ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಯಾರಾಗ್ತಾರೆ ಬೆಂಗಳೂರು ಗ್ರಾಮಾಂತರ ಪ್ರತಿನಿಧಿ

ಕುತೂಹಲಕ್ಕೆ ಇಂದು ತೆರೆ: ಮುಂದುವರಿಯುವುದೇ ಸುರೇಶ್ ಜಯದ ಓಟ | ಬ್ರೇಕ್ ಹಾಕುವರೇ ಡಾ. ಮಂಜುನಾಥ್?
Published 4 ಜೂನ್ 2024, 3:46 IST
Last Updated 4 ಜೂನ್ 2024, 3:46 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವಿನ ಸರದಾರ ಯಾರಾಗಲಿದ್ದಾರೆ ಎಂಬುದಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶದ ಗಮನ ಸಹ ಸೆಳೆದಿರುವ ಕರ್ನಾಟಕದ ಹೈ ವೋಲ್ಟೇಜ್ ಕಣವಾದ ಗ್ರಾಮಾಂತರದಲ್ಲಿ ಮತದಾರ ಯಾರಿಗೆ ಗೆಲುವಿನ ಉಡುಗೊರೆ ಕೊಡಲಿದ್ದಾನೆ ಎಂಬುದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಡಿ.ಕೆ. ಸುರೇಶ್ ಮತ್ತು ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಸಿ.ಎನ್. ಮಂಜುನಾಥ್ ಇಬ್ಬರೂ ರಾಜಕೀಯ ಹಿನ್ನೆಲೆಯ ಕುಟುಂಬದವರೇ. ಸುರೇಶ್ ಅವರ ಸಹೋದರ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದು, ಪ್ರಭಾವಿ ನಾಯಕ ಕೂಡ.

ಡಾ. ಮಂಜುನಾಥ್ ಅವರು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಅಳಿಯ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಬಾವ. ಮಂಜುನಾಥ್ ಅವರಿಗೆ ರಾಜಕೀಯ ಹೊಸತಾದರೂ, ಅವರು ಅಳಿಯನಾಗಿರುವ ಕುಟುಂಬದ ರಾಜಕೀಯ ಹಿನ್ನೆಲೆ ದೊಡ್ಡದು.

ಕುಟುಂಬಗಳ ಸಮರ: ಡಿಕೆಶಿ ಮತ್ತು ಎಚ್‌ಡಿಡಿ ಎರಡೂ ಕುಟುಂಬಗಳ ರಾಜಕೀಯ ಸಮರಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ದೇವೇಗೌಡರ ಕುಟುಂಬದ ಹಾಸನ ಹೊರತುಪಡಿಸಿದ ರಾಜಕೀಯ ನೆಲೆಯಾಗಿ ಹಿಂದಿನ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರವನ್ನು ಆಯ್ಕೆ ಮಾಡಿಕೊಂಡಾಗಿನಿಂದ ಡಿಕೆಶಿ ಅವರಿಗೆ ಪ್ರಬಲ ಎದುರಾಳಿಯಾಗಿದ್ದಾರೆ.

ಅಂದಿನಿಂದ ಇದುವರೆಗೆ ನಡೆದುಕೊಂಡು ಬಂದಿರುವ ಚುನಾವಣೆಗಳಲ್ಲಿ ಎರಡೂ ಕುಟುಂಬಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಡುತ್ತಲೇ, ರಾಜಕೀಯ ಅಸ್ತಿತ್ವ ಮತ್ತು ನೆಲೆ ವಿಸ್ತರಿಸುತ್ತಾ ಬಂದಿವೆ. ಈ ಹೋರಾಟದಲ್ಲಿ ಎರಡೂ ಕುಟುಂಬಗಳು ಸಹ ಸೋಲು–ಗೆಲುವು ಕಂಡಿವೆ. ಅದರ ಮುಂದುವರಿದ ಭಾಗವಾಗಿ ಈ ಸಲದ ಚುನಾವಣೆಯ ಫಲಿತಾಂಶ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಟಿಕೆಟ್ ಘೋಷಣೆಗೂ ಮುಂಚೆಯೇ ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂಬುದು ನಿಶ್ಚಿತವಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದಾದ ಬಿಜೆಪಿ–ಜೆಡಿಎಸ್‌ ಅಳೆದು ತೂಗಿ ಗೌಡರ ಕುಟುಂಬದ ಅಳಿಯ ಡಾ. ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿವೆ. ಗೌಡರ ಕುಟುಂಬವಷ್ಟೇ ಅಲ್ಲದೆ, ಬಿಜೆಪಿಯೂ ಕ್ಷೇತ್ರದಲ್ಲಿ ಮಂಜುನಾಥ್ ಗೆಲುವಿಗೆ ಪಣ ತೊಟ್ಟಿ ಶ್ರಮ ಹಾಕಿದೆ. ಇದಕ್ಕೆ ಕೇಂದ್ರ ನಾಯಕರ ಸೂಚನೆಯೂ ಕಾರಣ.

ಬದಲಾದ ಲೆಕ್ಕಾಚಾರ: ಮೊದಲು ಎದುರಿಸಿದ ಉಪ ಚುನಾವಣೆಯಿಂದ ಆರಂಭಗೊಂಡು, ಇದುವರೆಗೆ ಎದುರಿಸುವ ಮೂರು ಚುನಾವಣೆಗಳಲ್ಲೂ ಸುರೇಶ್ ಅವರಿಗೆ ಗೆಲುವಿನ ಖಾತ್ರಿ ಬಹುತೇಕ ಇರುತ್ತಿತ್ತು. ಎಣಿಕೆ ಸಂದರ್ಭದಲ್ಲಿ ಲೀಡ್‌ ಕುರಿತ ಲೆಕ್ಕಾಚಾರಗಳ ಚರ್ಚೆ ನಡೆಯುತ್ತಿತ್ತೇ ವಿನಾ, ಸೋಲಿನ ಮಾತು ಯಾರ ಬಾಯಲ್ಲೂ ಸುಳಿಯುತ್ತಿರಲಿಲ್ಲ.

‘ಈ ಸಲ ನಡೆದ ಚುನಾವಣೆಯ ವರಸೆ ಬದಲಾಗಿದೆ. ಡಾ. ಮಂಜುನಾಥ್ ಹೊರತುಪಡಿಸಿ ದೇವೇಗೌಡರ ಕುಟುಂಬದ ಬೇರೆ ಯಾರಾದರೂ ಮತ್ತು ಬಿಜೆಪಿಯಿಂದ ಬೇರೆಯವರು ನಿಂತಿದ್ದರೂ ಸುರೇಶ್ ಗೆಲುವು ಗ್ಯಾರಂಟಿಯಾಗಿರುತ್ತಿತ್ತು. ಆದರೆ, ಸುರೇಶ್ ಅವರನ್ನು ಸೋಲಿಸುವ ಮೂಲಕ ಡಿಕೆಶಿ ಅವರ ರಾಜಕೀಯ ಶಕ್ತಿ ಕುಂದಿಸಲು ಬಿಜೆಪಿ–ಜೆಡಿಎಸ್‌ ತಂತ್ರ ಹೆಣೆದಿವೆ. ಹಾಗಾಗಿ, ಕ್ಷೇತ್ರದಲ್ಲಿ ಇವರೇ ಗೆಲ್ಲುತ್ತಾರೆ ಎಂದು ಹೇಳಲಾಗದಂತಹ ಪೈಪೋಟಿ ನಡೆದಿದೆ’ ಎನ್ನುತ್ತಾರೆ ರಾಮನಗರದ ಹಿರಿಯ ರಾಜಕಾರಣಿಯೊಬ್ಬರು.

ವಿಶ್ವಾಸದಲ್ಲಿ ಅಭ್ಯರ್ಥಿಗಳು: ಬಿಜೆಪಿ–ಜೆಡಿಎಸ್‌ ಮತ ಬ್ಯಾಂಕ್‌ ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿನ ತಮ್ಮ ಸೇವೆಯ ಜನಪ್ರಿಯತೆಯನ್ನು ಮಂಜುನಾಥ್ ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿ ತಳಮಟ್ಟದವರೆಗೆ ತಾವು ಹೊಂದಿರುವ ಕಾರ್ಯಕರ್ತರ ಪಡೆ, ರಾಜ್ಯದಲ್ಲಿ ತಮ್ಮದೇ ಸರ್ಕಾರವಿರುವುದು, ಗ್ಯಾರಂಟಿ ಯೋಜನೆಗಳು ಹಾಗೂ ಅಣ್ಣ ಶಿವಕುಮಾರ್ ಪ್ರಭಾವ ತಮ್ಮನ್ನು ಗೆಲುವಿನ ದಡ ಸೇರಿಸಲಿದೆ ಎಂಬ ವಿಶ್ವಾಸದಲ್ಲಿ ಸುರೇಶ್ ಇದ್ದಾರೆ.

ಈ ಚುನಾವಣೆಯಲ್ಲಿ ಗೆಲುವಿನ ಲೀಡ್ ಲೆಕ್ಕಾಚಾರ ನಡೆಯುತ್ತಿಲ್ಲ. ಬದಲಿಗೆ, ಗೆದ್ದರೆ ಸಾಕೆಂಬ ಮಟ್ಟಕ್ಕೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಪ್ರಾರ್ಥಿಸುತ್ತಿದ್ದಾರೆ. ಯಾರೇ ಗೆದ್ದರೂ ಅವರ ಲೀಡ್ ಲಕ್ಷ ದಾಟದು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದ್ದು, ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಡಾ. ಸಿ.ಎನ್. ಮಂಜುನಾಥ್
ಡಾ. ಸಿ.ಎನ್. ಮಂಜುನಾಥ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರಕ್ಷೇತ್ರ;ಮತದಾರರು;ಹಕ್ಕು ಚಲಾಯಿಸಿದವರು;ಶೇಕಡವಾರುಬೆಂಗಳೂರು ದಕ್ಷಿಣ;7,50,785;4,21,071;56.08ರಾಜರಾಜೇಶ್ವರಿನಗರ;5,04,617;2,82,885;56.06ಆನೇಕಲ್;4,23,844;2,57,212;60.69ಮಾಗಡಿ;2,36,483;20,09,14;84.96ರಾಮನಗರ;2,21,098;1,86,966;84.56ಕನಕಪುರ;2,31,262;1,96,037;84.77ಚನ್ನಪಟ್ಟಣ;2,31,263;1,95,670;84.61ಕುಣಿಗಲ್;2,03,228;1,73,275;85.26ಒಟ್ಟು;28,02,580;19,14,030;68.30

ಸೋಲು–ಗೆಲುವಿನ ಬೆಟ್ಟಿಂಗ್ ಭರಾಟೆ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರತಿ ಸಲ ಸುರೇಶ್ ಅವರು ತೆಗೆದುಕೊಳ್ಳುವ ಮತಗಳ ಲೀಡ್‌ ವಿಷಯದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ಈ ಬಾರಿ ಗೆಲುವಿನ ಮಟ್ಟಕ್ಕೆ ಬಂದು ನಿಂತಿದೆ. ಕಾಂಗ್ರೆಸ್–ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಬೆಟ್ಟಿಂಗ್‌ ಕಟ್ಟುವವರು ಲೀಡ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ನಾಯಕರ ಸೋಲು–ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಸಾವಿರದಿಂದಿಡಿದು ಕೋಟಿವರೆಗೆ ಕುರಿ–ಮೇಕೆಯಿಂದಿಡಿದು ಜಮೀನು–ನಿವೇಶನದವರೆಗೆ ಬೆಟ್ಟಿಂಗ್ ನಡೆಯುತ್ತಿದೆ. ‘ಬಿಜೆಪಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲವರು ತಮ್ಮ ಅಭ್ಯರ್ಥಿ ವಿರುದ್ಧವೇ ಬೆಟ್ಟಿಂಗ್ ಕಟ್ಟಿದ್ದಾರೆ. ಬೆಟ್ಟಿಂಗ್ ಕಟ್ಟುವವರಿಗೆ ಹಣ ಗಳಿಕೆ ಮುಖ್ಯವೇ ಹೊರತು ಪಕ್ಷವಲ್ಲ. ಕೆಲವರು ತಮ್ಮ ನಾಯಕರನ್ನು ಮೆಚ್ಚಿಸಲು ನಾವೂ ನಿಮ್ಮ ಗೆಲುವಿಗಾಗಿ ಬೆಟ್ಟಿಂಗ್ ಹಾಕಿದ್ದೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಚುನಾವಣೆ ಎಂದರೆ ಬೆಟ್ಟಿಂಗ್–ಬಾಜಿದಾರರಿಗೂ ಸುಗ್ಗಿ ಎಂಬಂತಾಗಿದೆ’ ಎಂದು ರಾಜಕಾರಣಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT