ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಗೆ ಹಾನಿ: ಕೆರೆ ಸಂರಕ್ಷಣೆಗೆ ಒತ್ತು ನೀಡಲು ಸಚಿವ ಅಶ್ವತ್ಥನಾರಾಯಣ ತಾಕೀತು

Last Updated 10 ಆಗಸ್ಟ್ 2022, 4:16 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ - ಬಾಣಗಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆಯು ಕಳಪೆ ಕಾಮಗಾರಿಯಿಂದ ಕೇವಲ ಒಂದೂವರೆ ವರ್ಷದಲ್ಲಿಯೇ ಕುಸಿದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಾಕೀತು ಮಾಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕುಸಿದಿರುವ ಸೇತುವೆಗಳ ಮರು ನಿರ್ಮಾಣಕ್ಕೆ ಸಾಕಷ್ಟು ಸಮಯ ಬೇಕಿರುವ ಕಾರಣ ಜನರ ಅನುಕೂಲಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಎಂದು ನಿರ್ದೇಶನ
ನೀಡಿದರು.

ಕೆರೆ ರಕ್ಷಿಸಿ: ಯಾವುದೇ ಕೆರೆಗಳೂ ಮಳೆಯಿಂದ ಹಾನಿ ಆಗಿಲ್ಲ ಎನ್ನುವ ಅಧಿಕಾರಿಗಳ ಮಾಹಿತಿಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು ‘ ಮಾಗಡಿಯ ಹಂಚೀಕುಪ್ಪೆ ಹಾಗೂ ಮತ್ತೊಂದು ಕೆರೆ ಮಳೆಯಿಂದ ಹಾನಿಯಾಗಿರುವುದನ್ನು ನಾನೇ ಕಂಡಿದ್ದೇನೆ. ಆದರೆ ಅಧಿಕಾರಿಗಳು ಯಾವುದೇ ಕೆರೆಗೂ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಮಾಗಡಿಯಲ್ಲಿ ಪಿಡಿಒ ಮತ್ತು ಇಒ ಏನು ಹೇಳು ಬೇಕು ಎನ್ನುವ ಗೊಂದಲದಲ್ಲಿಯೇ ಇದ್ದರು. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

‘ಕೆರೆ ಯಾವ ಇಲಾಖೆಗೆ ಸೇರಿದ್ದಾದರೂ ಆಗಲಿ, ಸಾರ್ವಜನಿಕರ ಹಿತ ದೃಷ್ಟಿ ಅವುಗಳ ರಕ್ಷಣೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಪಂ ಪಿಡಿಒಗಳು ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸುಮಾರು 25 ವರ್ಷಗಳ ನಂತರ ಉತ್ತಮ ಮಳೆಯಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ಕೆರೆ ಯಾವುದೇ ಇಲಾಖೆಗೆ ಸೇರಿದ್ದರೂ ಕೂಡಲೇ ಪರಿಶೀಲನೆ ನಡೆಸಿ ದುರಸ್ಥಿ ಇದ್ದರೆ ತಾತ್ಕಾಲಿಕ ಕ್ರಮ ಕೈಗೊಂಡು ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿ. ಇದರಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ಉಳಿಸುವ ಜತೆಗೆ, ಪ್ರಾಣ ಹಾನಿ ತಡೆಗಟ್ಟಬಹುದು ಎಂದು
ಹೇಳಿದರು.

ಕೆರೆ- ಕಾಲುವೆ ಪಕ್ಕ ಇರುವ ಮನೆಗಳನ್ನು, ಶಿಥಿಲಾವಸ್ಥೆಯ ಮನೆಗಳನ್ನು ಗುರುತಿಸಿ ಅವರಿಗೆ ಸೂಚನೆ ಕೊಟ್ಟು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಮಾಡಿ. ಸೂಚನೆ ಕೊಟ್ಟು ಬೇರೆಡೆಗೆ ತೆರವುಗೊಳಿಸುವ ಕೆಲಸ ಮಾಡಿ. ಇದರಿಂದ ಸಾವು ನೋವು ತಡೆಯಬಹುದು ಎಂದು ಸಚಿವರು ಸಲಹೆ ನಿಡಿದರು.

ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಮಳೆ ಹೆಚ್ಚು ಇದ್ದಾಗ ಜಲಾಶಯಗಳಿಂದ ನೀರು ಬಿಡುವಾಗ ಮುಂಜಾಗ್ರತೆ ವಹಿಸಿ ನೀರು ಹರಿಸಿ ಎಂದರು.

ತಕ್ಷಣವೇ ಪರಿಹಾರ ಕೊಡಿ: ಮಳೆ ಬಾದಿತ ಪ್ರದೇಶದಲ್ಲಿ ನೊಂದವರಿಗೆ ತಕ್ಷಣವೇ ಪರಿಹಾರ ಕೊಡುವ ಕೆಲಸ ಮಾಡಿ. ಯಾರಿಗೂ ತೊಂದರೆ ಆಗಬಾರದು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಈ ಬಾರಿ ಇಬ್ಬರು ಮಕ್ಕಳು ಸಾವನ್ನಪಿದ್ದು, 8 ಜಾನುವಾರು ಮೃತಪಟ್ಟಿವೆ. 179 ಮನೆಗಳು, 136 ಹೆಕ್ಟೇರ್ ಕೃಷಿ, 212 ಹೆಕ್ಟೇರ್ ತೋಟಗಾರಿಕೆ ಬೆಳೆ, 45 ಕಿ.ಮೀ ರಾಜ್ಯ ಹೆದ್ದಾರಿ, 68 ಕಿ.ಮೀ ಪ್ರಮುಖ ಜಿಲ್ಲಾ ಹೆದ್ದಾರಿ, 236 ಕಿ.ಮೀ ಗ್ರಾಮೀಣ ರಸ್ತೆ ಹಾನಿಗೊಳಗಾಗಿವೆ. 107 ಶಾಲಾ ಕಟ್ಟಡಗಳು, 54 ಅಂಗನವಾಡಿಗಳು ಸಹ ಮಳೆಯಿಂದ ಹಾನಿಗೊಳಗಾಗಿವೆ. ಇವುಗಳಲ್ಲಿ ಈಗಾಗಲೇ ಸಾಕಷ್ಟು ಪರಿಹಾರ ನೀಡಲಾಗಿದ್ದು, ಉಳಿಕೆಗೂ ಪರಿಹಾರ ನೀಡಬೇಕು. ಇರುವ ಅನುದಾನ ಹಾಗೂ ಇತರೆ ಅನುದಾನಗಳನ್ನು ಬಳಕೆ ಮಾಡಿಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅವಿನಾಶ್ ಮೆನನ್‌ ರಾಜೇಂದ್ರನ್, ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT