಕ್ಷಕರನ್ನು ನಾನೆಂದೂ ದೂರುವುದಿಲ್ಲ, ಗೌರವಿಸುತ್ತೇನೆ. ನಾಲ್ಕೈದು ಶಿಕ್ಷಕರು ಮೂಗರ್ಜಿ ವೀರರಾಗಿದ್ದಾರೆ. ಶಾಸಕರನ್ನು ಒಳ್ಳೆಯತನಕ್ಕೆ ಬಳಸಿಕೊಳ್ಳಿ, ಕಿತಾಪತಿ ಮಾಡಬೇಡಿ’ ಎಂದು ಎಚ್ಚರಿಸಿದರು.

‘ನಾನು ಹೊಡಿಬಡಿ ಸಂಸ್ಕೃತಿಯಿಂದ ಬಂದಿಲ್ಲ. ಕೆಂಪೇಗೌಡ ನಾಡಿನ ಜನರ ಸೇವೆ ಮಾಡುವುದೇ ಸೌಭಾಗ್ಯವೆಂಬ ಹಂಬಲ ನನ್ನದು. ತಾಲ್ಲೂಕಿನಲ್ಲಿ ರೈತಾಪಿ ವರ್ಗದವರಿಗೆ ನೀರಾವರಿಗೆ ಶಾಶ್ವತ ಅನುಕೂಲ, ರಸ್ತೆ ನಿರ್ಮಾಣ, ವೈ.ಜಿ. ಗುಡ್ಡ, ಮಂಚನಬೆಲೆ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ವರ್ಗಾವಣೆಗೊಂಡ ಬಿಇಒ ಎಸ್. ಸಿದ್ದೇಶ್ವರ ಮಾತನಾಡಿ, ‘ಮುಗ್ಧ ಮಕ್ಕಳಿಗೆ ಪಾಠ ಮಾಡದೆ ಅನ್ಯಾಯ ಮಾಡುವುದು ಪಾಪದ ಕೆಲಸ. ನಾಡಪ್ರಭು ಕೆಂಪೇಗೌಡ, ಡಾ.ಶಿವಕುಮಾರ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ ಅವರಂತಹ ಪುಣ್ಯಪುರುಷರು ನನಗೆ ಕೆಲಸ ಮಾಡಲು ಪ್ರೇರಣೆಯಾಗಿದ್ದಾರೆ’ ಎಂದರು.

‘ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಕರಿದ್ದಾರೆ. ನಾಲ್ಕಾರು ಜನ ಶಾಲೆಗೆ ತೆರಳದೆ ಅಲೆಯುವುದು, ರಾಜಕಾರಣಿಗಳ ಹಿಂದೆ ಸುತ್ತುವುದನ್ನು ಮಾಡಿಕೊಂಡಿದ್ದರು. ಅವರಿಗೆ ಬುದ್ಧಿವಾದ ಹೇಳಿ ಶಾಲೆಗೆ ತೆರಳುವಂತೆ ಸೂಚಿಸಿದ್ದೇ ನನ್ನ ಅಪರಾಧವಾಯಿತು’ ಎಂದರು.

ಬಿಇಒ ಕಚೇರಿಯಲ್ಲಿ 15 ವರ್ಷಗಳಿಂದಲೂ ವಾಸ್ತವ್ಯ ಹೂಡಿರುವ ನಾಲ್ವರು ಗುಮಾಸ್ತರು ಶಿಕ್ಷಕರನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಸೂಚಿಸಿದ್ದೆ. ನನ್ನ ವಿರುದ್ಧ ಅರ್ಜಿ ಬರೆದು ರಾಜಕೀಯ ಮಾಡಿ ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ತಾಲ್ಲೂಕು ಸಂಘದ ಅಧ್ಯಕ್ಷ ಶಿವನಸಂದ್ರ ಶಿವರಾಮಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ. ಕೆಂಪೇಗೌಡ, ಕೆ.ಎಚ್. ಲೋಕೇಶ್, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಲಕ್ಷ್ಮೀಸಿದ್ದೇಶ್ವರ,
ಪ್ರೊ.ಮಂಗಳಗೌರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT