ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ತ್ಯಾಜ್ಯಕ್ಕೆ ಮರುಬಳಕೆ ಸ್ಪರ್ಶ: ಪಂಚಾಯಿತಿ ಆದಾಯಕ್ಕೂ ದಾರಿ

ಪೌಳಿದೊಡ್ಡಿಯಲ್ಲಿ 'ಎಂಆರ್‌ಎಫ್’ ಘಟಕ ಸ್ಥಾಪನೆ: ತ್ಯಾಜ್ಯ ನಿರ್ವಹಣೆಗೆ ಜಿ.ಪಂ. ಹೊಸ ಹೆಜ್ಜೆ
Published 3 ಜುಲೈ 2023, 5:16 IST
Last Updated 3 ಜುಲೈ 2023, 5:16 IST
ಅಕ್ಷರ ಗಾತ್ರ

ರಾಮನಗರ: ಗ್ರಾಮ ಪಂಚಾಯಿತಿಗಳ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಇಲ್ಲಿನ ಜಿಲ್ಲಾ ಪಂಚಾಯಿತಿಯು, ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕವನ್ನು ಆರಂಭಿಸಿದೆ.

ಪಂಚಾಯಿತಿಗಳ ಒಣ ಕಸವನ್ನು ಇಲ್ಲಿಗೆ ತಂದು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ, ಸಿಮೆಂಟ್ ಕಂಪನಿ ಹಾಗೂ ಮರುಬಳಕೆ ಸಂಸ್ಥೆಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಇದರಿಂದ ಪಂಚಾಯಿತಿಗಳಿಗೂ ಆದಾಯದ ದಾರಿ ತೆರೆದುಕೊಂಡಿದೆ.

₹2.50 ಕೋಟಿ ವೆಚ್ಚ: ‘ಪೌಳಿ ದೊಡ್ಡಿಯಲ್ಲಿ 2 ಎಕರೆ ಪ್ರದೇಶದಲ್ಲಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣ ಮಾಡಲಾಗಿದೆ. ಮಂಗಳ ರಿಸೋರ್ಸ್‌ ಮ್ಯಾನೇಜ್‌ಮೆಂಟ್ ಎಂಬ ಕಂಪನಿ ಘಟಕದ ನಿರ್ವಹಣೆಯ ಹೊಣೆ ಹೊತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಂಗಡಿಸಲಾದ ಕಸವನ್ನು ಮಾರಾಟ ಮಾಡಿ ಮಂಗಳ ಸಂಸ್ಥೆ ಆದಾಯ ಗಳಿಸಲಿದೆ. ಕಸ ಪೂರೈಸುವ ಪಂಚಾಯಿತಿಗಳಿಗೆ ಒಂದು ಕೆ.ಜಿ ಕಸಕ್ಕೆ 10 ಪೈಸೆಯಂತೆ ಹಣ ಪಾವತಿಸಲಿದೆ. ಘಟಕದಿಂದಾಗಿ ಸುಮಾರು 30 ಸ್ಥಳೀಯರಿಗೆ ಕೆಲಸ ಸಿಗಲಿದ್ದು, ಸದ್ಯ 12 ಮಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

10 ಟನ್ ಸಾಮರ್ಥ್ಯ: ‘ಘಟಕವು ನಿತ್ಯ 10 ಟನ್ ಘನತ್ಯಾಜ್ಯವನ್ನು ವಿಂಗಡಣೆ ಮಾಡಿ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಪರಸರಕ್ಕೆ ಹಾನಿಯಾಗದ ರೀತಿಯಲ್ಲಿ, ದೊಡ್ಡ ಯಂತ್ರಗಳ ನೆರವಿನಿಂದ ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತದೆ. ಇದಕ್ಕೆ ಬಳಕೆಯಾಗುವ ಮಾನವ ಸಂಪನ್ಮೂಲವೂ ಅತ್ಯಂತ ಕಡಿಮೆ’ ಎಂದು ತಿಳಿಸಿದರು.

‘ಮೊದಲ ಹಂತವಾಗಿ ಪಂಚಾಯಿತಿ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳ ನೆರವಿನಿಂದ ತ್ಯಾಜ್ಯ ವಿಂಗಡಣೆ ಮಾಡಿ, ಸ್ಥಳೀಯ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಕಳಿಸಲಾಗುತ್ತದೆ. ಅಲ್ಲಿಂದ ಎಂಆರ್‌ಎಫ್‌ಗೆ ಬರುತ್ತದೆ. ಸ್ಥಳೀಯ ಕೇಂದ್ರಗಳಿಂದ ತ್ಯಾಜ್ಯ ತರುವುದಕ್ಕಾಗಿ ದೊಡ್ಡದಾದ ಆಟೊ ಟಿಪ್ಪರ್ ಖರೀದಿಸಲಾಗಿದೆ’ ಎಂದರು.

‘ಘಟಕದಲ್ಲಿ ಕೆಲಸ ಮಾಡುವುದಕ್ಕಾಗಿ ಈಗಾಗಲೇ ಸ್ಥಳೀಯ ಕೆಲ ಕಾರ್ಮಿಕರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ. ಬೇರೆ ಕಡೆ ಆರಂಭವಾಗಿರುವ ಘಟಕಗಳಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಮೇಲ್ವಿಚಾರಕರು ತ್ಯಾಜ್ಯವನ್ನು ಹೇಗೆ ವಿಂಗಡಣೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಮೂರನೇ ಘಟಕ: ಸಾರ್ವಜನಿಕ ಘನ ತ್ಯಾಜ್ಯದ ಸಮರ್ಪಕ ನಿರ್ವಹಣಾ ಉದ್ದೇಶದ ಈ ಎಂಆರ್‌ಎಫ್‌, ರಾಜ್ಯದಲ್ಲಿ ಕಾರ್ಯಾರಂಭಿಸಿರುವ ಮೂರನೇ ಘಟಕವಾಗಿದೆ. ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ರಾಮನಗರ ಹಾಗೂ ಬಳ್ಳಾರಿಯಲ್ಲಿ ಮಾತ್ರ ಎಂಆರ್‌ಎಫ್‌ಗೆ ಅನುಮತಿ ಸಿಕ್ಕಿದೆ.

ಆ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈಗಾಗಲೇ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿವೆ. ರಾಮನಗರ ಕೂಡ ಇದೀಗ ಆ ಸಾಲಿಗೆ ಸೇರಿಕೊಂಡಿದೆ.

ರಾಮನಗರ ಜಿಲ್ಲಾ ಪಂಚಾಯಿತಿಯು ಚನ್ನಪಟ್ಟಣ ತಾಲ್ಲೂಕಿನ ಪೌಳಿದೊಡ್ಡಿಯಲ್ಲಿ ಆರಂಭಿಸಿರುವ ಎಂಆರ್‌ಎಫ್ ಘಟಕ
ರಾಮನಗರ ಜಿಲ್ಲಾ ಪಂಚಾಯಿತಿಯು ಚನ್ನಪಟ್ಟಣ ತಾಲ್ಲೂಕಿನ ಪೌಳಿದೊಡ್ಡಿಯಲ್ಲಿ ಆರಂಭಿಸಿರುವ ಎಂಆರ್‌ಎಫ್ ಘಟಕ
ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ
ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ

ಅಂಕಿಅಂಶ ₹2.50 ಕೋಟಿ ಎಂ.ಆರ್‌.ಎಫ್ ಘಟಕ ನಿರ್ಮಾಣದ ವೆಚ್ಚ 31 ಗ್ರಾ.ಪಂ.ಗಳಿಂದ ಎಂಆರ್‌ಎಫ್‌ಗೆ ಬರಲಿರುವ ತ್ಯಾಜ್ಯ 30 ಸ್ಥಳೀಯರಿಗೆ ಘಟಕದಲ್ಲಿ ಸಿಗುವ ಉದ್ಯೋಗ

ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಸಹ ಮತ್ತೊಂದು ಎಂ.ಆರ್‌.ಎಫ್ ಘಟಕ ಸ್ಥಾಪನೆಗೆ ತಾಂತ್ರಿಕ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಅಲ್ಲಿಯೂ ಘಟನ ನಿರ್ಮಾಣ ಶುರುವಾಗಲಿದೆ – ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ

ಕಾರ್ಯಾನಿರ್ವಹಣೆ ಹೇಗೆ? ‘ಹಸಿ ತ್ಯಾಜ್ಯ ಹೊರತುಪಡಿಸಿ ಎಲ್ಲ ತರಹದ ಪ್ಲಾಸ್ಟಿಕ್ ಪೇಪರ್ ಪ್ಲಾಸ್ಟಿಕ್ ವಸ್ತುಗಳು ರಟ್ಟು ಚೀಲ ಬಾಟಲಿ ಗಾಜು ಕಬ್ಬಿಣ ಇ–ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗುತ್ತದೆ. ವಿಂಗಡಣೆ ಕೆಲಸಕ್ಕೆ ಪೂರಕವಾಗಿ ಕ್ವನೆಯರ್ ಬೆಲ್ಟ್‌ ಬೆಯ್ಲಿಂಗ್ ಮಷಿನ್ (ಬಂಡಲ್ ಮಾಡಲು) ಸೋರ್ ಕ್ಲೀನಿಂಗ್ ಯಂತ್ರ ವೇ ಬ್ರಿಡ್ಜ್ ಸ್ಟ್ಯಾಕರ್ (ಲೋಡ್ ಲಿಫ್ಟಿಂಗ್) ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ರಿಸೋರ್ಸ್‌ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವ್ಯವಸ್ಥಾಪಕ ಲವಿತ್ ಹೇಳಿದರು. ‘ವಿಂಗಡಣೆ ಮತ್ತು ಸಂಸ್ಕರಣೆ ಕಾರ್ಯಕ್ಕೆ ಯಂತ್ರಗಳ ಜೊತೆಗೆ ಮಾನವ ಸಂಪನ್ಮೂಲವನ್ನು ಸಹ ಬಳಸಿಕೊಳ್ಳಲಾಗುತ್ತದೆ. ವಿಂಗಡಿತ ಕಸವನ್ನು ಬೆಯ್ಲಿಂಗ್ ಮಷಿನ್‌ನಲ್ಲಿ ಹಾಕಿ ಬಂಡಲ್‌ ಮಾಡಿ ಜೋಡಿಸಲಾಗುತ್ತದೆ. ತ್ಯಾಜ್ಯ ಮರುಬಳಕೆ ಮಾಡುವ ಕಂಪನಿಯವರು ಬಂದು ಅವುಗಳನ್ನು ತೆಗೆದುಕೊಂಡು ಹೋಗುತ್ತಾರೆ’ ಎಂದು ತಿಳಿಸಿದರು.

ಖಾಸಗಿ ಸಂಸ್ಥೆಗೆ ನಿರ್ವಹಣೆ ಹೊಣೆ ‘ಎಂಆರ್‌ಎಫ್ ಘಟಕದ ನಿರ್ವಹಣೆ ಮತ್ತು ಆರ್ಥಿಕ ಹೊರೆಯ ಭಾರ ನಮಗಿಲ್ಲ. ತ್ಯಾಜ್ಯ ಕೊಡುವುದಷ್ಟೇ ನಮ್ಮ ಕೆಲಸ. ಮಂಗಳ ರಿಸೋರ್ಸ್‌ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಘಟಕದ ನಿರ್ವಹಣೆ ಮಾಡುತ್ತಿದೆ. ಕಾರ್ಮಿಕರಿಗೆ ಸಂಬಳವನ್ನೂ ಸಂಸ್ಥೆಯೇ ಪಾವತಿಸುತ್ತಿದೆ. ನಾವು ಮೇಲ್ವಿಚಾರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ನಗರಸಭೆ ಮತ್ತು ಮತ್ತಷ್ಟು ಪಂಚಾಯಿತಿಗಳ ತ್ಯಾಜ್ಯವನ್ನು ಘಟಕಕ್ಕೆ ಕಳಿಸಿ ಸಂಸ್ಕರಣೆ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT