ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ ಮತ್ತೆ ಲಾಕ್‌ಡೌನ್: ಮಾರುಕಟ್ಟೆಯೂ ಸ್ಥಗಿತ

ಸಿಬ್ಬಂದಿಗೆ ಸೋಂಕು: ಸೋಮವಾರದವರೆಗೂ ಜಿಲ್ಲಾ ಸಂಕೀರ್ಣದ ಕಚೇರಿಗಳಿಗೆ ಬೀಗ
Last Updated 3 ಜುಲೈ 2020, 16:55 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಜಿಲ್ಲೆಯಾದ್ಯಂತ ಶನಿವಾರ ರಾತ್ರಿ 8ರಿಂದಲೇ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಭಾನುವಾರ ಜಿಲ್ಲೆ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ರೇಷ್ಮೆಗೂಡು ಮಾರುಕಟ್ಟೆ, ಎಪಿಎಂಸಿ ಸಹಿತ ಪ್ರತಿಯೊಂದು ಸೇವೆ ಹಾಗೂ ವಹಿವಾಟು ಬಂದ್ ಆಗಲಿದೆ. ಬಸ್ ಸಂಚಾರ ಸಹ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ತುರ್ತು ಹಾಗೂ ಆರೋಗ್ಯ ಸೇವೆಗಳಿಗೆ ಮಾತ್ರ ಜನರು ಮನೆಯಿಂದ ಹೊರಬರುವಂತೆ ಪೊಲೀಸರು ಮನವಿ ಮಾಡಿದ್ದು, ಸುಮ್ಮನೆ ಓಡಾಡಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಬ್ಬರಿಗೆ ಸೋಂಕು: ಜಿಲ್ಲೆಯಲ್ಲಿ ಶನಿವಾರ ಇಬ್ಬರಿಗೆ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ರಾಮನಗರದ ವ್ಯಕ್ತಿಯೊಬ್ಬರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದ ವೇಳೆ ಸೋಂಕು ದೃಢಪಟ್ಟಿದೆ. ಮಾಗಡಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.

ಪ್ರವೇಶ ನಿರ್ಬಂಧ: ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಇರುವ ಕೆಜಿಐಡಿ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್‌-19 ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನ ಕಾಲ ಕಟ್ಟಡದಲ್ಲಿನ ಕೆಲ ಇಲಾಖೆ ಕಚೇರಿಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಕಟ್ಟಡದ ಎರಡನೇ ಹಾಗೂ ಮೂರನೇ ಅಂತಸ್ತಿನಲ್ಲಿ ಇರುವ ಇಲಾಖೆಗಳ ಕಚೇರಿಗೆ ಬೀಗ ಬಿದ್ದಿದೆ. ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗೆ ರಜೆ ನೀಡಲಾಗಿದೆ. ಸೋಂಕು ಪತ್ತೆಯಾದ ಜಾಗವನ್ನು ಸ್ಯಾನಿಟೈಸ್ ಮಾಡಲಾಗಿದೆ. ಇದೇ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕಚೇರಿಯೂ ಇದೆ. ತುರ್ತು ಅಗತ್ಯ ಇದ್ದವರಿಗೆ ಮಾತ್ರ ಅಲ್ಲಿಗೆ ಪ್ರವೇಶ ನೀಡಲಾಗುತ್ತಿದೆ. ಶನಿವಾರ ಹಾಗೂ ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ ಪರಿಸ್ಥಿತಿ ನಿಯಂತ್ರಿಸಲು ಅನುಕೂಲ ಆಗಲಿದೆ. ಇನ್ನೂ ಸೋಂಕಿತ ವ್ಯಕ್ತಿ ಇದ್ದ ಮಾರುತಿ ನಗರ ಬಡಾವಣೆಯನ್ನೂ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT