ಗುರುವಾರ , ಜುಲೈ 29, 2021
27 °C
ವಾಣಿಜ್ಯ ಚಟುವಟಿಕೆಗೂ ಅವಕಾಶ

ಲಾಕ್‌ಡೌನ್ ಸಡಿಲ: ಜಿಲ್ಲೆಯ ಜನತೆ ನಿರಾಳ, ಜಿಲ್ಲೆಯಾದ್ಯಂತ ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಅನ್‌ಲಾಕ್‌ ಪ್ರಕ್ರಿಯೆ ಇನ್ನಷ್ಟು ಸಡಿಲವಾಗಿದ್ದು, ನಗರ ಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಬರೋಬ್ಬರಿ ಎರಡು ತಿಂಗಳ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬೆಳಿಗ್ಗೆಯಿಂದಲೇ ಡಿಪೊನಿಂದ ಬಸ್‌ ನಿಲ್ದಾಣದತ್ತ ಬಸ್‌ಗಳು ಧಾವಿಸಿದವು. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಾದ ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣಕ್ಕೆ ಬಸ್‌ಗಳು ಸಂಚಾರ ಕೈಗೊಂಡವು. ನೆರೆಯ ಜಿಲ್ಲೆಗಳಾದ ಬೆಂಗಳೂರು, ಮಂಡ್ಯ ಭಾಗಕ್ಕೂ ಬಸ್‌ ಸಂಚಾರ ಆರಂಭಿಸಲಾಯಿತು. ಗ್ರಾಮೀಣ ಪ್ರದೇಶಗಳಿಗೆ ಮೊದಲ ದಿನ ಹೆಚ್ಚಿನ ಸೇವೆ ಇರಲಿಲ್ಲ.

ಪ್ರತಿ ಬಸ್‌ನಲ್ಲಿ ಶೇ 50ರ ಆಸನಗಳ ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ, ಪ್ರತಿ ವಾಹನದಲ್ಲೂ ಗರಿಷ್ಠ 30 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಯಿತು. ಆದರೆ, ಎಲ್ಲಿಯೂ ಪ್ರಯಾಣಿಕರ ತಪಾಸಣೆ ನಡೆಯಲಿಲ್ಲ.

ರಾಮನಗರದಿಂದ ಬೆಂಗಳೂರಿಗೆ ಉದ್ಯೋಗಕ್ಕೆಂದು ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಈಗಾಗಲೇ, ಬೆಂಗಳೂರಿನಲ್ಲಿ ಕಚೇರಿಗಳು ತೆರೆದಿದ್ದು, ಇಲ್ಲಿಂದ ತೆರಳಲು ಹೆಚ್ಚಿನವರು ರೈಲು ಸೇವೆ ಬಳಸುತ್ತಿದ್ದರು. ಇದರಿಂದಾಗಿ ಅಲ್ಲಿಯೂ ಜನಸಂದಣಿ ಹೆಚ್ಚುತ್ತಿತ್ತು. ಬಸ್‌ ಸಂಚಾರದಿಂದಾಗಿ ರೈಲುಗಳ ಮೇಲಿನ ಒತ್ತಡ ತಗ್ಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಬೆಳಿಗ್ಗೆ ಐಜೂರು ವೃತ್ತದಲ್ಲಿ ವಾಹನ ಸಂದಣಿ ಉಂಟಾಗಿತ್ತು.

ಇತರೆ ಚಟುವಟಿಕೆಗೂ ಅವಕಾಶ: ಸೋಮವಾರದಿಂದ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರವರೆಗೂ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖರೀದಿಗೆ ಹೆಚ್ಚಿನ ಸಮಯಾವಕಾಶ ಇದ್ದದ್ದರಿಂದ ಧಾವಂತ ಇರಲಿಲ್ಲ. ತನಕ ಬಾಗಿಲು ಹಾಕಿದ್ದ ಆಭರಣ ಮಳಿಗೆಗಳು, ಜಿಮ್, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಳಿಗೆಗಳು ಸೇರಿದಂತೆ ವಿವಿಧ ಅಂಗಡಿಗಳು ಸೇವೆ ನೀಡಿದವು. ಇದರೊಟ್ಟಿಗೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು.

ಚಿನ್ನದಂಗಡಿ, ಬಟ್ಟೆಯಂಗಡಿ ಮಳಿಗೆಗಳಲ್ಲಿ ಗ್ರಾಹಕರು ಹೆಚ್ಚಾಗಿ ಕಂಡುಬಂದರು. ಸದ್ಯ ಶುಭ ಸಮಾರಂಭಗಳು ನಡೆದಿವೆ. ಅಲ್ಲದೇ, ಆಷಾಢ ಮಾಸ ಪ್ರಾರಂಭಕ್ಕೆ ಇನ್ನೆರಡು ವಾರ ಮಾತ್ರವೇ ಬಾಕಿ ಇದೆ. ಹೀಗಾಗಿ ಜನರು ಖರೀದಿಗೆ ಉತ್ಸಾಹ ತೋರಿದರು. ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಹೆಚ್ಚಿನ ಕಚೇರಿಗಳಲ್ಲಿ ಜನಸಂದಣಿ ಕಂಡುಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು