ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟ, ಸಂಸ್ಕರಣೆಯಿಂದ ರೈತರಿಗೆ ಲಾಭ’

ಮಾವು ಖರೀದಿದಾರರು ಮತ್ತು ಉತ್ಪಾದಕರ ಸಂಪರ್ಕ ಸಮಾವೇಶ
Last Updated 4 ಏಪ್ರಿಲ್ 2019, 13:00 IST
ಅಕ್ಷರ ಗಾತ್ರ

ರಾಮನಗರ: ರೈತರು ಮಾವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯವರೆಗೂ ಕೊಂಡೊಯ್ದಾಗ ಮಾತ್ರ ಉತ್ತಮ ಬೆಲೆ ಸಿಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಂ.ವಿ. ವೆಂಕಟೇಶ್‌ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಆಯೋಜಿಸಿದ್ದ ಮಾವು ಖರೀದಿದಾರರು ಮತ್ತು ಉತ್ಪಾದಕರ ಸಂಪರ್ಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪ್ರಸ್ತುತ 1.7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಈ ವರ್ಷ 8 ಲಕ್ಷ ಟನ್‌ನಷ್ಟು ಉತ್ಪನ್ನ ಸಿಗುವ ನಿರೀಕ್ಷೆ ಇದೆ. ಕಳೆದ ವರ್ಷ ನಿಫಾ ವೈರಸ್‌ ಭೀತಿಯೂ ಸೇರಿದಂತೆ ವಿವಿಧ ಕಾರಣಗಳಿಂದ ಬೆಲೆ ಮತ್ತು ಬೇಡಿಕೆ ಕುಸಿದು ರೈತರು ನಷ್ಟ ಅನುಭವಿಸಿದ್ದರು. ನಮ್ಮಲ್ಲಿ ಉತ್ತಮ ಮಾರುಕಟ್ಟೆ ಸಂಪರ್ಕ ಇಲ್ಲದಿರುವುದೂ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ರೈತರು ಮತ್ತು ಖರೀದಿದಾರರ ನಡುವೆ ಸಂಪರ್ಕ ಬೆಳೆಸಲು ಈ ಸಮಾವೇಶ ಆಯೋಜಿಸಲಾಗಿದೆ’ ಎಂದರು.

‘ಮಾವನ್ನು ರಫ್ತು ಮಾಡುವುದರಿಂದ ಉತ್ತಮ ಬೆಲೆ ಸಿಗುತ್ತದೆ. ಆದರೆ ರೈತರೇ ಈ ಕೆಲಸ ಮಾಡುವುದು ಕಷ್ಟ. ಹೀಗಾಗಿ ಅವರಿಗೆ ಖರೀದಿದಾರರೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ಇಬ್ಬರಿಗೂ ಅನುಕೂಲ ಆಗಲಿದೆ. ಅಪೆಡಾ, ಕೆಪೆಕ್‌ ಮೊದಲಾದ ಸಂಸ್ಥೆಗಳ ಮೂಲಕ ರೈತ ಪರ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.

‘ಇಸ್ರೇಲ್‌ನಂತಹ ಪುಟ್ಟ ದೇಶದ ವೃತ್ತಿಪರ ಕೃಷಿಯು ನಮಗೆ ಮಾದರಿ ಆಗಬೇಕು. ಅಂತಹ ಸ್ಥಿತಿ ಬರಬೇಕಾದರೆ ರೈತರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು. ‘ಚನ್ನಪಟ್ಟಣದ ಕಣ್ವ ಜಲಾಶಯದ ಬಳಿ ಮಾವು ಸಂಸ್ಕರಣಾ ಘಟಕಕ್ಕೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಚುನಾವಣೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌ ಮಾತನಾಡಿ ‘ರಾಜ್ಯದಲ್ಲಿ ಆ್ಯಪ್‌ ಮತ್ತು ವೆಬ್ ಆಧಾರಿತ ಮಾರುಕಟ್ಟೆ ನಿರ್ಮಾಣದ ಅಗತ್ಯವಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ಲಾಭ ಪೂರ್ತಿ ರೈತರ ಕೈ ಸೇರಲಿದೆ. ಮಾರುಕಟ್ಟೆಗಳ ನಡುವೆ ಸಂಪರ್ಕ ಕಲ್ಪಿಸಿ ಆನ್‌ಲೈನ್‌ ಮೂಲಕ ವಹಿವಾಟು ನಡೆದಲ್ಲಿ ರೈತರಿಗೆ ಉತ್ತಮ ಬೆಲೆ ಸಿಗಲಿದೆ’ ಎಂದರು.

ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಹಿತ್ತಲಮನಿ ಉಪನ್ಯಾಸ ನೀಡಿ ‘ರಾಜ್ಯದಲ್ಲಿ ಈ ಬಾರಿ ಏರು ಹಂಗಾಮು ಇದ್ದು, ಶೇ 85ರಷ್ಟು ಗಿಡಗಳು ಹೂಬಿಟ್ಟಿವೆ. ಆದರೆ ತೇವಾಂಶದ ಕೊರತೆಯಿಂದಾಗಿ ಕಾಯಿ ಉದುರುತ್ತಿದ್ದು, ಅವುಗಳ ಗಾತ್ರ ಮತ್ತು ಗುಣಮಟ್ಟ ಕಡಿಮೆ ಆಗಲಿದೆ. ರೈತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು, ವಿವಿಧ ಇಲಾಖೆಗಳ ಅಧಿಕಾರಿಗಳಾದ ನಾಗೇಂದ್ರ ಪ್ರಸಾದ್‌, ಉಮೇಶ್, ವಿಶ್ವನಾಥ್‌ ಇದ್ದರು. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳ ರೈತರು ಹಾಗೂ ಖರೀದಿದಾರರು ಪಾಲ್ಗೊಂಡಿದ್ದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ ಸ್ವಾಗತಿಸಿದರು. ಶಿವಸ್ವಾಮಿ ನಿರೂಪಿಸಿದರು.

ಖರೀದಿದಾರರೊಂದಿಗೆ ಸಂವಾದ
ಸಮಾವೇಶದಲ್ಲಿ 25ಕ್ಕೂ ಹೆಚ್ಚು ರಫ್ತುದಾರರು ಹಾಗೂ 15ಕ್ಕೂ ಹೆಚ್ಚು ಸಗಟು ಖರೀದಿದಾರರು ಪಾಲ್ಗೊಂಡಿದ್ದು, ಅವರನ್ನು ರೈತರೊಂದಿಗೆ ಸಂಪರ್ಕ ಬೆಸೆಯುವ ಪ್ರಯತ್ನ ನಡೆಯಿತು. ಅದಕ್ಕಾಗಿ ಸಭಾಂಗಣದ ಹೊರಗೆ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತರ ಉದ್ದಿಮೆದಾರರು ರೈತರೊಂದಿಗೆ ಮಾಹಿತಿ ಹಂಚಿಕೊಂಡರು.

ಉತ್ಪನ್ನ ಪ್ರದರ್ಶನ
ಸಮಾವೇಶದಲ್ಲಿಮಾವು ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭ ತಾಂತ್ರಿಕತೆಯ ಪ್ರದರ್ಶನವೂ ನಡೆಯಿತು. ಮಾವಿನ ಕಾಯಿಯು ಹೀಚು ಹಂತದಲ್ಲಿ ಇರುವಾಗಲೇ ಅದಕ್ಕೆ ಕವರ್ ಕಟ್ಟಿ, ರೋಗಗಳಿಂದ ಕಾಪಾಡುವ ‘ಕಾಸ್ಮೆಟಿಕ್ ಫ್ರೂಟ್‌’ ಎಂಬ ತಂತ್ರಗಾರಿಕೆಯೂ ಗಮನ ಸೆಳೆಯಿತು.

*
ಕೃಷಿ ಉತ್ಪನ್ನಗಳಿಗೆ ಆ್ಯಪ್‌ ಮತ್ತು ವೆಬ್ ಆಧಾರಿತ ಮಾರುಕಟ್ಟೆಗಳ ಅವಶ್ಯಕತೆ ಇದೆ. ಇದು ಜಾರಿಗೆ ಬಂದಲ್ಲಿ ಲಾಭ ಪೂರ್ತಿ ರೈತರ ಕೈ ಸೇರಲಿದೆ.
-ಬಿ.ಪಿ. ವಿಜಯ್,ಹೆಚ್ಚುವರಿ ಜಿಲ್ಲಾಧಿಕಾರಿ

**

ಈ ವರ್ಷ ರಾಜ್ಯದಲ್ಲಿ ವಿವಿಧ ತಳಿಯ ಮಾವಿನ ಉತ್ಪನ್ನ ನಿರೀಕ್ಷೆ
ಬದಾಮಿ– 4 ಲಕ್ಷ ಟನ್‌
ತೋತಾಪುರಿ–2 ಲಕ್ಷ ಟನ್‌
ಬೈಗನ್‌ಪಲ್ಲಿ–50 ಸಾವಿರ ಟನ್‌
ಮಲ್ಲಿಕಾ–50 ಸಾವಿರ ಟನ್‌
ನೀಲಂ–40 ಸಾವಿರ ಟನ್‌
ಸೇಂದೂರ, ರಸಪುರಿ–30 ಸಾವಿರ ಟನ್
ಇತರೆ ತಳಿಯ ಮಾವು–30 ಸಾವಿರ ಟನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT